54 ಜನರನ್ನ ಬಿಟ್ಟು ವಿಮಾನ ಟೇಕಾಫ್ :ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆಗೆ ದುಬಾರಿ ದಂಡ

ಬೆಂಗಳೂರು: ಜ.9ರಂದು ಬೆಳಗ್ಗೆ ಕೆಂಪೇಗೌಡ ಏರ್ಪೋರ್ಟ್ ನಲ್ಲಿ 54 ಪ್ರಯಾಣಿಕರನ್ನು ಟರ್ಮಿನಲ್​ನಲ್ಲೇ ಬಿಟ್ಟು ವಿಮಾನ ಟೇಕಾಫ್​ ಆದ ಪ್ರಕರಣಕ್ಕೆ ಸಂಬಂಧಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆಗೆ ದುಬಾರಿ ದಂಡ ವಿಧಿಸಿದೆ.

ಬೆಂಗಳೂರಿನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ G8 116 ನಂಬರ್​ನ ಗೋಫಸ್ಟ್ ವಿಮಾನ ಹೊರಟಿತ್ತು. ಮೊದಲನೇ ಟ್ರಿಪ್​​ನಲ್ಲಿ ವಿಮಾನಕ್ಕೆ‌ ಬಸ್​ನಲ್ಲಿ ಹೋಗಿ 50 ಜನ ಪ್ರಯಾಣಿಕರು ಹತ್ತಿದ್ದರು. ಎರಡನೇ ಟ್ರಿಪ್​​ನಲ್ಲಿ 54 ಜನರನ್ನು ಟರ್ಮಿನಲ್​​ನಿಂದ ವಿಮಾನದ ಬಳಿಗೆ ಬಸ್ ಕರೆದೊಯ್ಯಬೇಕಿತ್ತು. ಆದರೆ, ಬಸ್​ ಪ್ರಯಾಣಿಕರನ್ನು ಕರೆತರುವ ಮುನ್ನವೆ ವಿಮಾನ ಟೇಕಾಫ್​ ಆಗಿತ್ತು. ಪ್ರಯಾಣಿಕರನ್ನು ಗಮನಿಸದೆ ಏರ್​ಲೈನ್ಸ್​ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ ಅಂತ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ, ಗೋಫಸ್ಟ್​ ಏರ್​ಲೈನ್ಸ್​ ವಿರುದ್ಧ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಅಸಮಾಧಾನ ಹೊರ ಹಾಕಿದ್ದರು. ಟ್ವಿಟರ್​ನಲ್ಲಿ ಗೋಫಸ್ಟ್ ಮತ್ತು ಡಿಜಿಸಿಎಗೆ 50 ಕ್ಕೂ ಅಧಿಕ‌ ಪ್ರಯಾಣಿಕರು ಟ್ವೀಟ್​ ಮಾಡಿ ಸಮಯಕ್ಕೆ ಸರಿಯಾಗಿ ಹೋಗಲು ಆಗಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು. ಇದಾದ ಬಳಿಕ ಗೋಫಸ್ಟ್​ ಸಂಸ್ಥೆಗೆ ಡಿಜಿಸಿಎ ಶೋಕಾಸ್​ ನೋಟಿಸ್​ ನೀಡಿ, ಕಾರಣ ತಿಳಿಸುವಂತೆ ಹೇಳಿತ್ತು. ಅಲ್ಲದೆ, ತಮ್ಮ ನಿಯಂತ್ರಕ ಕಟ್ಟುಪಾಡುಗಳ ಲೋಪಕ್ಕಾಗಿ ವಿಮಾನಯಾನ ಸಂಸ್ಥೆಯ ವಿರುದ್ಧ ಏಕೆ ಜಾರಿ ಕ್ರಮ ತೆಗೆದುಕೊಳ್ಳಬಾರದು ಎಂದು ಕೇಳಿತ್ತು.

ಇದಕ್ಕೆ ಜನವರಿ 25ರಂದು ಗೋಫಸ್ಟ್​ ಏರ್​ಲೈನ್​ ಸಂಸ್ಥೆ ಉತ್ತರ ನೀಡಿತ್ತು. ವಾಣಿಜ್ಯ ಸಿಬ್ಬಂದಿ ಮತ್ತು ಸಿಬ್ಬಂದಿ ನಡುವೆ ವಿಮಾನದಲ್ಲಿ ಪ್ರಯಾಣಿಕರನ್ನು ಹತ್ತುವುದಕ್ಕೆ ಸಂಬಂಧಿಸಿದಂತೆ ಅಸಮರ್ಪಕ ಸಂವಹನ ಕೊರತೆಯಿಂದ ಈ ತಪ್ಪು ನಡೆದಿದೆ ಎಂದು ಹೇಳಿತ್ತು. ಆದರೆ, ಈ ಉತ್ತರ ಡಿಜಿಸಿಎಗೆ ಸಮಾಧಾನ ನೀಡದಿದ್ದರಿಂದ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ

Leave A Reply

Your email address will not be published.