ದಕ್ಷಿಣ ಕನ್ನಡದಲ್ಲಿ ಮುಂದುವರಿದ ಬ್ಯಾನರ್ ವಿವಾದ | ಕದ್ರಿ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ
ಮಂಗಳೂರು ನಗರದ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ಯಾನರ್ ವಿಚಾರ ಕೊಂಚ ಮಟ್ಟಿಗೆ ತಣ್ಣಗಾಯಿತು ಎನ್ನುವಷ್ಟರಲ್ಲಿ ಇದೀಗ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಜಾತ್ರೋತ್ಸವಕ್ಕೆ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಿರ್ಬಂಧ ಹೇರಲಾಗಿದೆ. ದೇವಸ್ಥಾನದ ವಠಾರದಲ್ಲಿ ಹಿಂದೂ ಸಂಘಟನೆಗಳು ನಿರ್ಬಂಧದ ಬ್ಯಾನರ್ ಅಳವಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜಾತ್ರೋತ್ಸವಗಳಲ್ಲಿ ಮತ್ತೆ ಬ್ಯಾನರ್ ವಿವಾದ ಮುಂದುವರಿದಿದೆ. ಮಂಗಳೂರು ನಗರ ವಲಯದಲ್ಲಿರುವ ಕಾವೂರು ದೇವಸ್ಥಾನದ ಬಳಿಕ ಇದೀಗ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಬ್ಯಾನರ್ ವಿವಾದ ಮುನ್ನಲೆಗೆ ಬಂದಿದೆ. ಹೀಗಾಗಿ ಮತ್ತೊಮ್ಮೆ ಎರಡು ಬಣಗಳ ನಡುವೆ ಕಿತ್ತಾಟ ನಡೆಸಲು ಮುನ್ನುಡಿ ಬರೆಯುವ ಸಾಧ್ಯತೆ ದಟ್ಟವಾಗಿದೆ. ಕುಕ್ಕರ್ ಬಾಂಬ್ ಸ್ಫೋಟದ ಕುರಿತಾಗಿ ಉಲ್ಲೇಖವಿದ್ದು ಹಿಂದೂಪರ ಸಂಘಟನೆಗಳ ಪರವಾಗಿ ದೇವಸ್ಥಾನದ ಪ್ರವೇಶದಲ್ಲೇ ಬ್ಯಾನರ್ ಅಳವಡಿಕೆ ಮಾಡಲಾಗಿದೆ.
ಕಳೆದ ವರ್ಷ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಡೆಸಲು ಸಮ್ಮತಿ ನಿರಾಕರಿಸಲಾಗಿತ್ತು. ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದಲೇ ಈ ರೀತಿಯ ಬ್ಯಾನರ್ ಅಳವಡಿಸಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ದೇವಸ್ಥಾನದ ಆಡಳಿತ ಮಂಡಳಿಯು ಸರಕಾರದ ನಿಯಮಾವಳಿಯ ಪ್ರಕಾರವೇ ಈ ಕ್ರಮ ಕೈಗೊಂಡಿರುವುದಾಗಿ ಸ್ಪಷ್ಟನೆ ಕೂಡ ನೀಡಿತ್ತು.
ಕಳೆದ ವರ್ಷ ನಡೆದ ಹಿಜಾಬ್ ಹೋರಾಟದ ಬಳಿಕ ಈ ರೀತಿಯ ಬೆಳವಣಿಯಾಗಿ ಆರಂಭವಾಗಿ ಇದೀಗ ಎಲ್ಲೆಡೆ ಈ ಕ್ರಮ ಅನುಸರಿಸಲಾಗುತ್ತಿದೆ. ನಿಷೇಧದ ಬ್ಯಾನರುಗಳು ಹಿಂದೂ ಮುಸ್ಲಿಂ ಸಾಮರಸ್ಯದ ಸಂಕೇತವಾಗಿರುವ ಮೂಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆ ಸಂದರ್ಭದಲ್ಲಿ ಕೂಡ ಬ್ಯಾನರ್ ಅಳವಡಿಸಲಾಗಿತ್ತುಕರಾವಳಿ ಜಿಲ್ಲೆಗಳ ಬಳಿಕ ಚಿಕ್ಕಮಗಳೂರು, ಹಾಸನ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲೂ ಈ ರೀತಿಯ ಬೆಳವಣಿಗೆ ಕಂಡುಬಂದಿದೆ.
ಕಳೆದ ವರ್ಷ ಅವಿಭಜಿತ ದಕ್ಷಿಣ ಕನ್ನಡ ಕನ್ನಡ ಜಿಲ್ಲೆಯಲ್ಲಿ ಭುಗಿಲೆದ್ದ ನಿಷೇಧದ ಬ್ಯಾನರ್ ವಿವಾದ ಈ ಬಾರಿಯು ಕೂಡ ಮುಂದುವರಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಪ್ಪನಾಡು, ಉಡುಪಿ ಜಿಲ್ಲೆಯ ಕಾಪು, ಪೆರ್ಡೂರು ದೇವಸ್ಥಾನಗಳಲ್ಲಿ ಈ ರೀತಿಯ ಬ್ಯಾನರ್ ಗಳು ಕಾಣಿಸಿಕೊಂಡದ್ದು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಇದೀಗ ಮಂಗಳೂರಿನ ಸುಪ್ರಸಿದ್ದ ಕದ್ರಿ ದೇವಾಲಯದಲ್ಲಿ ಕೂಡ ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಉಲ್ಲೇಖಿಸಿ ವಿಹಿಂಪ ಮತ್ತು ಬಜರಂಗದಳ ಬ್ಯಾನರ್ ಅಳವಡಿಸಿದೆ.
ಕದ್ರಿ ವಿಶ್ವ ಹಿಂದೂ ಪರಿಷತ್ ಘಟಕದಿಂದ ದೇವಸ್ಥಾನದ ಪ್ರವೇಶದಲ್ಲೇ ಬ್ಯಾನರ್ ಅಳವಡಿಸಲಾಗಿದ್ದು, ಜ.15ರಿಂದ ಜ.25ರ ವರೆಗೆ ಕದ್ರಿ ಜಾತ್ರೋತ್ಸವ ಜರುಗಲಿದೆ. ಈಗಾಗಲೇ ದೇವಸ್ಥಾನದ ರಸ್ತೆಯುದ್ದಕ್ಕೂ ಸ್ಟಾಲ್‌ಗಳನ್ನು ಅಳವಡಿಸಲಾಗಿದೆ. ಕದ್ರಿ ಶ್ರೀಮಂಜುನಾಥ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಹಿನ್ನೆಲೆ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ಹಲವು ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದಾರೆ. ಅದೆ ರೀತಿ ಈ ಬಾರಿಯೂ ಮುಸ್ಲಿಂ ವ್ಯಾಪಾರಿಗಳು ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಬಂದಿದ್ದು , ಈ ವೇಳೆ ಅನ್ಯಧರ್ಮೀಯರನ್ನು ಬಜರಂಗದಳ ಕಾರ್ಯಕರ್ತರು ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.