KSRTC ನೌಕರರಿಗೆ ಸಂಕ್ರಾಂತಿಗೆ ಸಿಕ್ತು ಭರ್ಜರಿ ಗುಡ್‌ನ್ಯೂಸ್
ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿನ ಸಾರ್ವಜನಿಕರಿಗೆ ಉತ್ತಮ ಹಾಗೂ ಗುಣಮಟ್ಟದ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುವ ಸಾರಿಗೆ ನಿಗಮಗಳ ನೌಕರರಿಗೆ ಶುಭ ಸುದ್ದಿ ಕಾದಿದೆ.
ಹೌದು!!ಕೆಎಸ್ ಆರ್ ಟಿಸಿ (KSRTC) ತನ್ನ ನೌಕರರಿಗೆ ಸಾರ್ವತ್ರಿಕ/ಹಬ್ಬದ ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವಂತಹ ನೌಕರರಿಗೆ ಹೆಚ್ಚುವರಿ ವೇತನ ನೀಡಲು ಆದೇಶ ಹೊರಡಿಸಿದೆ. ಇನ್ನು ಸಾಲು ಸಾಲು ಹಬ್ಬದ ಸಂಭ್ರಮ ಮನೆ ಮಾಡುವ ಹಿನ್ನೆಲೆ ಈ ದಿನಗಳಲ್ಲಿ ಜನದಟ್ಟಣೆ ಹೆಚ್ಚಿರಲಿದೆ.
ಹಬ್ಬದ ಸೀಸನ್ ಆಗಿರುವ ಹಿನ್ನೆಲೆ ವಾಹನಗಳ ಕಾರ್ಯಾಚರಣೆಗೆ ನೆರವಾಗುವ ನಿಟ್ಟಿನಲ್ಲಿ ಸಿಬ್ಬಂದಿಗಳ ಲಭ್ಯತೆ ಅನಿವಾರ್ಯ ವಾಗಿರುವುದರಿಂದ ಜನವರಿ-23 ರಿಂದ ಜೂನ್-23 ರವರೆಗೆ ನೌಕರರು ಆಯ್ಕೆ ಮಾಡಿಕೊಂಡಿರುವ ಸಾರ್ವತ್ರಿಕ/ಹಬ್ಬದ ರಜಾ ದಿನಗಳಿಗೆ ಸೀಮಿತಗೊಳಿಸಿ ಸದರಿ ಸಾರ್ವತ್ರಿಕ / ಹಬ್ಬದ ರಜೆ ದಿನದಂದು ಕರ್ತವ್ಯ ನಿರ್ವಹಿಸಿದಲ್ಲಿ ಹೆಚ್ಚುವರಿ ವೇತನ (Double Wages) ಪಾವತಿಗೆ ಸೂಕ್ತಾಧಿಕಾರಿಗಳು ವೇತನ ಮಂಜೂರಾತಿ ಮಾಡಿದ್ದಾರೆ ಎನ್ನಲಾಗಿದೆ. ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಈ ಕುರಿತು ಆದೇಶ ಹೊರಡಿಸಿದ್ದು, ಹಿರಿಯ/ ವಿಭಾಗ ನಿಯಂತ್ರಣಾಧಿಕಾರಿಗಳು/ ಕಾರ್ಯ ವ್ಯವಸ್ಥಾಪಕರು ಕರಾರಸಾ ನಿಗಮ ಇವರಿಗೆ ಈ ಕುರಿತಾದ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.