ಮುಲಾಯಂ ಸಿಂಗ್‌ಗೆ ನೀಡಿರುವ ಪದ್ಮವಿಭೂಷಣವನ್ನು ಹಿಂಪಡೆಯಿರಿ: ಆತನೊಬ್ಬ ದೇಶದ್ರೋಹಿ ಎಂದ ಪ್ರಮೋದ್‌ ಮುತಾಲಿಕ್

2023ನೇ ಸಾಲಿನಲ್ಲಿ ದೇಶದ ಉನ್ನತ ಪುರಸ್ಕಾರಗಳಾದ ಪದ್ಮ ಪ್ರಶಸ್ತಿಗಳಿಗೆ ಭಾಜನರಾದವರ ಪಟ್ಟಿಯನ್ನು ಕೇಂದ್ರ ಸರ್ಕಾರವು ಸಂಪ್ರದಾಯದಂತೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಳಿಸಿತು. ಈ ಪ್ರಶಸ್ತಿಗಳಲ್ಲಿ ದೇಶದ ಎರಡನೇ ಅತ್ಯಂತ ದೊಡ್ಡ ಪುರಸ್ಕಾರ ಎಂದರೆ ಅದು ಪದ್ಮವಿಭೂಷಣ. ಈ ವರ್ಷ ಕೊಡಮಾಡಲಾದ ಈ ಪದ್ಮವಿಭೂಷಣವನ್ನು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಅವರಿಗೆ ಮರಣೋತ್ತರವಾಗಿ ನೀಡಲಾಯಿತು. ಆದರೀಗ ಈ ಪ್ರಶಸ್ತಿಯನ್ನು ಹಿಂಪಡೆಯುವಂತೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಒತ್ತಾಯ ಮಾಡಿದ್ದಾರೆ.

ಮುಲಾಯಂ ಸಿಂಗ್‌ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿರುವುದು ಅತ್ಯಂತ ಕೆಟ್ಟ ಹಾಗೂ ಹೇಯ ಪರಂಪರೆ ಆಗಿದೆ. ಕೇಂದ್ರ ಸರ್ಕಾರದ ಪ್ರಶಸ್ತಿ ಆಯ್ಕೆ ಸಮಿತಿಯ ನಡೆಗೆ ಮುತಾಲಿಕ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 1989-91ರ ಅವಧಿಯಲ್ಲಿ ಮುಲಾಯಂ ಸಿಂಗ್‌ ಅವರು ಅಯೋಧ್ಯೆಯ ಶ್ರೀರಾಮ ಕರಸೇವಕರಿಗೆ ಹಿಂಸೆ ನೀಡಿದ್ದಾರೆ. ಶಾಂತಿಯುತ ಪ್ರತಿಭಟನೆಗಾಗಿ ಅಯೋಧ್ಯೆಗೆ ಬಂದಿದ್ದ ಶ್ರೀರಾಮ ಭಕ್ತರ ಮೇಲೆ ಗುಂಡು ಹಾರಿಸಿದ ಕ್ರೂರಿ ಅವರಾಗಿದ್ದಾರೆ, ಹಾಗಾಗಿ ಎಂತವರಿಗೆ ಪ್ರಶಸ್ತಿ ನೀಡುವುದು ಅವಮಾನಕರ. ದಯವಿಟ್ಟು ಸರ್ಕಾರ ಇದನ್ನು ವಾಪಸ್ಸು ಪಡೆಯಬೇಕು ಎಂದು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಜೈಲಿಗೆ ತಳ್ಳಲು ಯತ್ನಿಸಿದ್ದ ಮುಲಾಯಂ ಕುತಂತ್ರ ಮಾಡಿದ್ದರು. ಮುಖ್ಯವಾಗಿ ಯೋಗಿ ಅವರನ್ನು ಎನ್ಕೌಂಟರ್ ಮಾಡಲು ಹೊರಟ ವ್ಯಕ್ತಿ ಇವರಾಗಿದ್ದಾರೆ. ಜೊತೆಗೆ, ಯೋಗಿ ಆದಿತ್ಯನಾಥ ಅವರನ್ನು ಸಂಸತ್ ಭವನದಲ್ಲಿ ಕಣ್ಣೀರು ಹಾಕಿಸಿದ್ದಾರೆ. ಇಂತಹಾ ವ್ಯಕ್ತಿಗೆ ಪದ್ಮವಿಭೂಷಣ ನೀಡಿರುವುದು ಅಕ್ಷಮ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

ಮುಲಾಯಂ ಸಿಂಗ್‌ ಅವರು ಕೇವಲ ಶ್ರೀರಾಮ ವಿರೋಧಿ ಹಾಗೂ ಧರ್ಮ ವಿರೋಧಿ ಮಾತ್ರವಲ್ಲ. ದೇಶದ್ರೋಹಿಯೂ ಆಗಿದ್ದಾರೆ. ಅಂಥವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವುದೆಂದರೆ ಆ ಪ್ರಶಸ್ತಿಗಳಿಗೆ ದೊಡ್ಡ ಕಳಂಕ ಆದಂತಾಗಲಿದೆ. ಅತ್ಯಂತ ಶ್ರೇಷ್ಠ ಪ್ರಶಸ್ತಿಗೆ ಇದೊಂದು ಕಪ್ಪು ಚುಕ್ಕೆ ಆಗಿದೆ. ಪ್ರತಿಷ್ಠಿತ ಪ್ರಶಸ್ತಿಗೆ ಮುಲಾಯಂ ಅವರನ್ನು ಆಯ್ಕೆ ಮಾಡಿದ ಪ್ರಶಸ್ತಿ ಆಯ್ಕೆ ಸಮಿತಿಗೆ ಧಿಕ್ಕಾರ. ಕೂಡಲೇ ಮರಣೋತ್ತರವಾಗಿ ಮುಲಾಯಂ ಸಿಂಗ್‌ ಅವರಿಗೆ ಘೋಷಣೆ ಮಾಡಲಾದ ಪದ್ಮ ಪ್ರಶಸ್ತಿಯನ್ನು ವಾಪಸ್‌ ಪಡೆದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

Leave A Reply

Your email address will not be published.