ನಿಮ್ಮ ತೆಂಗಿನ ಮರಕ್ಕೆ ಕಪ್ಪು ತಲೆ ಹುಳದ ಭಾದೆ ಕಾಡುತ್ತಿದೆಯೇ? ತಕ್ಷಣ ಈ ಪರಿಹಾರೋಪಾಯ ಅಳವಡಿಸಿ!

ತೆಂಗಿನ ಮರಗಳಿಗೆ ಹಲವು ವರ್ಷಗಳ ಕಾಲ ಕಾಡಿದ ‘ನುಸಿ ಪೀಡೆ’ ಯಿಂದ ಸುಧಾರಿಸಿಕೊಳ್ಳುವ ಹೊತ್ತಿಗೆ ಕಪ್ಪು ತಲೆ ಹುಳದ ಭಾದೆ ರೋಗ ಕಾಣಿಸಿಕೊಂಡಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇದೀಗ ತೆಂಗಿನ ಮರಕ್ಕೆ ಬಂದಿರುವ ಈ ರೋಗದಿಂದಾಗಿ ತೆಂಗಿನ ಮರದಿಂದಲೇ ಬದುಕು ಕಟ್ಟಿಕೊಂಡಿದ್ದ ನೂರಾರು ರೈತರನ್ನು ಆತಂಕಕ್ಕೆ ಒಳಪಡಿಸಿದೆ.

ಸದ್ಯ ಕಪ್ಪು ತಲೆ ಹುಳದ ಭಾದೆ ರೋಗದಿಂದಾಗಿ ತೆಂಗಿನ ಮರಗಳು ಒಣಗುವುದು ಮಾತ್ರವಲ್ಲದೆ ಇಳುವರಿ ಕುಂಠಿತವಾಗುತ್ತಾ ಬರುತ್ತದೆ. ಆದ್ದರಿಂದ ಈ ಕಪ್ಪು ಹುಳು ಬಾಧೆಯ ಲಕ್ಷಣಗಳು ಹಾಗೂ ಪರಿಹಾರೋಪಾಯಗಳನ್ನು ಸಂಪೂರ್ಣ ಮಾಹಿತಿ ಇಲ್ಲಿದೆ.

  • ಕಪ್ಪು ತಲೆ ಹುಳಗಳು ಮರಗಳ ಮೇಲೆ ದಾಳಿ ಮಾಡಿ ಮರ ಒಣಗಲು ಕಾರಣವಾಗುತ್ತದೆ.
  • ಈ ಕೀಟವು ಮೊದಲು ತೋಟದ ಹೊರಗಿನ ಭಾಗದ ಅಂದರೆ ಕೊನೆಯ ಸಾಲುಗಳ ಮರಗಳಿಗೆ ದಾಳಿ ಮಾಡಿ ಭಾದೆಯನ್ನು ನೀಡಲು ಪ್ರಾರಂಭಿಸುತ್ತದೆ.
  • ಈ ಕೀಟವು ಎಲೆಯ ಗರಿಗಳ ಕೆಳಗಿನ ಭಾಗದಲ್ಲಿ ವಾಸಿಸುತ್ತದೆ. ಅಲ್ಲದೆ ಗರಿಗಳಲ್ಲಿ ಬಲೆಯನ್ನು ಹೆಣೆಯುತ್ತ ಹೋಗುತ್ತದೆ. ಜೊತೆಗೆ ಎಲೆಗಳ ಪತ್ರಹರಿತ್ತನ್ನು ತಿನ್ನುತ್ತದೆ. ಹೀಗೆ ಮಾಡುವುದರಿಂದ ಗರಿಗಳಲ್ಲಿ ಎರಡು ಬದಲಾವಣೆಗಳಾಗುತ್ತದೆ. ಅವುಗಳೆಂದರೆ ಎಲೆಗಳು ಬೆಳ್ಳಗಾಗುವುದು ಹಾಗೂ ಆ ಎಲೆಗಳ ಕೆಳಗಡೆ ಈ ಕೀಟದ ತ್ಯಾಜ್ಯವು ಸಂಗ್ರಹಗೊಳ್ಳುತ್ತವೆ.
  • ಈ ಹುಳ ಮೊದಲು ಮರದ ಕೆಳಗಿನ ಭಾಗದ ಗರಿಗಳಿಗೆ ಹಾನಿ ಮಾಡಲು ಪ್ರಾರಂಭಿಸುವುದರಿಂದ ಕೆಳಗಿನ ಭಾಗದ ಗರಿಗಳು ಸುಟ್ಟ ರೀತಿ ಕಾಣುತ್ತವೆ ಆಗಲೇ ರೈತರು ಈ ಕೀಟ ಭಾದೆಯನ್ನು ಗುರುತಿಸಿ ಎಚ್ಚೆತ್ತುಕೊಂಡರೆ ಈ ಕೀಟ ಭಾದೆಯಿಂದ ಪರಿಹಾರ ಕಂಡುಕೊಳ್ಳಲು ಸುಲಭವಾಗುತ್ತದೆ.

ಈ ಕಪ್ಪು ತಲೆ ಕೀಟಭಾದೆಯಿಂದ ಉಂಟಾಗುವ ಹಾನಿಗಳು :

  • ತೆಂಗಿನ ಮರಗಳ ಬೆಳವಣಿಗೆ ಕುಂಠಿತವಾಗುತ್ತದೆ. ಫಲವತ್ತತೆ ಕಡಿಮೆ ಆಗುತ್ತದೆ.
  • ತೆಂಗಿನ ಮರಗಳ ರೋಗ ನಿರೋಧಕ ಶಕ್ತಿ.
  • ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಸೆಕೆಂಡರಿ ಇನ್ಸೆಕ್ಷನ್ ಆಗಿ ಬೇರೆ ಬೇರೆ ರೋಗಭಾದೆಗಳು ಬರಲು ಪ್ರಾರಂಭಿಸುತ್ತದೆ. ಈ ಕೀಟಭಾದೆಯ ನಿಯಂತ್ರಣ ಕ್ರಮಗಳು :
  • ತೋಟದ ಸುತ್ತಲಿನ ಮರಗಳಿಗೆ ಮೊದಲು ಈ ಕೀಟ ಭಾದೆ ಪ್ರಾರಂಭಿಸಿದಾಗಲೇ ಕೀಟಬಾಧೆಯಿಂದ ಪೀಡಿತ ಗರಿಗಳನ್ನು ಕಡಿದು ಹಾಕಬೇಕು. ಹೀಗೆ ಕಡಿದ ಗರಿಗಳನ್ನು ತೋಟದಲ್ಲಿ ಎಲ್ಲಿಯೂ ಬಿಸಾಡದೆ ಸುಟ್ಟು ಹಾಕಬೇಕು ಅಲ್ಲದೆ ಈ ಗರಿಗಳನ್ನು ಬೇರೆ ಯಾವುದೇ ಉಪಯೋಗಕ್ಕಾಗಿ ಬಳಸಬಾರದು.
  • ಇನ್ನು ತೋಟಗಾರಿಕಾ ಇಲಾಖೆಯ ಪ್ರಯೋಗಾಲಯದಲ್ಲಿ ಸಿಗುವ ಪರೋಪ ಜೀವಿಯಾದ ಗೋನಿಯೋಜಿಸ್ ನೆಫಂಟಡಿಸ್ (Goniogis naphantadis) ಒಂದು ಮರಕ್ಕೆ ಹದಿನೈದು ಜೀವಿಗಳಂತೆ 15 ದಿನಗಳ ಅಂತರದಲ್ಲಿ ಮೂರರಿಂದ ನಾಲ್ಕು ಬಾರಿ ಬಿಡಬೇಕು. ಈ ಪರೋಪ ಜೀವಿಯು ನೇರವಾಗಿ ಕಪ್ಪು ತಲೆ ಹುಳು ವಾಸಿಸುವ ಎಲೆಗಳ ಕೆಳಗೆ ಹೋಗಿ ಆ ಕೀಟದ ಲಾವಾ ಮೇಲೆ ಮೊಟ್ಟೆಯನ್ನು ಇಡುತ್ತದೆ. ಈ ಮೊಟ್ಟೆ ಮರಿಯಾಗಿ ತನ್ನ ಸಂತತಿಯನ್ನು ಬೆಳೆಸಿಕೊಂಡು ಅದೇ ಕಪ್ಪು ತಲೆ ಹುಳುವನ್ನು ಆಹಾರವಾಗಿ ಸೇವಿಸುತ್ತದೆ ಇದರಿಂದ ಆ ಕಪ್ಪು ಹುಳುಕೀಟಭಾದೆಯು ಕಡಿಮೆಯಾಗಿ ತೆಂಗಿನ ಮರಗಳು ಬೆಳವಣಿಗೆ ಹೊಂದಲು ಪ್ರಾರಂಭಿಸುವುದರಿಂದ ಆರ್ಥಿಕವಾಗಿ ಮತ್ತೆ ರೈತರು ಸಬಲರಾಗಲು ಕಾರಣವಾಗುತ್ತದೆ.
  • ಮುಖ್ಯ ಸೂಚನೆ ಎಂದರೆ ಈ ಕಪ್ಪು ತಲೆ ಹುಳದ ಭಾದೆ ಬೇಸಿಗೆಕಾಲದಲ್ಲಿ ಹೆಚ್ಚು ಪ್ರಭಾವ ಬೀರುವುದರಿಂದ ಈಗ ಬೇಸಿಗೆ ಪ್ರಾರಂಭವಾಗಿರುವುದರಿಂದ ಈ ಕೀಟಬಾಧೆಯಿಂದ ಬಳಲುತ್ತಿರುವ ರೈತರು ಕೂಡಲೇ ನಿಮ್ಮ ಹತ್ತಿರದ ತೋಟಗಾರಿಕಾ ಇಲಾಖೆಯಿಂದ ಈ ಪರೋಪ ಜೀವಿಯನ್ನು ಪಡೆದು ಕಪ್ಪು ತಲೆ ಹುಳು ಬಾದೆಯಿಂದ ಪರಿಹಾರ ಕಂಡುಕೊಳ್ಳಬಹುದು.
  • ಒಬ್ಬ ರೈತರು ತಮ್ಮ ತೋಟಕ್ಕೆ ಈ ಪರೋಪ ಜೀವಿಯನ್ನು ಬಿಡುವುದರಿಂದ ಮಾತ್ರ ಈ ಕೀಟ ಭಾದೆ ಶಾಶ್ವತ ಪರಿಹಾರ ನೀಡುವುದಿಲ್ಲ ಏಕೆಂದರೆ ಹತ್ತಿರವಿರುವ ತೋಟದಿಂದ ಮತ್ತೆ ಈ ಕೀಟ ಬಾಧೆ ಹರಡುವ ಸಾಧ್ಯತೆ ಇರುತ್ತದೆ ಆದ್ದರಿಂದ ಸಾಮೂಹಿಕವಾಗಿ ರೈತರು ಪರೋಪ ಜೀವಿಯನ್ನು ತಮ್ಮ ತೋಟದಲ್ಲಿ ಬಿಡುವುದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
  • ಈ ಕೀಟ ಬಾಧೆಗೆ ಕೆಮಿಕಲ್ ಸೊಲ್ಯೂಷನ್ಸ್ ನೀಡಲು ಅತಿ ಎತ್ತರದ ಮರಗಳು ಇದ್ದರೆ ಸಮಸ್ಯೆಯಾಗುತ್ತದೆ. ಆದರೆ ಮಧ್ಯಮ ಎತ್ತರದ ಮರಗಳಿಗೆ ಶೇಕಡಾ 5% ಬೇವಿನ ಎಣ್ಣೆಯನ್ನು ಒಂದು ಲೀಟರ್ ನೀರಿಗೆ ಎರಡು ಮಿಲಿ ಮಿಶ್ರಣ ಮಾಡಿಕೊಂಡು ಆ ಬೇವಿನ ಎಣ್ಣೆಯನ್ನು ಸಿಂಪಡಿಸಬಹುದು.
  • ಅತ್ಯಂತ ಮುಖ್ಯವಾದ ಕೆಲಸವೆಂದರೆ ತೆಂಗಿನ ಮರಗಳಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇದ್ದರೆ ಇಂತಹ ರೋಗಗಳಿಂದ ತಪ್ಪಿಸಿಕೊಳ್ಳಬಹುದು ಆದ್ದರಿಂದ ಪ್ರತಿ ಮುಂಗಾರಿನ ಪ್ರಾರಂಭದಲ್ಲಿ ಎರಡರಿಂದ ಮೂರು ಕೆಜಿ ಬೇವಿನ ಹಿಂಡಿಯನ್ನು ಅಥವಾ ಬೇವಿನ ಪೌಡರ್ ಅನ್ನು ಮರಗಳಿಗೆ ಹಾಕಬೇಕು.

ಸದ್ಯ ವರ್ಷಕ್ಕೆ ನೂರಿನ್ನೂರು ತೆಂಗಿನ ಕಾಯಿ ನೀಡುತ್ತಿದ್ದ ತೆಂಗಿನ ಮರದಲ್ಲಿ ಕಪ್ಪು ತಲೆ ಹುಳು ಬಾಧೆ, ನುಸಿಪೀಡೆ ಕಾಣಿಸಿಕೊಂಡ ಬಳಿಕ 20 ತೆಂಗಿನ ಕಾಯಿ ಸಿಗುವುದು ಕಷ್ಟವಾಗಿದೆ. ತೆಂಗಿನ ಮರ ಇರುವ ರೈತರೇ ಹಣ ಕೊಟ್ಟು ತೆಂಗಿನಕಾಯಿ ಕೊಳ್ಳುವ ಪರಿಸ್ಥಿತಿ ಒದಗಿದೆ. ಆದ್ದರಿಂದ ಮೇಲೆ ಹೇಳಿದ ಎಲ್ಲ ನಿಯಂತ್ರಣ ಕ್ರಮಗಳನ್ನು ಕೈಗೊಂಡಲ್ಲಿ ಈ ಕಪ್ಪು ತಲೆ ಹುಳುಬಾದೆಯಿಂದ ಮುಕ್ತಿ ಪಡೆಯಬಹುದಾಗಿದೆ. ಈ ಕೀಟ ಭಾದೆಯಿಂದ ತೆಂಗಿನ ಮರಗಳು ಸಾಯುವುದಿಲ್ಲ ಆದರೆ ತೆಂಗಿನಕಾಯಿಗಳ ಉತ್ಪಾದನೆ ಕಡಿಮೆಯಾಗುತ್ತದೆ ಆದ್ದರಿಂದ ರೈತರು ಎಚ್ಚರಗೊಳ್ಳಬೇಕಾಗಿದೆ.

Leave A Reply

Your email address will not be published.