ಈ ದೇಶದಲ್ಲಿ, ಪ್ರೇಮಿಗಳಿಗೆ ಸಿಗುತ್ತೆ 9.5 ಕೋಟಿಯಷ್ಟು ಉಚಿತ ಕಾಂಡೋಮ್! ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಕಪಲ್ಸ್ ಗಳಿಗೆ ಗುಡ್ ನ್ಯೂಸ್ ಕೊಡ್ತು ಇಲ್ಲಿನ ಗೌರ್ಮೆಂಟ್!!

ಫೆಬ್ರವರಿ ತಿಂಗಳು ಬಂತೆಂದರೆ ಸಾಕು, ಪ್ರೇಮಿಗಳಲ್ಲಿ ಅದೇನೋ ಸಂಚಲನ. ಅದರಲ್ಲೂ ಪ್ರೇಮಿಗಳಿಗೆ ಇನ್ನೂ ಹೆಚ್ಚೆನ್ನಬಹುದು. ಯಾಕೆಂದ್ರೆ ಎಲ್ಲರಿಗೂ ತಿಳಿದಂತೆ ಜಗತ್ತಿನಾದ್ಯಂತ ಫೆಬ್ರವರಿ 14ರಂದು ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ. ಇತ್ತೀಚೆಗೆ ನಮ್ಮ ಭಾರತದಲ್ಲಿ ಇದರ ಆಚರಣೆ ಸ್ವಲ್ಪ ಮಟ್ಟಿಗೆ ಕಡಿಮೆಯೇ ಆಗಿದೆ ಎನ್ನಬಹುದು. ಆದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ, ಅಲ್ಲಿನ ಪ್ರೇಮಿಗಳು ಇದನ್ನು ಯಾವುದೇ ನಿರ್ಭಂಧವಿಲ್ಲದೆ, ಸಂಭ್ರದಿಂದಲೇ ಪ್ರತೀ ವರ್ಷ ಆಚರಿಸುತ್ತಾರೆ. ಆದರೆ ಇಲ್ಲೊಂದು ದೇಶ ಪ್ರೇಮಿಗಳ ದಿನದ ಮುಂಚಿತವಾಗಿ, ತನ್ನ ದೇಶದ ಎಲ್ಲಾ ಪ್ರೇಮಿಗಳಿಗೂ ಸುಮಾರು 9.5 ಕೋಟಿಯಷ್ಟು ಕಾಂಡೋಮ್ ಕೊಡಲು ಮುಂದಾಗಿದೆಯಂತೆ! ಕಪಲ್ಸ್ ಗಳಿಗೆ ಇಂತಹ ಭರ್ಜರಿ ಆಫರ್ ಕೊಡಲು ಮುಂದಾದ ಈ ದೇಶ ಯಾವ್ದು? ಇದರ ಉದ್ದೇಶವೇನು ಅನ್ನೋ ಕುತೂಹಲವೇ?

ಹೌದು, ಆಗ್ನೇಯ ಏಷ್ಯಾದ ಥೈಲ್ಯಾಂಡ್ ದೇಶವು ಈ ರೀತಿ ನಿರ್ಧಾರವನ್ನು ಕೈಗೊಂಡಿದ್ದು ವ್ಯಾಲೆಂಟೈನ್ಸ್ ಡೇಗೆ ಮುಂಚಿತವಾಗಿ ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸುವ ಸಲುವಾಗಿ, ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಹದಿಹರೆಯದ ಗರ್ಭಧಾರಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೂರದೃಷ್ಟಿಯೊಂದಿಗೆ ಯೋಚಿಸಿ, 95 ಮಿಲಿಯನ್ (9.5 ಕೋಟಿ) ಉಚಿತ ಕಾಂಡೋಮ್​ಗಳನ್ನು ವಿತರಿಸಲು ನಿರ್ಧರಿಸಿದೆ ಎಂಬುದು ಆಶ್ಚರ್ಯವನ್ನುಂಟುಮಾಡಿದರೂ, ಅಲ್ಲಿನ ಪ್ರೇಮಿಗಳಿಗಿದು ಸಂತಸದ ವಿಚಾರ ಎನ್ನಬಹುದು.

ಸರ್ಕಾರದ ವಕ್ತಾರರಾದ ರಚಡಾ ಧ್ನಾದಿರೇಕ್ ಮಂಗಳವಾರ ಈ ಕುರಿತ ವಿಷಯವಾಗಿ ಮಾಹಿತಿಯನ್ನು ನೀಡಿದ್ದು, ಫೆಬ್ರವರಿ 1 ರಿಂದ ಥೈಲ್ಯಾಂಡ್​ನ ಸಾರ್ವತ್ರಿಕ ಹೆಲ್ತ್‌ಕೇರ್ ಕಾರ್ಡ್‌ ಅನ್ನು ಹೊಂದಿರುವವರು 1 ವರ್ಷದವರೆಗೆ ವಾರಕ್ಕೆ 10 ಕಾಂಡೋಮ್‌ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಕಾಂಡೋಮ್‌ಗಳು 4 ಗಾತ್ರಗಳಲ್ಲಿ ಲಭ್ಯವಿರುತ್ತವೆ. ಇಲ್ಲಿನ ಎಲ್ಲ ಆಸ್ಪತ್ರೆಗಳ ಔಷಧಾಲಯಗಳು ಮತ್ತು ಪ್ರಾಥಮಿಕ ಆರೈಕೆ ಘಟಕಗಳಿಂದ ಈ ಕಾಂಡೋಮ್​ಗಳನ್ನು ಪಡೆದುಕೊಳ್ಳಬಹುದು ಹಾಗೂ ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಉಚಿತ ಕಾಂಡೋಮ್ ನೀಡುವ ಅಭಿಯಾನವು ಲೈಂಗಿಕ ರೋಗಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಕೆಲವು ಅಧಿಕೃತ ಅಂಕಿಅಂಶಗಳ ಪ್ರಕಾರ, ಥೈಲ್ಯಾಂಡ್ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಲೈಂಗಿಕವಾಗಿ ಹರಡುವ ರೋಗಗಳ ಪ್ರಮಾಣ ಹೆಚ್ಚಾಗಿದೆ. ಸಿಫಿಲಿಸ್ ಮತ್ತು ಗೊನೊರಿಯಾ 15 ರಿಂದ 19 ಮತ್ತು 20 ರಿಂದ 24 ವರ್ಷಗಳ ನಡುವಿನ ವಯಸ್ಸಿನವರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಜೊತೆಗೆ ಸಿಫಿಲಿಸ್, ಗರ್ಭಕಂಠದ ಕ್ಯಾನ್ಸರ್, ಗೊನೊರಿಯಾ, ಕ್ಲಮೈಡಿಯ ಮತ್ತು ಏಡ್ಸ್ ರೋಗಗಳನ್ನು ತಡೆಗಟ್ಟುವ ಗುರಿಯನ್ನು ಥೈಲ್ಯಾಂಡ್ ಸರ್ಕಾರ ಹೊಂದಿದ್ದು, ಆ ಎಲ್ಲಾ ಮುಂದಾಲೋಚನೆಯೊಂದಿಗೆ ಉಚಿತ ಕಾಂಡೋಮ್ ನೀಡಲು ಮುಂದಾಗಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.