Man Shot Dead By Dog: ಬಂದೂಕಿನಿಂದ ಗುಂಡು ಹಾರಿಸಿ ಮಾಲೀಕನನ್ನು ಹತ್ಯೆ ಮಾಡಿದ ನಾಯಿ!

ಕೆಲವೊಂದು ಘಟನೆಗಳನ್ನು ಕೇಳುವಾಗ ಅಥವಾ ನೋಡುವಾಗ ಆಶ್ಚರ್ಯ ಅನ್ನಿಸಬಹುದು. ಆದರೆ ನಾವು ಒಪ್ಪಿಕೊಳ್ಳಲೇ ಬೇಕು. ಪ್ರಾಣಿಗಳಲ್ಲಿ ನೀಯತ್ತಿನ ಪ್ರತಿರೂಪ ನಾಯಿ ಎಂದು ಹೇಳುತ್ತಾರೆ. ಮತ್ತು ನಾಯಿಯನ್ನು ನಾವು ಮನೆಯಲ್ಲಿ ಒಬ್ಬ ಸದಸ್ಯ ಇದ್ದಂತೆ ನೋಡಿಕೊಳ್ಳುತ್ತೇವೆ. ಸಾಕಿದ ನಾಯಿ ಯಜಮಾನನ ಪ್ರಾಣ ಉಳಿಸಿದ್ದು ಕೇಳಿದ್ದೇವೆ ಆದರೆ ಇಲ್ಲೊಂದು ಕಡೆ ಸಾಕಿದ ನಾಯಿಯೇ ಯಜಮಾನನ ಸಾವಿಗೆ ಕಾರಣವಾಗಿದೆ.

ಅಮೆರಿಕದ ಕಾನ್ಸಾಸ್‌ನಲ್ಲಿ ಭಾನುವಾರ ಈ ಘಟನೆ ನಡೆದಿದ್ದು ಪಿಕಪ್‌ ಟ್ರಕ್‌ನ ಹಿಂಭಾಗದಲ್ಲಿ ಇಟ್ಟಿದ್ದ ಬಂದೂಕಿನ ಮೇಲೆ ನಾಯಿ ಕಾಲಿಟ್ಟಾಗ ಗುಂಡು ಹಾರಿದೆ. ಇದರಿಂದ ಟ್ರಕ್‌ನ ಮುಂಭಾಗದಲ್ಲಿ ಕುಳಿತಿದ್ದ ಯುವಕನಿಗೆ ಗುಂಡು ತಗುಲಿ ಸಾವನ್ನಪ್ಪಿದ್ದಾನೆ. ಇದೊಂದು ಆಕಸ್ಮಿಕ ಘಟನೆಯಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಸಾವನ್ನಪ್ಪಿದ 30 ವರ್ಷದ ವ್ಯಕ್ತಿ ನಾಯಿಯ ಮಾಲೀಕನೇ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಜನರಿಗಿಂತ ಹೆಚ್ಚು ಬಂದೂಕುಗಳನ್ನು ಹೊಂದಿರುವ ಅಮೆರಿಕದಲ್ಲಿ ಆಕಸ್ಮಿಕ ಗುಂಡಿನ ದಾಳಿಗಳ ದುರಂತಗಳು ಸಾಮಾನ್ಯವಾಗಿವೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಮಾಹಿತಿ ಪ್ರಕಾರ 2021ರಲ್ಲಿ ಬಂದೂಕು ಅಪಘಾತಗಳಲ್ಲಿ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 2022ರಲ್ಲಿ ಅಮೆರಿಕದಲ್ಲಿ ಬರೋಬ್ಬರಿ 523 ಸಾಮೂಹಿಕ ದಾಳಿಗಳು ನಡೆದಿದ್ದವು ಎಂಬುದು ಅಂಕಿ-ಅಂಶಗಳಿಂದ ಬಯಲಾಗಿದೆ.

ಇನ್ನು, ಅಮೆರಿಕದ ಒಟ್ಟು ಜನಸಂಖ್ಯೆ 33 ಕೋಟಿ. ಆದರೆ, ಅಲ್ಲಿರುವ ಬಂದೂಕುಗಳ ಸಂಖ್ಯೆ ಬರೋಬ್ಬರಿ 40 ಕೋಟಿ ಎಂದರೆ ನೀವು ನಂಬಲೇಬೇಕು. ಅಮೆರಿಕ ತನ್ನ ನೂರು ಜನರಿಗೆ ಶೇ.120.5 ಗನ್‌ಗಳನ್ನು ಹೊಂದಿದೆ. ಗುಂಡಿನ ದಾಳಿಯಿಂದಾಗಿಯೇ ಕಳೆದ 50 ವರ್ಷಗಳಲ್ಲಿ 15 ಲಕ್ಷ ಅಮೆರಿಕನ್ನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಶೂಟೌಟ್‌, ಆತ್ಮಹತ್ಯೆ ಕೂಡ ಸೇರಿವೆ.

ಸ್ವಿಜರ್ಲೆಂಡ್‌ನ ಸಂಶೋಧನಾ ಸಂಸ್ಥೆ ಸ್ಮಾಲ್‌ ಆಮ್ಸ್‌ರ್ನ್‌ ಸರ್ವೆ ಪ್ರಕಾರ, 2018ರಲ್ಲಿ ವಿಶ್ವದ ಒಟ್ಟು 85.7 ಕೋಟಿ ಬಂದೂಕುಗಳಲ್ಲಿ 39 ಕೋಟಿ ಗನ್‌ಗಳು ಅಮೆರಿಕದ ನಾಗರಿಕರ ಬಳಿ ಇವೆಯಂತೆ. ಅಂದರೆ, ವಿಶ್ವದ ಶೇ.46.9 ಬಂದೂಕುಗಳು ಅಮೆರಿಕನ್ನರ ಬಳಿ ಇವೆ.

ಅಮೆರಿಕದಲ್ಲಿ ಈಗೀಗ ಗುಂಡಿನ ದಾಳಿಗಳು ಸಾಮಾನ್ಯವಾಗಿಬಿಟ್ಟಿವೆ. ಕಳೆದ 23 ದಿನಗಳಲ್ಲಿ 36 ಸಾಮೂಹಿಕ ಗುಂಡಿನ ದಾಳಿಗಳು ಅಮೆರಿಕದಲ್ಲಿ ನಡೆದಿವೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆ ಆಧಾರಿಸಿ ಅಮೆರಿಕದಲ್ಲಿ ಗುಂಡಿನ ದಾಳಿಗಳು ಹೆಚ್ಚಿಗೆ ಸಂಭವಿಸುತ್ತಿವೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.