ವಿಮಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ಏರ್ ಇಂಡಿಯಾಗೆ ಆಘಾತ | 30 ಲಕ್ಷ ದಂಡ – ಪೈಲಟ್ ಪರವಾನಗಿ 3 ತಿಂಗಳು ಅಮಾನತು
ವಿಮಾನದಲ್ಲಿ ವೃದ್ಧ ಪ್ರಯಾಣಿಕಳ ಮೇಲೆ ಮದ್ಯದ ಅಮಲಿನಲ್ಲಿ ಸಹ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣ ಕೋರ್ಟ್ ಮೆಟ್ಟಿಲನ್ನು ಸಹ ಹತ್ತಿ ಬಂದಿತ್ತು. ಇದೀಗ ಈ ಪ್ರಕರಣದಲ್ಲಿ ಏರ್ ಇಂಡಿಯಾಗೆ ಭಾರಿ ದಂಡದ ಬರೆ ಬಿದ್ದಿದೆ.
ಪ್ರಕರಣದ ತನಿಖೆ ನಡೆಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾ ಸಂಸ್ಥೆಗೆ 30 ಲಕ್ಷ ರೂ ದಂಡ ವಿಧಿಸಿದೆ. ಜತೆಗೆ ನ್ಯೂಯಾರ್ಕ್- ದಿಲ್ಲಿ ವಿಮಾನದ ಪೈಲಟ್ ಇನ್ಚಾರ್ಜ್ನ ಚಾಲನಾ ಪರವಾನಗಿಯನ್ನು ಮೂರು ತಿಂಗಳು ಅಮಾನತು ಮಾಡಿದೆ.
ಈ ಘಟನೆ 2022ರ ನವೆಂಬರ್ 26ರಂದು ನಡೆದಿದೆ. ಅಂದು ವಿಮಾನದ ವಾಚ್ಡಾಗ್ (ವಿಚಕ್ಷಣಾ ವಿಭಾಗ) ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕೆ ಏರ್ ಇಂಡಿಯಾದ ಇನ್-ಫ್ಲೈಟ್ ಸೇವೆಗಳ ನಿರ್ದೇಶಕರ ಮೇಲೆ 3 ಲಕ್ಷ ರೂ. ದಂಡವನ್ನೂ ವಿಧಿಸಿರುವುದಾಗಿ ತಿಳಿಸಿದೆ.
ಇದರ ಕುರಿತು ಪ್ರತಿಕ್ರಿಯಿಸಿದ ಏರ್ ಇಂಡಿಯಾ ‘ಈ ಘಟನೆ ಕುರಿತು ನಾವು ವರದಿ ನೀಡುವಲ್ಲಿ ಉಂಟಾಗಿರುವ ಅಂತರವನ್ನು ಒಪ್ಪಿಕೊಳ್ಳುತ್ತೇವೆ. ಅವುಗಳನ್ನು ಸರಿಪಡಿಸುವ ಸಲುವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಎಂದಿದೆ.
ಏರ್ ಇಂಡಿಯಾ ಸಂಸ್ಥೆಯು ಆರೋಪಿ ಪ್ರಯಾಣಿಕ ಶಂಕರ್ ಮಿಶ್ರಾ ಮೇಲೆ ನಾಲ್ಕು ತಿಂಗಳ ನಿಷೇಧ ವಿಧಿಸಿ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆ ಆತನಿಗೆ ವಿಧಿಸಿದ್ದ 30 ದಿನಗಳ ಪ್ರಯಾಣ ನಿರ್ಬಂಧವನ್ನು ವಿಸ್ತರಣೆ ಮಾಡಲಾಗಿದೆ.