Shraddha Walker Case: ಶ್ರದ್ಧಾಳನ್ನು ಕೊಂದ ಪ್ರಕರಣ : 6629 ಪುಟಗಳ ಚಾರ್ಜ್ಶೀಟ್ನಲ್ಲಿ ಬಯಲಾಯ್ತು ಬೆಚ್ಚಿ ಬಿದ್ದ ವಿಚಾರ!
ಇಡೀ ಜಗತ್ತು ಬೆಚ್ಚಿ ಬೀಳುವಂತೆ ಮಾಡಿದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ರೋಚಕ ಮಾಹಿತಿಯೊಂದು ಬಯಲಾಗಿದೆ. ಅಫ್ತಾಬ್ ತನ್ನ ‘ಲಿವ್-ಇನ್-ಪಾರ್ಟ್ನರ್’ ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ವಿಲೇವಾರಿ ಮಾಡಿದ್ದು ಅಲ್ಲದೆ ಆಕೆಯ ದೇಹದ ಭಾಗಗಳನ್ನು ಶೇಖರಣೆ ಮಾಡಲು ಫ್ರಿಡ್ಜ್ ಖರೀದಿ ಮಾಡಿದ್ದು ಸದ್ಯ ಎಲ್ಲರಿಗೂ ತಿಳಿದಿರುವ ವಿಚಾರ. ದೆಹಲಿ ಪೊಲೀಸರು ಮಂಗಳವಾರ 6,629 ಪುಟಗಳ ಚಾರ್ಜ್ ಶೀಟ್ ಅನ್ನು ಈತನ ವಿರುದ್ಧ ಸದ್ಯ ಸಾಕೇತ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿರುವ ಖಾಕಿ ಪಡೆಗೆ ಈ ಮೊದಲು ಹೀನಾತಿ ಹೀನ ಪ್ರಕರಣ ಭೇದಿಸಿದ್ದರು ಸಹಿತ ಇಲ್ಲಿ ಆರೋಪಿ ಬಿಚ್ಚಿಡುತ್ತಿರುವ ಸತ್ಯಗಳು ನಡುಕ ಹುಟ್ಟಿಸಿದಂತು ಸ್ಪಷ್ಟ. ಸದ್ಯ ಆರೋಪಿ ಅಫ್ತಾಬ್ ನನ್ನು ನಾರ್ಕೋ ಮತ್ತು ಪಾಲಿಗ್ರಾಫಿಕ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ವೇಳೆ ಹಲವು ರೀತಿಯ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ದೆಹಲಿ ಪೊಲೀಸರ ಜಂಟಿ ಸಿಪಿ ಮೀನು ಚೌಧರಿ ತಿಳಿಸಿದ್ದಾರೆ ಎಂದು ಮಾಧ್ಯಮ ವೊಂದು ವರದಿ ಮಾಡಿದೆ. ತನಿಖೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಬಳಕೆ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಜಿಪಿಎಸ್ ಸ್ಥಳಗಳನ್ನು ಡಿಜಿಟಲ್ ವ್ಯವಸ್ಥೆ ಮೂಲಕ ಟ್ರ್ಯಾಕ್ ಮಾಡಲಾಗಿದೆ. ಇದೇ ಸಂದರ್ಭದಲ್ಲಿ, ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ತನಿಖೆ ನಡೆಸಲಾಗಿದ್ದು, ಈ ವೇಳೆ ಶ್ರದ್ಧಾಳ ಮೃತದೇಹದ ಕೆಲವು ತುಣುಕುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಆರೋಪಿ ಅಫ್ತಾಬ್ ನ್ಯಾಯಾಂಗ ಬಂಧನದ ಅವಧಿ ಮಂಗಳವಾರಕ್ಕೆ ಮುಗಿದಿದ್ದು, ಹೀಗಾಗಿ, ಅಫ್ತಾಬ್‌ನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಫ್ತಾಬ್ ತನ್ನ ‘ಲಿವ್-ಇನ್-ಪಾರ್ಟ್ನರ್’ ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ವಿಲೇವಾರಿ ಮಾಡಿದ ಆರೋಪದ ಹಿನ್ನೆಲೆ ನ್ಯಾಯಾಲಯವು ಅಫ್ತಾಬ್‌ನ ನ್ಯಾಯಾಂಗ ಬಂಧನವನ್ನು ಫೆಬ್ರವರಿ 7 ರವರೆಗೆ ಎರಡು ವಾರಗಳವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ವೇಳೆ ಅಫ್ತಾಬ್ ತಮ್ಮ ವಕೀಲ ಎಂಎಸ್ ಖಾನ್ ಅವರನ್ನು ಬದಲಾವಣೆ ಮಾಡಲು ಇಚ್ಛಿಸುವುದಾಗಿ ನ್ಯಾಯಾಲಯಕ್ಕೆ ಹೇಳಿದ್ದಾನೆ ಎನ್ನಲಾಗಿದೆ.
ಈ ಹಿಂದೆ ಐಪಿಸಿ ಸೆಕ್ಷನ್ 365 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು, ಆದರೆ ನಂತರ ಸೆಕ್ಷನ್ 302 ಅನ್ನು ಕೂಡ ಸೇರಿಸಲಾಯಿತು ಎಂದು ಮೀನು ಚೌಧರಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದ ಜಾಡನ್ನು ಅರಸುತ್ತಾ ಹೊರಟ ಪೊಲೀಸರಿಗೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ಕೊಲೆಯಾದ ದಿನ ಶ್ರದ್ಧಾ ತನ್ನ ಸ್ನೇಹಿತನನ್ನು ಭೇಟಿಯಾಗಲು ಹೋಗಿದ್ದು, ವಾಸ್ತವವಾಗಿ, ಆರೋಪಿ ಅಫ್ತಾಬ್‌ಗೆ ಶ್ರದ್ಧಾ ಯಾರನ್ನೂ ಭೇಟಿಯಾಗುವುದು ಸುತಾರಾಂ ಇಷ್ಟವಿರಲಿಲ್ಲ. ಸ್ನೇಹಿತನನ್ನು ಭೇಟಿಯಾಗಿ ಮನೆಗೆ ಮರಳಿದ ಶ್ರದ್ಧಾ ಬಳಿ ಆರೋಪಿ ಅಫ್ತಾಬ್ ಎಲ್ಲಿಗೆ ಯಾರನ್ನು ಭೇಟಿಯಾಗಲು ಹೋಗಿದ್ದೆ ಎಂದು ಪ್ರಶ್ನಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ, ಶ್ರದ್ಧಾ ತನ್ನ ಸ್ನೇಹಿತನನ್ನು ಭೇಟಿ ಮಾಡಿ ವಾಪಸ್ ಬಂದಿರುವುದಾಗಿ ಹೇಳಿದ್ದಾಳೆ. ಆದರೆ, ಈ ವಿಚಾರವೇ ಆಕೆಯ ಕೊಲೆಗೆ ಕಾರಣವಾಯಿತು ಎಂದು ಜಂಟಿ ಸಿಪಿ ಮೀನು ಚೌಧರಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಶ್ರದ್ಧಾ ತನ್ನ ಗೆಳೆಯನನ್ನು ಭೇಟಿಯಾಗಲು ತೆರಳಿದ್ದರಿಂದ ಕೋಪಗೊಂಡ ಅಫ್ತಾಬ್ ಈ ಭೀಕರ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಇದರ ಸತ್ಯಸತ್ಯತೆ ತಿಳಿಯಬೇಕಾಗಿದೆ.