ಕಾಲೇಜಿನಲ್ಲಿ ಬುರ್ಖಾ ನಿಷೇಧ ಮಾಡುವವರಿಗೆ ಬೆತ್ತಲೆ ಮೆರವಣಿಗೆ ಶಿಕ್ಷೆ – ನಾಯಕರೋರ್ವರ ವಿವಾದಾತ್ಮಕ ಹೇಳಿಕೆ

ಕರ್ನಾಟಕದಲ್ಲಿ ಹಿಜಾಬ್, ಬುರ್ಖಾ ನಿಷೇಧದ ಗಲಭೆಗಳು ಸೈಲೆಂಟ್ ಆಗುತ್ತಿದ್ದಂತೆ ಇದೀಗ ಉತ್ತರ ಪ್ರದೇಶದ ಮೊರಾಬಾದ್‌ನಲ್ಲಿ ಮತ್ತೆ ಬುರ್ಖಾ ಸದ್ದು ಮಾಡತೊಡಗಿದೆ. ಮೊರಾಬಾದ್‌ನ ಕಾಲೇಜಿನಲ್ಲಿ ಬುರ್ಖಾ ಧರಿಸಿ ಕಾಲೇಜು ಪ್ರವೇಶವನ್ನು ನಿಷೇಧಿಸಿದೆ. ಇದು ಭಾರಿ ಗೊಂದಲಕ್ಕೆ ಕಾರಣವಾಗಿ, ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವಿವಾದ ಸೃಷ್ಟಿಯಾಗುತ್ತಿದ್ದಂತೆ ರಾಜಕೀಯ ನಾಯಕರು ಸಿಕ್ಕಿದ್ದೇ ಚಾನ್ಸ್ ಎಂಬಂತೆ ಒಂದರ ಹಿಂದೆ ಒಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಇದೀಗ ಸಮಾಜವಾದಿ ಪಾರ್ಟಿ ನಾಯಕ, ಮಾಜಿ ಸಚಿವ ಜಮೀರುಲ್ಲಾ ಖಾನ್, ಯಾರು ಬುರ್ಖಾ ನಿಷೇಧಿಸುತ್ತಾರೋ, ಯಾರು ಬರ್ಖಾ ವಿರೋಧಿಸುತ್ತಾರೋ ಅವರನ್ನು ನಡು ಬೀದಿಯಲ್ಲಿ ಬೆತ್ತಲೆ ಮರೆವಣಿಗೆ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬುರ್ಖಾ ನಿಷೇಧಿಸುವ ಕ್ರಮವು, ಒಂದು ಸಮುದಾಯದ ವಿರುದ್ಧ ತೆಗೆದುಕೊಂಡ ನಿರ್ಧಾರವಾಗಿದೆ. ಹುಡುಗಿಯರು ಬುರ್ಖಾ ಧರಿಸಿ ಕಾಲೇಜು ಹೋಗಲು ಅವಕಾಶ ನೀಡಬೇಕು. ಹಿಜಾಬ್‌ಗೆ ನಿಷೇಧ ಹೇರಿಲ್ಲ. ಆದರೆ, ಇದೀಗ ಬುರ್ಖಾಗೆ ಬ್ಯಾನ್ ಮಾಡಿದ್ದೇಕೆ? ಯಾರು ಬುರ್ಖಾ ನಿಷೇಧಿಸುತ್ತಾರೋ ಅವರನ್ನು ಬೀದಿಯಲ್ಲಿ ಬೆತ್ತಲೆ ಮರೆವಣಿಗೆ ಮಾಡಬೇಕು. ಅವರಿಗೆ ವಸ್ತ್ರ ಇಲ್ಲದಿರುವಾಗ ಆಗುವ ಅನುಭವ ಆಗಬೇಕು. ದೇಹವನ್ನ ಪೂರ್ತಿಯಾಗಿ ಮುಚ್ಚಿಕೊಳ್ಳುವುದು ಭಾರತದ ಸಂಸ್ಕೃತಿ. ಮುಸ್ಲಿಮ್ ಸಮುದಾಯವನ್ನು ಟಾರ್ಗೆಟ್ ಮಾಡಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಬುರ್ಖಾ ನಿಷೇಧಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಮೀರುಲ್ಲಾ ಖಾನ್ ಹೇಳಿದ್ದಾರೆ.

ಇತ್ತೀಚೆಗೆ ಹಲವು ಕಡೆಗಳಲ್ಲಿ ಬುರ್ಖಾ, ಹಿಜಾಬ್, ಅಬಯಾ ನಿಷೇಧಿಸಲಾಗುತ್ತಿದೆ. ಇದರ ವಿರುದ್ಧ ಪರ ವಿರೋಧಗಳು ಕೇಳಿಬರುತ್ತಿದೆ. ಸೌದಿ ಅರೇಬಿಯಾದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಅಬಯಾ ಧರಿಸಿ ಬರುವುದನ್ನು ನಿಷೇಧಿಸಲಾಗಿತ್ತು. ಈ ಕುರಿತು ಶಿಕ್ಷಣ ಇಲಾಖೆ ಆದೇಶವನ್ನು ನೀಡಿತ್ತು. ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮವಸ್ತ್ರಕ್ಕೆ ಮೊದಲ ಆದ್ಯತೆ. ಹೀಗಾಗಿ ಸಮವಸ್ತ್ರದ ಬದಲು ಧಾರ್ಮಿಕ ಉಡುಗೆ ತರವಲ್ಲ ಎಂಬ ಅಂಶಕ್ಕೆ ಒತ್ತು ನೀಡಿ ಈ ಆದೇಶ ಹೊರಡಿಸಲಾಗಿದೆ.

ಸೌದಿ ರಾಜಕುವರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರು ಮಹಿಳೆಯರಿಗೆ ಸಮಾನ ಹಕ್ಕು ಕಲ್ಪಿಸುವ ಧ್ಯೇಯ ಹೊಂದಿದ್ದು, ಅವರ ಸೂಚನೆ ಮೇರೆಗೆ ಆದೇಶ ಹೊರಬಿದ್ದಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಆದರೆ ಅಬಯಾಗೆ ಮಾತ್ರ ನಿಷೇಧ ಹೇರಲಾಗಿದ್ದು, ಹಿಜಾಬ್‌ ಬಗ್ಗೆ ಇಲ್ಲಿ ಪ್ರಸ್ತಾಪ ಇಲ್ಲ.

ಅಬಾಯಾ ಎಂಬುದು ಕುತ್ತಿಗೆಯಿಂದ ಕಾಲಿನ ವವರೆಗೆ ದೇಹ ಮುಚ್ಚುವ ಬುರ್ಖಾವನ್ನೇ ಹೋಲುವ ಉಡುಗೆಯಾಗಿದೆ. ಆದರೆ ಇದು ತಲೆಗೆ ಅನ್ವಯಿಸುವುದಿಲ್ಲ. ಇನ್ನು ಹಿಜಾಬ್‌ ಎಂಬುದು ತಲೆಯನ್ನು ಮುಚ್ಚುವ ವಸ್ತ್ರವಾಗಿದೆ.

Leave A Reply

Your email address will not be published.