Agniveer Recruitment: ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ !

ಅಗ್ನಿಪಥ ಯೋಜನೆಯಡಿಯಲ್ಲಿ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಆಗಿದ್ದು, ಈ ಬಗ್ಗೆ ಭಾರತೀಯ ಸೇನೆ ಘೋಷಣೆ ಮಾಡಿದೆ. ಅಭ್ಯರ್ಥಿಗಳು ಮೊದಲು ಆನ್​ಲೈನ್ ನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಬರೆದು, ನಂತರವೇ ದೈಹಿಕ ಕ್ಷಮತೆ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ ಎಂದು ಭಾರತೀಯ ಸೇನೆ ಘೋಷಿಸಿದೆ.

ಈ ಹಿಂದೆ ಅಗ್ನಿವೀರರ ನೇಮಕ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಿತ್ತು. ನಂತರವೇ ದೈಹಿಕ ಕ್ಷಮತೆ ಪರೀಕ್ಷೆ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ ಇತ್ತು. ಸದ್ಯ ಈ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದೆ. ಸೇನೆಯು ಶುಕ್ರವಾರ ಜಾಹೀರಾತು ಬಿಡುಗಡೆ ಮಾಡಿದ್ದು, ಅಗ್ನಿವೀರರ ನೇಮಕಕ್ಕೆ ಸಂಬಂಧಿಸಿದಂತೆ ಮೂರು ಹಂತಗಳ ಬಗ್ಗೆ ಸಂಪೂರ್ಣ ವಿವರ ನೀಡಿದೆ.

ಇಲ್ಲಿವರೆಗೂ 19,000 ಅಗ್ನಿವೀರರು ಸೇನೆಗೆ ಸೇರಿದ್ದಾರೆ. ಇನ್ನು ಸುಮಾರು 21,000 ಮಂದಿ ಮಾರ್ಚ್ ಮೊದಲ ವಾರ ಸೇನೆಗೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಬದಲಾದ ಪ್ರಕ್ರಿಯೆ ಅಂದ್ರೆ, ಈ ಹೊಸ ನೇಮಕಾತಿ ನಿಯಮ 2023-24ರಲ್ಲಿ ಸೇನೆ ಸೇರುವ 40,000 ಅಭ್ಯರ್ಥಿಗಳಿಗೆ ಅನ್ವಯವಾಗುತ್ತದೆ.

ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಸಾವಿರಾರು ಅಭ್ಯರ್ಥಿಗಳನ್ನು ನಿಭಾಯಿಸಲು ಬೇಕಾಗುವ ಆಡಳಿತಾತ್ಮಕ ವೆಚ್ಚ ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ, ಹೊಸ ನೇಮಕಾತಿ ನಿಯಮ ಮಾಡಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಪ್ರಕ್ರಿಯೆಯಲ್ಲಿ ಸಾವಿರಾರು ಅಭ್ಯರ್ಥಿಗಳ ಸ್ಕ್ರೀನಿಂಗ್ ಮಾಡುವುದು ಸೇನಾಡಳಿತಕ್ಕೆ ಕಷ್ಟವಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನೂ ನಿಯೋಜಿಸಬೇಕಾಗುತ್ತಿತ್ತು. ಆದರೆ ಬದಲಾದ ನೇಮಕಾತಿ ಪ್ರಕ್ರಿಯೆಯಿಂದ, ಮೊದಲು ಪ್ರವೇಶ ಪರೀಕ್ಷೆ ಮಾಡುವುದರಿಂದ ಅರ್ಹ ಅಭ್ಯರ್ಥಿಗಳು ಮಾತ್ರ ನೇಮಕಾತಿ ರ್ಯಾಲಿಗಳಿಗೆ ಬರುವಂತಾಗುತ್ತದೆ. ಹಾಗೇ ಇದು ನೇಮಕಾತಿ ಪ್ರಕ್ರಿಯೆಯನ್ನು ಸುಲಭವಾಗಿಸಲಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

Leave A Reply

Your email address will not be published.