ಕಾಫಿ ನಾಡಿಗೆ ಇಂದಿರಾ ಕೊಟ್ಟ ಭರವಸೆ ರಾಜೀವ್, ಸೋನಿಯಾ ಬಂದರೂ ನೆರವೇರಲಿಲ್ಲ! ಎಲ್ಲವನ್ನೂ ಈಡೇರಿಸಿದ್ದು ಮೋದಿ ಎಂದ ತೇಜಸ್ವಿ!

ದೆಹಲಿಯಲ್ಲಿ ಲೋಕಸಭಾ ಅಧಿವೇಶನ ನಡೆಯುತ್ತಿದೆ. ಸದನದ ಎರಡೂ ಮನೆಗಳಲ್ಲೂ ಈ ಬಾರಿ ಕನ್ನಡದ ಚನಾಯಿತ ನಾಯಕರು ಕನ್ನಡದಲ್ಲೇ ಭಾಷಣ ಮಾಡಿ, ಮೋದಿ ಸರ್ಕಾರವನ್ನು ಹಾಡಿ ಹೊಗಳುವುದರೊಂದಿಗೆ ಪ್ರತಿಪಕ್ಷವಾದ ಕಾಂಗ್ರೆಸ್ಸಿನ ಕಾಲೆಳೆಯುತ್ತಿದ್ದಾರೆ. ಇಂದು ಕೂಡ ಕನ್ನಡದಲ್ಲೇ ಮಾತನಾಡಿದ ತೇಜಸ್ವಿ ಸೂರ್ಯ ‘ಇಂದಿರಾಗಾಂಧಿ ಮುಂದಿಟ್ಟ ಬೇಡಿಕೆ ಮೋದಿ ಈಡೇರಿಸಿದ್ದಾರೆ, ಇಂದಿರಾ ಗಾಂಧಿ ಭರವಸೆ ರಾಜೀವ್ ಸೋನಿಯಾ ಬಂದರೂ ಆಗಲಿಲ್ಲ,ಮೋದಿಯಿಂದ ಈಡೇರಿದೆ’ ಎಂದು ಬಜೆಟ್ ಮೇಲೆ ಭಾಷಣ ಮಾಡುತ್ತಾ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಗತಿ ಪರ ಬಜೆಟ್ ಮಂಡಿಸಲಾಗಿದೆ. ಅಮೃತ್ ಕಾಲದಲ್ಲಿ ದೇಶದ ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದೆ. ಕಳೆದ 8-9 ವರ್ಷಗಳಿಂದ ಕರ್ನಾಟಕಕ್ಕೆ ಹಲವು ಯೋಜನೆಗಳು ಮೋದಿ ಸರ್ಕಾರದಿಂದ ಸಿಕ್ಕಿದೆ. ಅದಕ್ಕಾಗಿ ನಾನು ಕರ್ನಾಟಕದ ಜನರ ಪರವಾಗಿ ಕೃತ್ಯಜ್ಞತೆ ಸಲ್ಲಿಸುತ್ತೇನೆ ಎಂದರು. ಕರ್ನಾಟಕದ ಅಭಿವೃದ್ಧಿಗೆ ನೂರು ರೂಪಾಯಿ ನೀಡಿದರೆ, ದೇಶದ ಅಭಿವೃದ್ಧಿಗೆ ಕರ್ನಾಟಕ ಸಾವಿರ ರೂಪಾಯಿ ನೀಡಲಿದೆ.  ಇದು ಕರ್ನಾಟಕದ ತಾಕತ್ತು ಎಂದರು. 70 ವರ್ಷಗಳಲ್ಲಿ ಅಗದ ಅಭಿವೃದ್ಧಿ ಕಾರ್ಯಗಳು ಎಂಟು ವರ್ಷದಲ್ಲಿ ಸಾಧ್ಯವಾಗಿವೆ ಎಂದು ಹೇಳಿದರು.

ಚಿಕ್ಕಮಗಳೂರಿಗೆ ಚುನಾವಣೆ ಸ್ಪರ್ಧಿಸಲು ಇಂದಿರಾಗಾಂಧಿ ಬಂದಾಗ ರೈಲ್ವೆ ಬ್ರಾಡ್‌ಗೇಜ್, ಡಬ್ಲಿಂಗ್ ಭರವಸೆ ನೀಡಿದ್ದರು ಆದರೆ ಇಂದಿರಾ, ರಾಜೀವ್, ಸೋನಿಯ ಗಾಂಧಿ ಬಂದು ಹೋದ್ರು ಅಭಿವೃದ್ಧಿಯಾಗಲಿಲ್ಲ 30-40 ವರ್ಷ ಕಂಬಿನೇ ಇಲ್ಲದೇ ಕಾಂಗ್ರೆಸ್ಸಿಗರು ರೈಲು ಬಿಟ್ಟರು ಎಂದು ಕುಟುಕಿದರು. ನರೇಂದ್ರ ಮೋದಿ ಅವರಿಂದ ಕರ್ನಾಟಕ ಸರ್ವಾಂಗೀಣ ಪ್ರಗತಿಯಾಗಿದೆ ಕಳೆದ ಎಂಟು ವರ್ಷದಲ್ಲಿ 4000 ಕಿಲೋ ಮೀಟರ್ ಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ್ದು, 1 ಲಕ್ಷ 16 ಸಾವಿರ ಕೋಟಿ ಹಣ ನೀಡಲಾಗಿದೆ. ಮೋದಿ ಸರ್ಕಾರದ ಅವಧಿಯಲ್ಲಿ ರೈಲ್ವೆ ವಲಯದಲ್ಲೂ ಸಾಕಷ್ಟು ಕ್ರಾಂತಿಯಾಗಿದೆ. ಯುಪಿಎ ಸರ್ಕಾರಕ್ಕಿಂತ ಎರಡು ಪಟ್ಟು ಡಬ್ಲಿಂಗ್ ಕೆಲಸ ನಮ್ಮ ಸರ್ಕಾರದಲ್ಲಿ ಆಗಿದೆ. ಈ ವರ್ಷ 7600 ಕೋಟಿ ರೂಪಾಯಿ ಕರ್ನಾಟಕಕ್ಕೆ ನೀಡಿದೆ. 55 ರೈಲ್ವೆ ನಿಲ್ದಾಣಗಳನ್ನು ವಿಶ್ವ ದರ್ಜೆಗೆ ಏರಿಸಲಾಗುತ್ತಿದೆ ಎಂದರು.

ನೀರಿನ ವಿಚಾರದಲ್ಲಿ ಮೋದಿ ಸರ್ಕಾರ ದೊಡ್ಡ ಕೊಡುಗೆ ನೀಡಿದೆ ಆಲಮಟ್ಟಿ ಡ್ಯಾಂ ಮಟ್ಟ ಏರಿಸಲು ವಾಜಪೇಯಿ ಸರ್ಕಾರ ಅನುಮತಿ ನೀಡಿತ್ತು ಈಗ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಮೋದಿ ನೀಡಿದ್ದಾರೆ, ಮಹದಾಯಿ ಯೋಜನೆಗೆ ಡಿಪಿಆರ್ ಗೆ ಅನುಮತಿ ನೀಡಿದೆ. ಜಲ ಜೀವನ್ ಮಿಷನ್ ನಡಿ ಮನೆ ಮನೆಗೂ ನೀರು ನೀಡುವ ಕೆಲಸ ಮಾಡುತ್ತಿದೆ‌. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 24 ಲಕ್ಷ ಮನೆಗಳಿಗೆ ಮಾತ್ರ ನಲ್ಲಿಯಲ್ಲಿ ನೀರು ಬರುತ್ತಿತ್ತು ಇಂದು 55 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿಯಿಂದ ನೀರು ಬರುತ್ತಿದೆ ಎಂದರು.

ಬೆಂಗಳೂರಿಗೆ ಸಬ್ ಅರ್ಬನ್ ರೈಲ್ವೆ ಯೋಜನೆ ನಾಲ್ಕು ದಶಕಗಳಿಂದ   ಬಾಕಿ ಇತ್ತು, ಮೋದಿ ಅವರು 40 ತಿಂಗಳಲ್ಲಿ ಯೋಜನೆ ಪೂರ್ಣ ಮಾಡುವ ಆಶ್ವಾಸನೆ ನೀಡಿದ್ದರೆ ಅದಕ್ಕೆ ಹಣಕಾಸಿನ ನೆರವು ನೀಡಲಾಗುತ್ತಿದೆ. ಟ್ರಾಫಿಕ್ ಸಮಸ್ಯೆ ಸರಿ ಮಾಡಲು ಮೆಟ್ರೋಗೆ ಆದ್ಯತೆ ನೀಡಿದೆ ಎಂಟು ವರ್ಷದ ಹಿಂದೆ ಎಂಟು ಕಿಮೀ ಮೆಟ್ರೋ ಮಾರ್ಗ ಇತ್ತು ಈಗ 56 ಕಿಮೀ ಮಾರ್ಗ ಹೊಂದಿದೆ ಶೀಘ್ರದಲ್ಲಿ ಏರ್ಪೊಟ್ ಗೂ ಸಂಪರ್ಕ ನೀಡಲಾಗುತ್ತಿದೆ ಎಂದು ವಿವರಿಸಿದರು.

ಉಡಾನ್ ಯೋಜನೆ ಅಡಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ. ಪ್ರತಿ 200-300 ಕಿಮೀ ಗೆ ಒಂದರಂತೆ ಒಂಭತ್ತು ವಿಮಾನ ನಿಲ್ದಾಣಗಳನ್ನು ಮೋದಿ ಸರ್ಕಾರ ನೀಡಿದೆ. ಕರಾವಳಿ ಪ್ರದೇಶದಲ್ಲಿ ಬಂದರುಗಳನ್ನು ಅಭಿವೃದ್ಧಿ ಮಾಡಿದೆ. ಮಂಗಳೂರು ಬಂದರು ಅಭಿವೃದ್ಧಿಗೆ 3500 ಕೋಟಿ ರೂಪಾಯಿ ನೀಡಿದೆ. ಏಷ್ಯಾದಲ್ಲಿ ಅತಿ ದೊಡ್ಡದು ಎನಿಸಿಕೊಂಡಿರುವ ಐಎನ್‌ಎಸ್ ಕಂದಬ ನೌಕಾ ನೆಲೆ ಪುನರುಜ್ಜೀವನಕ್ಕೆ 12,000 ಕೋಟಿ ರೂಪಾಯಿ ಅಭಿವೃದ್ಧಿಗೆ ನೀಡಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಮೋದಿ ಸರ್ಕಾರ ನೀಡಿದೆ, 17,000 ಕೋಟಿ ರೂಪಾಯಿ ಬೆಂಗಳೂರು ಹೊರ ವಲಯದ ರಿಂಗ್ ರಸ್ತೆಗೆ ನೀಡಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ಜಿಲ್ಲೆಗಳ ಅಭಿವೃದ್ಧಿಗಾಗಿ ಧಾರವಾಡಕ್ಕೆ ಐಐಟಿ, ರಾಯಚೂರಿಗೆ ಐಐಐಟಿ,  ತುಮಕೂರಿಗೆ ಹೆಲಿಕಾಪ್ಟರ್ ಉತ್ಪಾದನಾ ಘಟಕ, ಟ್ವಾಯ್ ಕ್ಲಸ್ಟರ್, ಟೆಕ್ಸಟೈಲ್ ಕ್ಲಸ್ಟರ್ ಗಳನ್ನು ನಮ್ಮ ಸರ್ಕಾರ ನೀಡಿದೆ. ದೇಶದ ಮೊಲದ ಸೆಮಿ ಕಂಡಕ್ಟರ್ ಫ್ಯಾಬ್ ಯುನಿಟ್ ಅನ್ನು ಮೈಸೂರಿಗೆ ನೀಡಲಾಗಿದೆ ಎಂದು ವಿವರಿಸಿದರು.

ಕಾನೂನು ಸುರಕ್ಷತೆಗಾಗಿ ಪಿಎಫ್‌ಐ ಅನ್ನು ಬ್ಯಾನ್ ಮಾಡುವ ಮೂಲಕ ರಾಜ್ಯದ ಜನರಿಗೆ ಸುರಕ್ಷತೆ ನೀಡಿದ್ದಾರೆ. ಮೋದಿ ಅವರ 5 ಟ್ರಿಲಿಯನ್ ಆರ್ಥಿಕತೆ ಗುರಿಗೆ ಕರ್ನಾಟಕ ಒಂದೇ 1 ಟ್ರಿಲಿಯನ್‌ ಕೊಡುಗೆ ನೀಡುತ್ತಿದೆ. ಕರ್ನಾಟಕದ ಅಭಿವೃದ್ಧಿಗೆ ನೂರು ರೂಪಾಯಿ ನೀಡಿದರೆ ಕರ್ನಾಟಕ ಒಂದು ಸಾವಿರ ಆದಾಯ ದೇಶಕ್ಕೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ತೇಜಸ್ವಿ ಸೂರ್ಯ ಸಂಸದರ ಗಮನ ಸೆಳೆದರು. 

Leave A Reply

Your email address will not be published.