ವಿಧಾನಸಭಾ ಚುನಾವಣೆ ಕರಾವಳಿಯಲ್ಲಿ 4 ಸ್ಥಾನಗಳು ಕೈ ಪಾಲಾಗುವ ಸಮೀಕ್ಷೆ | ಇಂದು ಅಮಿತ್ ಶಾ ನೇತೃತ್ವದ ಸಭೆಯಲ್ಲಿ ಚರ್ಚೆ

ಕರಾವಳಿಯ 12 ಕ್ಷೇತ್ರಗಳ ಪೈಕಿ 5 ಸ್ಥಾನಗಳು ಕಾಂಗ್ರೆಸ್ ಪಾಲಾಗುವ ಸಮೀಕ್ಷೆಯ ಹಿನ್ನಲೆಯಲ್ಲಿ ಬಿಜೆಪಿಯ ಚುನಾವಣಾ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ಮಂಗಳೂರಿನಲ್ಲಿ ನಡೆಯಲಿದೆ.

ದಕ್ಷಿಣ ಕನ್ನಡದ 8 ಕ್ಷೇತ್ರಗಳ ಪೈಕಿ 4 ಹಾಗೂ ಉಡುಪಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ 1 ಕ್ಷೇತ್ರ ಕಾಂಗ್ರೆಸ್ ಪಾಲಾಗುವ ಸಾಧ್ಯತೆಗಳಿವೆ ಎನ್ನುವ ಆಂತರಿಕ ಸಮೀಕ್ಷೆ ಬಿಜೆಪಿಗೆ ನಡುಕ ಹುಟ್ಟಿಸಿದೆ.

ಈ ನಿಟ್ಟಿನಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಹಾಗೂ ಈಶ್ವರಮಂಗಲದ ಅಮರಗಿರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅಮಿತ್ ಶಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ಮಹತ್ವದ ಸಭೆ ನಡೆಯಲಿದೆ.

ರಾಜ್ಯದಲ್ಲಿ ಶತಾಯಗತಾಯ ಮತ್ತೆ ಅಧಿಕಾರದ ಗದ್ದುಗೆ ಏರಬೇಕೆಂಬ ಬಿಜೆಪಿಯ ಪ್ರಯತ್ನಕ್ಕೆ ಕರಾವಳಿಯ ಸಮೀಕ್ಷೆ ಆತಂಕ ಉಂಟುಮಾಡಿದೆ.

ಹಿಂದುತ್ವ ಹಾಗೂ ಬಿಜೆಪಿಯ ಶಕ್ತಿ ಕೇಂದ್ರವಾಗಿರುವ ಕರಾವಳಿಯಲ್ಲೂ ಬಿಜೆಪಿ ಗಳಿಸುವ ಸ್ಥಾನಗಳಲ್ಲಿ ಇಳಿಮುಖವಾಗುವ ಆತಂಕದೊಂದಿಗೆ ಕೆಲವೆಡೆ ಸ್ವಪಕ್ಷೀಯರಿಂದಲೇ ಪಕ್ಷದ ನಾಯಕರ ವಿರುದ್ದ ಮುನಿಸು ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

1983ರವರೆಗೆ ಕಾಂಗ್ರೆಸ್‌, ಜನತಾ ಪಕ್ಷ ಹಾಗೂ ಪಕ್ಷೇತರ ಮೂರೂ ಮಾದರಿಯ ಪ್ರಯೋಗ ನಡೆದಿತ್ತು. ಆದರೆ 1983ರ ಬಳಿಕ ನಿಧಾನವಾಗಿ ಜಿಲ್ಲೆಯ ಕ್ಷೇತ್ರಗಳು ಬಿಜೆಪಿ ಯತ್ತ ವಾಲತೊಡಗಿದವು. 2018ರ ಇತ್ತೀಚಿನ ಚುನಾವ ಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ ಏಳು ಬಿಜೆಪಿ ಪಾಲಾಗಿವೆ.

ದಕ್ಷಿಣ ಕನ್ನಡಲದಲ್ಲಿ 1952ರಲ್ಲಿ ಇದ್ದ ವಿಧಾನ ಸಭಾ ಕ್ಷೇತ್ರಗಳೆಂದರೆ ಪುತ್ತೂರು, ಪಾಣೆಮಂಗಳೂರು – ಬಂಟ್ವಾಳ, ಮಂಗಳೂರು-1 (ಎಂದರೆ ಈಗಿನ ಮಂಗ ಳೂರು ನಗರ ದಕ್ಷಿಣ), ಮೂಲ್ಕಿ (ಈಗಿನ ಮಂಗಳೂರು ನಗರ ಉತ್ತರ). ಬೆಳ್ತಂಗಡಿ ಹಾಗೂ ಮಂಗಳೂರು 2 (ಈಗಿನ ಮಂಗಳೂರು) ಎಂಬುದು ಸೇರ್ಪಡೆಯಾದದ್ದು 1957ರಲ್ಲಿ. ಸುಳ್ಯ ಹಾಗೂ ಮೂಡುಬಿದಿರೆ 1962ರಲ್ಲಿ, ವಿಟ್ಲ 1978ರಲ್ಲಿ ಅಸ್ತಿತ್ವಕ್ಕೆ ಬಂದವು. ಹೀಗೆ 2008ರ ವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂಬತ್ತು ಕ್ಷೇತ್ರಗಳಿದ್ದವು. 2008ರಲ್ಲಿ ಕ್ಷೇತ್ರ ಮತ್ತೆ ಪುನರ್‌ ವಿಂಗಡಣೆಯಾದಾಗ ವಿಟ್ಲ ಪ್ರತ್ಯೇಕ ಕ್ಷೇತ್ರವಾಗಿ ಉಳಿಯಲಿಲ್ಲ. ಬೆಳ್ತಂಗಡಿ, ಪುತ್ತೂರು, ಸುಳ್ಯ ಹಾಗೆಯೇ ಉಳಿದವು. ಹೆಸರು ಬದಲಾಗಲಿಲ್ಲ.

2008 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಿದಾಗ 14 ಸ್ಥಾನಗಳನ್ನು ಗಳಿಸಿತ್ತು ಎಂಬುದನ್ನು ಗಮನಿಸಬಹುದು, ಆದರೆ 2013 ರಲ್ಲಿ ಪಕ್ಷದಲ್ಲಿನ ವಿಭಜನೆಯಿಂದಾಗಿ ಅದು ತೀವ್ರವಾಗಿ ಐದಕ್ಕೆ ಕುಸಿಯಿತು.

2013ರಲ್ಲಿ ಕರಾವಳಿಯಲ್ಲಿ ಕೇವಲ 2 ಸ್ಥಾನ ಮಾತ್ರ ಬಿಜೆಪಿ ಪಾಲಾಗಿತ್ತು.2018ರ ಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿತ್ತು.

ಆಡ್ವಾಣಿಯವರಿಂದ ಬಿಜೆಪಿಯ ಭದ್ರಕೋಟೆ ಎಂದು ಕರೆಯಲ್ಪಟ್ಟ ಸುಳ್ಯ ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿ ಬದಲಾವಣೆಯ ಮಾತುಗಳು ಕೇಳಿಬರುತ್ತಿದೆ.ಕಾಂಗ್ರೆಸ್ ಪಾಳಯದಲ್ಲಿ ಈಗಾಗಲೇ ಕ್ಷೇತ್ರದ ಹೊರಗಿನವರಿಗೆ ಟಿಕೇಟ್ ನೀಡುವ ಸಾಧ್ಯತೆ ಹೆಚ್ಚಳವಾಗಿದೆ.ನಂದ ಕುಮಾರ್ ಅಥವಾ ಕೃಷ್ಣಪ್ಪ ಇವರಲ್ಲಿ ಒಬ್ಬರಿಗೆ ಟಿಕೇಟ್ ನೀಡುವ ಸಾಧ್ಯತೆ ಅಧಿಕ.ಈ ಇಬ್ಬರೂ ನಾಯಕರು ಈಗಾಗಲೇ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ.

ಬಿಜೆಪಿಯಲ್ಲಿ ಸತತ 6 ಬಾರಿ ಗೆದ್ದು ,ಸಚಿವರಾಗಿರುವ ಎಸ್.ಅಂಗಾರ ಬದಲು ಹೊಸ ಅಭ್ಯರ್ಥಿ ಕಣಕ್ಕಿಳಿಸುವ ಮಾತುಗಳು ಕೇಳಿ ಬರುತ್ತಿದೆ.ಒಂದು ವೇಳೆ ಅಭ್ಯರ್ಥಿ ಬದಲಾದರೂ ಸುಳ್ಯ ಕ್ಷೇತ್ರದೊಳಗಿನವರಿಗೆ ಕೊಡುವ ಸಾಧ್ಯತೆ ಹೆಚ್ಚು.

ಪುತ್ತೂರು ಕ್ಷೇತ್ರದಲ್ಲೂ ಹೇಳಿಕೊಳ್ಳುವಂತಹ ಪರಿಸ್ಥಿತಿ ಇಲ್ಲ.ಇಲ್ಲೂ ಪಕ್ಷ ಎಚ್ಚರಿಕೆಯ ನಡೆ ಅನುಸರಿಸಬೇಕೆಂಬುದು ಆಂತರಿಕ ಸಮೀಕ್ಷೆ ನೀಡಿರುವ ಮಾಹಿತಿ.

ಅಲ್ಪಸಂಖ್ಯಾತರ ಮತ ಹೆಚ್ಚಿರುವ ಮಂಗಳೂರು ನಗರ ಉತ್ತರ, ಬಂಟ್ವಾಳ ಹಾಗೂ ಉಡುಪಿ ಜಿಲ್ಲೆಯ ಬೈಂದೂರು, ಕಾಪು ಕ್ಷೇತ್ರದಲ್ಲಿ ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಹೋರಾಟ ನೀಡುವ ಸಾಧ್ಯತೆ ಇದೆ.ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯೂ ಈ ಬಾರಿ ಫಲಿತಾಂಶದಲ್ಲಿ ಪ್ರಮುಖ ಭಾಗವಾಗಲಿದೆ.

ಮಂಗಳೂರು ಕ್ಷೇತ್ರದಲ್ಲಿ ಈ ಬಾರಿಯೂ ಯು.ಟಿ.ಖಾದರ್ ಅವರೇ ಗೆಲ್ಲಲಿದ್ದಾರೆ ಎಂಬುದು ಉಭಯ ಪಕ್ಷಗಳ ಸಮೀಕ್ಷೆಯಲ್ಲಿ ಕಂಡು ಬಂದ ವಾಸ್ತವ ಸತ್ಯ.

Leave A Reply

Your email address will not be published.