ಬಾಯನ್ನು ಸಿಹಿಯಾಗಿಸುವ ಸಕ್ಕರೆಯಿಂದಲೂ ಇದೆ ಆರೋಗ್ಯಕ್ಕೆ ಇಷ್ಟೆಲ್ಲಾ ದುಷ್ಪರಿಣಾಮ

ಸಕ್ಕರೆ ನಮ್ಮ ಆಹಾರಕ್ಕೆ ಸಿಹಿ ರುಚಿಯನ್ನು ನೀಡುವಂತಹ ಆಹಾರವಾಗಿದೆ. ಸಿಹಿಯನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ದಿನನಿತ್ಯದ ಆಹಾರದಲ್ಲಿ ಸಕ್ಕರೆಯನ್ನು ಒಂದಲ್ಲ ಒಂದು ಆಹಾರ ಪದಾರ್ಥ ತಯಾರಿಕೆಯಲ್ಲಿ ಬಳಸುತ್ತೇವೆ. ಭಾರತೀಯ ಮನೆಗಳಲ್ಲಿ ಅಂತೂ ಸಕ್ಕರೆಯ ಚಹಾ ಬಳಕೆ ಮಾಡದೇ ಇರುವ ಜನರಿಲ್ಲ ಎಂದೇ ಹೇಳಬಹುದು.
ಸಕ್ಕರೆ ಭರಿತ ಆಹಾರವಾಗಿರಲಿ, ಪಾನೀಯವಾಗಿರಲಿ ಎಲ್ಲವೂ ತಿನ್ನಲು ರುಚಿಕರವಾಗಿರುತ್ತದೆ, ಜೊತೆಗೆ ಇನ್ನಷ್ಟು ತಿನ್ನಬೇಕು ಎನ್ನುವ ಬಯಕೆಯನ್ನು ಹುಟ್ಟುಹಾಕುತ್ತದೆ. ಆದರೆ ಈ ಸಕ್ಕರೆ ಮಧುಮೇಹಿಗಳಿಗೆ ಮಾತ್ರವಲ್ಲ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯಕ್ಕೂ ಒಳ್ಳೆಯದಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಹೌದು. ಸಕ್ಕರೆಯ ಅತಿಯಾದ ಸೇವನೆ ನಿಮ್ಮನ್ನು ಅನಾರೋಗ್ಯಕ್ಕೆ ದೂಡಬಹುದು. ಹೀಗಾಗಿ ಸಕ್ಕರೆಯಿಂದ ದೂರ ಉಳಿದು ಆರೋಗ್ಯ ಕಾಪಾಡುವುದು ಉತ್ತಮ. ಹಾಗಿದ್ರೆ ಬನ್ನಿ ಸಕ್ಕರೆಯನ್ನು 30 ದಿನಗಳ ಕಾಲ ಸೇವಿಸದಿದ್ದರೆ ಏನೆಲ್ಲ ಪ್ರಯೋಜನ ನಮ್ಮದಾಗಿಸಿಕೊಳ್ಳಬಹುದು ಎಂಬುದನ್ನು ನೋಡೋಣ.
*30 ದಿನಗಳ ಕಾಲ ಸಕ್ಕರೆ ತಿನ್ನದಿದ್ದರೆ ರಕ್ತದಲ್ಲಿ ಗ್ಲೂಕೋಸ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು. ಇಲ್ಲವಾದರೆ ಇದರಿಂದ ಮಧುಮೇಹ ಸಮಸ್ಯೆ ಕಾಡುತ್ತದೆಯಂತೆ.
*ಸಕ್ಕರೆ ತಿನ್ನುವುದು ಬಿಟ್ಟರೆ ಇದರಿಂದ ನಿಮ್ಮ ಕ್ಯಾಲೋರಿ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿ ಸಂಗ್ರಹವಾದ ಕೊಬ್ಬು ಕರಗುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ.
*ಸಕ್ಕರೆ ತಿನ್ನದಿರುವುದರಿಂದ ಹೃದಯಕ್ಕೆ ತುಂಬಾ ಒಳ್ಳೆಯದು. ಸಕ್ಕರೆ ಸೇವನೆ ಕಡಿಮೆ ಮಾಡಿದರೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಹೃದಯದ ಸಮಸ್ಯೆ ಕಾಡುವುದಿಲ್ಲ.
*ಇದರಿಂದ ಲಿವರ್ ಆರೋಗ್ಯವಾಗಿರುತ್ತದೆಯಂತೆ. ಸಕ್ಕರೆ ಸೇವನೆ ಕಡಿಮೆಯಾದಾಗ ಕೊಬ್ಬಿದ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ.
ಹೆಚ್ಚು ಸಕ್ಕರೆ ಸೇವನೆ ಮಾಡುವುದು ಬೊಜ್ಜು, ಹೃದಯ ಸಂಬಂಧಿ ಕಾಯಿಲೆ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳ, ಆಲ್ಝೈಮರ್ ಕಾಯಿಲೆ ಇತ್ಯಾದಿ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ನೀವು ಹೆಚ್ಚು ಸಕ್ಕರೆ ತಿನ್ನುತ್ತಿದ್ದೀರಿ ಎಂದು ಸೂಚಿಸುವ ಕೆಲವು ರೋಗ ಲಕ್ಷಣಗಳು ಯಾವವು ಎಂಬುದು ಇಲ್ಲಿದೆ ನೋಡಿ.
ಸ್ನಾಯು ಮತ್ತು ಕೀಲು ನೋವು:
ನೀವು ಯಾವಾಗಲೂ ಸ್ನಾಯು ಮತ್ತು ಕೀಲು ನೋವು ಹೊಂದಿದ್ದರೆ, ಇದಕ್ಕೆ ಕಾರಣ ಹೆಚ್ಚು ಸಕ್ಕರೆ ಆಹಾರ ಸೇವಿಸುವುದು. ಅಷ್ಟೇ ಅಲ್ಲದೇ ದೇಹದಲ್ಲಿ ಇದರ ಪ್ರಮಾಣ ಹೆಚ್ಚಾಗುವುದು ಸಂಧಿವಾತ, ಕಣ್ಣಿನ ಪೊರೆ, ಹೃದ್ರೋಗ, ಜ್ಞಾಪಕ ಶಕ್ತಿ ಕುಂದುವ ಕಾಯಿಲೆ ಉಂಟು ಮಾಡುತ್ತದೆ.
ಹೆಚ್ಚಿನ ಅಥವಾ ಕಡಿಮೆ ಶಕ್ತಿಯ ಮಟ್ಟ:
ಗ್ಲೂಕೋಸ್ ನಿಮ್ಮ ದೇಹದಲ್ಲಿ ಶಕ್ತಿ ಉತ್ಪಾದಿಸುತ್ತದೆ. ಹಾಗಾಗಿ ನಿಮ್ಮ ರಕ್ತದ ಸಕ್ಕರೆ ಮಟ್ಟ ಸರಿಯಾಗಿ ಇಟ್ಟುಕೊಳ್ಳವುದು ಮುಖ್ಯ. ನೀವು ಸಿಹಿತಿಂಡಿ ಸೇವಿಸಿದಾಗ, ಮೇದೋಜ್ಜೀರಕ ಗ್ರಂಥಿಯು ಜೀವಕೋಶಗಳಿಗೆ ಗ್ಲೂಕೋಸ್ ತಲುಪಿಸಲು ಸಹಾಯ ಮಾಡಲು ಇನ್ಸುಲಿನ್ ಬಿಡುಗಡೆ ಮಾಡುತ್ತದೆ. ಮತ್ತು ನಿಮಗೆ ಶಕ್ತಿ ನೀಡುತ್ತದೆ. ಈ ಚಕ್ರವು ಕೊನೆಗೊಂಡ ನಂತರ ನಿಮ್ಮ ದೇಹವು ಹೆಚ್ಚು ಸಕ್ಕರೆ ಸೇವನೆಗೆ ಹಂಬಲಿಸುತ್ತದೆ. ಇದರಿಂದ ಶಕ್ತಿಯ ಮಟ್ಟದಲ್ಲಿ ಕುಸಿತ ಉಂಟಾಗುತ್ತದೆ.
ಚರ್ಮದ ಹಾನಿ:
ಸಕ್ಕರೆ ಹೊಂದಿರುವ ಆಹಾರಗಳು ಇನ್ಸುಲಿನ್ ಮಟ್ಟ ಹೆಚ್ಚಿಸುತ್ತವೆ. ಮತ್ತು ಗ್ಲೈಕೇಶನ್ ಪ್ರಕ್ರಿಯೆ ಪ್ರಾರಂಭಿಸುತ್ತವೆ. ಗ್ಲೂಕೋಸ್ ನಿಮ್ಮ ರಕ್ತ ಪ್ರವಾಹಕ್ಕೆ ಪ್ರವೇಶಿಸಿದಾಗ, ಇದು ಉರಿಯೂತ ಮತ್ತು ಚರ್ಮದ ಕಾಯಿಲೆ ಕಾರಣವಾಗಬಹುದು. ಈ ಇನ್ಸುಲಿನ್ ಚರ್ಮದಲ್ಲಿ ತೈಲ ಗ್ರಂಥಿಗಳ ಚಟುವಟಿಕೆ ಹೆಚ್ಚಿಸುತ್ತದೆ ಮತ್ತು ಉರಿಯೂತದ ಪ್ರಕ್ರಿಯೆ ಸಕ್ರಿಯಗೊಳಿಸುತ್ತದೆ.
ತೂಕ ಹೆಚ್ಚಾಗುವುದು:
ಹೆಚ್ಚು ಸಕ್ಕರೆ ತಿನ್ನುವುದು ತೂಕ ಹೆಚ್ಚಾಗಲು ಕಾರಣವಾಗಬಹುದು. ತಿನ್ನುವ ಚಾಕೊಲೇಟ್ ಅಥವಾ ಕೇಕ್‌ನಂತಹ ಆಹಾರಗಳು ನಿಮಗೆ ಕೆಟ್ಟ ರೀತಿಯಲ್ಲಿ ಹಾನಿ ಉಂಟು ಮಾಡಬಹುದು.
ಹಲ್ಲಿನ ಕ್ಷಯ:
ಸಿಹಿ ಆಹಾರಗಳು ಹಲ್ಲುಕುಳಿ ಮತ್ತು ದಂತಕ್ಷಯಕ್ಕೆ ಕಾರಣವಾಗುತ್ತದೆ. ಹಲ್ಲುಗಳು ಕೊಳೆಯಲು ಸಕ್ಕರೆಯಲ್ಲ, ಆದರೆ ತಿಂದ ನಂತರ ಹಲ್ಲುಗಳ ಮೇಲೆ ಉಳಿದಿರುವ ಆಹಾರದ ಅವಶೇಷಗಳು ಕಾರಣ. ಸರಿಯಾಗಿ ಹಲ್ಲುಜ್ಜದಿದ್ದರೆ, ಹಲ್ಲುಗಳ ಮೇಲೆ ಪ್ಲೇಕ್ ಉಂಟಾಗಿ ಹಲ್ಲಿನ ಗಟ್ಟಿಯಾದ ಮೇಲ್ಮೈಯನ್ನು ನಾಶಪಡಿಸುತ್ತದೆ.
ಆಗಾಗ್ಗೆ ಶೀತ ಮತ್ತು ಜ್ವರ:
ಹೆಚ್ಚು ಸಕ್ಕರೆ ತಿನ್ನುವುದು ಅಥವಾ ಕುಡಿಯುವುದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಫ್ಲೂ ಬ್ಯಾಕ್ಟೀರಿಯಾದ ವಿರುದ್ಧ ಶೂನ್ಯ ಶಕ್ತಿ ಹೊಂದಿರುವ ಗ್ಲೂಕೋಸ್ ಅನ್ನು ತೆಗೆದುಕೊಳ್ಳುತ್ತದೆ.