ದಕ್ಷಿಣ ಕನ್ನಡ ಮೂಲದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ಸಯೈದ್ ಅಬ್ದುಲ್ ನಜೀರ್ ಆಂಧ್ರ ಪ್ರದೇಶ ರಾಜ್ಯಪಾಲರಾಗಿ ನೇಮಕ
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸೈಯದ್ ಅಬ್ದುಲ್ ನಜೀರ್ (Ret Judge Sayed Abdul Nazeer) ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ. ಇಂದು ಬಿಡುಗಡೆಯಾದ 12 ನೂತನ ರಾಜ್ಯಪಾಲ ಮತ್ತು ಲೆಫ್ಟಿನೆಂಟ್ ಗವರ್ನರ್ಗಳ ಪಟ್ಟಿಯಲ್ಲಿ ಅಬ್ದುಲ್ ನಜೀರ್ ಹೆಸರೂ ಇದೆ. ದಕ್ಷಿಣಕನ್ನಡ ಜಿಲ್ಲೆಯವರಾದ ಅಬ್ದುಲ್ ನಜೀರ್ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಕಳೆದ ತಿಂಗಳು ಜನವರಿ 4ರಂದು ನಿವೃತ್ತರಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದಲ್ಲಿ ಹುಟ್ಟಿದ ಎಸ್ ಅಬ್ದುಲ್ ನಾಜಿರ್, ಮಹಾವೀರ ಕಾಲೇಜಿನಲ್ಲಿ ಬಿಕಾಂ ಮತ್ತು ಎಸ್ಡಿಎಂ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು. ನಂತರ ಕರ್ನಾಟಕ ಹೈಕೋರ್ಟ್ ವಕೀಲರಾಗಿ ನೇಮಕವಾದರು. 2003ರಲ್ಲಿ ಅದೇ ಹೈಕೋರ್ಟ್ನಲ್ಲಿ ಹೆಚ್ಚುವರಿ ನ್ಯಾಯಾಧೀಶರು ಮತ್ತು ನಂತರ ಖಾಯಂ ನ್ಯಾಯಾಧೀಶರಾಗಿ ನೇಮಕವಾದರು. 2017ರ ಫೆಬ್ರುವರಿಯಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ವೇಳೆಯೇ 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗದೇ ನೇರವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾದ ಮೂರನೇ ಜಡ್ಜ್ ಅವರಾಗಿದ್ದಾರೆ.
2017ರಲ್ಲಿ ಸುಪ್ರೀಂಕೋರ್ಟ್ ಜಡ್ಜ್ ಆಗಿ ನೇಮಕವಾದ ಬಳಿಕ ಅಬ್ದುಲ್ ನಜೀರ್ ಕೆಲ ಮಹತ್ವದ ಪ್ರಕರಣಗಳ ತೀರ್ಪು ನೀಡಿದ ನ್ಯಾಯಪೀಠಗಳಲ್ಲಿ ಭಾಗಿಯಾಗಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ, 2017 ರಲ್ಲಿ ವಿವಾದಾತ್ಮಕ ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆ ನಡೆಸಿದ ಬಹು-ಧರ್ಮೀಯ ಪೀಠದಲ್ಲಿ ಅಬ್ದುಲ್ ನಜೀರ್ ಏಕೈಕ ಮುಸ್ಲಿಂ ನ್ಯಾಯಾಧೀಶರಾಗಿದ್ದರು. ಇದರ ಕುರಿತು ವಿಚಾರಣೆ ನಡೆಸಿದ ಪೀಠವು ಮುಸ್ಲಿಂ ಸಮುದಾಯದಲ್ಲಿ ವಿವಾಹ ಮತ್ತು ವಿಚ್ಛೇದನವನ್ನು ನಿಯಂತ್ರಿಸಲು ಆರು ತಿಂಗಳಲ್ಲಿ ಕಾನೂನನ್ನು ತರಲು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಸರ್ಕಾರವು ತ್ರಿವಳಿ ತಲಾಖ್ಗೆ ಸಂಬಂಧಿಸಿದಂತೆ ಕಾನೂನನ್ನು ರೂಪಿಸುವವರೆಗೆ, ಗಂಡಂದಿರು ತಮ್ಮ ಹೆಂಡತಿಯರಿಗೆ ತ್ರಿವಳಿ ತಲಾಖ್ ನೀಡಲು ತಡೆಯಾಜ್ಞೆ ಇರುತ್ತದೆ ಎಂದು ಹೇಳಿತ್ತು. ಅಲ್ಲದೆ ಈ ಐತಿಹಾಸಿಕ ತೀರ್ಪಿನಲ್ಲಿ ನ್ಯಾಯಪೀಠವು 3:2 ಬಹುಮತದಿಂದ ತ್ರಿವಳಿ ತಲಾಖ್ ನ್ನು ಅಸಿಂಧುಗೊಳಿಸಿತ್ತು.
ಇನ್ನು ದೇಶ ಬಹುಕಾಲದಿಂದ ಕಾತರದಿಂದ ನೋಡುತ್ತಿದ್ದ ಅಯೋಧ್ಯೆ ಜಮೀನು ವಿವಾದದ ತೀರ್ಪು ಪ್ರಕಟಿಸಿದ್ದ ಪಂಚ ಪೀಠದ ಐವರು ನ್ಯಾಯಮೂರ್ತಿಗಳಲ್ಲಿ ಇವರೂ ಒಬ್ಬರಾಗಿದ್ದರು. ಹಾಗೂ ಅಬ್ದುಲ್ ನಜೀರ್ ಅದರಲ್ಲಿ ಏಕೈಕ ಮುಸ್ಲಿಮರು. ಇದರಲ್ಲಿ ಅವರು ವಿವಾದಿತ ಪ್ರದೇಶದಲ್ಲಿ ಹಿಂದೂ ರಚನೆಯ ಅಸ್ತಿತ್ವದ ಬಗ್ಗೆ ಹೇಳಿಕೆ ನೀಡಿದ ASI ವರದಿಯನ್ನು ಎತ್ತಿಹಿಡಿದರು . ಅಲ್ಲದೆ ರಾಮಮಂದಿರದ ಪರವಾಗಿ ತೀರ್ಪು ನೀಡಿ ಅಂತಿಮವಾಗಿ 5-0 ತೀರ್ಪಿನೊಂದಿಗೆ ವರ್ಷಗಳ ವಿವಾದವನ್ನು ಕೊನೆಗೊಳಿಸಿದರು. ಸದ್ಯ ಇಂತಹ ಮಹಾನ್ ವ್ಯಕ್ತಿಯನ್ನು ರಾಷ್ಟ್ರಪತಿಗಳು ಮಧ್ಯಪ್ರದೇಶದ ರಾಜ್ಯಪಾಲರಾಗಿ ನೇಮಕ ಮಾಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಇತರ ರಾಜ್ಯಗಳ ರಾಜ್ಯಪಾಲರ ಪಟ್ಟಿಯನ್ನು ಗಮನಿಸುವುದಾದರೆ, ಅರುಣಾಚಲಪ್ರದೇಶ-ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್,ಸಿಕ್ಕಿಂ ರಾಜ್ಯಪಾಲ-ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಜಾರ್ಖಂಡ್ ರಾಜ್ಯಪಾಲ-ಸಿ.ಪಿ. ರಾಧಾಕೃಷ್ಣನ್, ಹಿಮಾಚಲಪ್ರದೇಶ ರಾಜ್ಯಪಾಲ-ಶಿವಪ್ರತಾಪ್ ಶುಕ್ಲಾ, ಅಸ್ಸಾಂ ರಾಜ್ಯಪಾಲ- ಗುಲಾಬ್ ಚಂದ್ ಕಟಾರಿಯಾ, ಛತ್ತೀಸ್ಗಡ ರಾಜ್ಯಪಾಲ- ಬಿಸ್ವ ಭೂಸನ್ ಹರಿಚಂದನ್, ಮಣಿಪುರ ರಾಜ್ಯಪಾಲ- ಅನುಸೂಯ ಊಕ್ಯೆ, ನಾಗಾಲೆಂಡ್ ರಾಜ್ಯಪಾಲ- ಲಾ ಗಣೇಸನ್, ಮೇಘಾಲಯ ರಾಜ್ಯಪಾಲ- ಫಾಗು ಚೌಹಾಣ್,
ಬಿಹಾರ ರಾಜ್ಯಪಾಲ- ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಮಹಾರಾಷ್ಟ್ರ ರಾಜ್ಯಪಾಲ- ರಮೇಶ್ ಬೈಸ್ ಆಯ್ಕೆ ಆಗಿದ್ದಾರೆ.