ವಿಟ್ಲ : ವ್ಯಕ್ತಿಯೋರ್ವರಿಗೆ ಪುಂಡರಿಂದ ಹಲ್ಲೆ, ಜೀವಬೆದರಿಕೆ | ಪತ್ನಿಯ ಮಾನಭಂಗಕ್ಕೆ ಯತ್ನ, ದೂರು ದಾಖಲು
ವಿಟ್ಲದಲ್ಲಿ ಜೀವಬೆದರಿಕೆ ಹಾಗೂ ಮಾನಭಂಗ ಪ್ರಕರಣವೊಂದು ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಹಾಕಲಾಗಿದ್ದ ಫ್ಯಾನ್ಸಿ ಅಂಗಡಿ ಮಾಲೀಕರಿಗೆ ತಂಡವೊಂದು ಜೀವ ಬೆದರಿಕೆ, ಹಲ್ಲೆ ಜೊತೆಗೆ ಮಾನಭಂಗಕ್ಕೆ ಯತ್ನಿಸಿದ ಘಟನೆಯ ಆಧಾರದ ಮೇಲೆ ಆರು ಮಂದಿಯ ವಿರುದ್ಧ ದೂರು ದಾಖಲಾಗಿದೆ ಎಂದು ವರದಿಯಾಗಿದೆ. ಬಂಟ್ವಾಳ ನೇರ್ಲಾಜೆ ನಿವಾಸಿ ಸುರೇಶ್ ದಾಸ್ ದೂರು ನೀಡಿದ ವ್ಯಕ್ತಿ.
ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಜಾತ್ರೆಯ ಪ್ರಯುಕ್ತ ದೇವಸ್ಥಾನದ ಅನುಮತಿಯಂತೆ ಫ್ಯಾನ್ಸಿ ಮಳಿಗೆ ತೆರೆದು ವ್ಯವಹಾರ ನಡೆಸುತ್ತಿದ್ದು, ಜ.19ರಂದು ರಾತ್ರಿ ವ್ಯಾಪಾರ ಮುಗಿಸಿ ಮಳಿಗೆಯನ್ನು ಮುಚ್ಚುತ್ತಿದ್ದ ವೇಳೆ ಗಣೇಶ್ ಕಡಂಬು, ಮಂಜುನಾಥ ಹಾಗೂ ಇತರ ನಾಲ್ವರು ಮಳಿಗೆ ಬಳಿಗೆ ಬಂದು ಮಳಿಗೆ ಮುಚ್ಚುತ್ತಿರುವುದನ್ನು ಆಕ್ಷೇಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡ ನನ್ನ ಪತ್ನಿ ಓಡಿ ಜಗಳ ಬಿಡಿಸಲೆತ್ನಿಸಿದಾಗ ಆಕೆಗೂ ಹಲ್ಲೆ ನಡೆಸಿ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ. ಈ ವೇಳೆ ಜನಸೇರುತ್ತಿದ್ದಂತೆ ನನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವಬೆದರಿಕೆ ಒಡ್ಡಿ ತಂಡವು ಅಲ್ಲಿಂದ ಪರಾರಿಯಾಗಿದೆ ಎಂದು ಸುರೇಶ್ ದಾಸ್ ಅವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.