ತಹಶೀಲ್ದಾರ್ ವರ್ಗಾವಣೆಗೆ ಕಣ್ಣೀರಿಟ್ಟ ಶಾಸಕ! ಅಧಿಕಾರಿ ಹಾಗೂ ರಾಜಕಾರಿಣಿಯ ಸ್ನೇಹಮಯ ಭಾಂದವ್ಯಕ್ಕೆ ಸಾಕ್ಷಿಯಾಯಿತು ಕಾರ್ಯಕ್ರಮ!

ಸರಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಡುವೆ ಮುಸುಕಿನ ಗುದ್ದಾಟಗಳು ಇದ್ದೇ ಇರುತ್ತವೆ. ಅದರಲ್ಲೂ ಶಾಸಕರು ಹಾಗೂ ಆಯಾ ಕ್ಷೇತ್ರಗಳಲ್ಲಿರುವ ಉನ್ನತ ಅಧಿಕಾರಿಗಳು ಹಾವು ಮುಂಗಸಿ ಇದ್ದಹಾಗೆ ಎಂದು ಹಲವರು ಅಭಿಪ್ರಾಯ ಪಡುತ್ತಾರೆ. ಅಲ್ಲದೆ ಅಧಿಕಾರಗಳು ನಾವು ಹೇಳುವ ಮಾತುಗಳನ್ನು ಕೇಳುವುದಿಲ್ಲ ಎಂಬಕಾರಣಕ್ಕೆ ವರ್ಗಾವಣೆ ಮಾಡಿಸಲು ಓಡಾಡುತ್ತಾರೆ. ಆದರೆ ಅಧಿಕಾರಿಯೊಬ್ಬರು ವರ್ಗಾವಣೆಗೊಂಡರು ಅಂತ ಕ್ಷೇತ್ರದ ಶಾಸಕ ಕಣ್ಣೀರಿಟ್ಟಂತಹ ಪ್ರಸಂಗವೊಂದು ಇಂದು ನಡೆದಿದೆ

ಹೌದು, ಅಧಿಕಾರಿಯೊಬ್ಬರು ವರ್ಗಾವಣೆ ಆದರು ಅಂತ ಕ್ಷೇತ್ರದ ಶಾಸಕ ಕಣ್ಣೀರಿಟ್ಟಂತಹ ಪ್ರಸಂಗ ನಡೆದಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಈ ರೀತಿಯ ಘಟನೆ ನಡೆದಿದೆ. ವರ್ಗಾವಣೆಗೊಂಡ ಅಧಿಕಾರಿಯೊಬ್ಬರನ್ನ ಬೀಳ್ಕೊಡುವ ಸಂದರ್ಭದಲ್ಲಿ ಶಾಸಕ ಎ.ಟಿ ರಾಮಸ್ವಾಮಿ ವೇದಿಕೆಯ ಭಾಷಣದಲ್ಲಿ ಗದ್ಗದಿತರಾಗಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಆರ್ ಶ್ರೀನಿವಾಸ್ ಮುಂಬಡ್ತಿ ಪಡೆದು ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದಾರೆ. ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮತ್ತು ಅರಕಲಗೂಡು ಅಭಿಮಾನಿಗಳ ಸಂಘ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಅಭಿನಂದನೆ ಹಾಗೂ ಬೀಳ್ಕೋಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಪ್ರಸ್ತುತ ರಾಜಕಾರಣಿಗಳು, ತಮ್ಮ ಕ್ಷೇತ್ರದ ಅಧಿಕಾರಗಳು ನಾವು ಹೇಳುವ ಮಾತುಗಳನ್ನು ಕೇಳುವುದಿಲ್ಲ ಎಂಬಕಾರಣಕ್ಕೆ ವರ್ಗಾವಣೆ ಮಾಡಿಸಲು ಓಡಾಡುತ್ತಾರೆ. ಇಂತಹ ರಾಜಕಾರಣಿಗಳ ನಡುವೆ ತಹಸೀಲ್ದಾರ್‌ ವರ್ಗಾವಣೆಗೆ ಜೆಡಿಎಸ್‌ ಶಾಸಕ ಎ.ಟಿ ರಾಮಸ್ವಾಮಿ ಕಣ್ಣೀರಿಟ್ಟಿದ್ದಾರೆ. ಅರಕಲಗೂಡು ತಾಲೂಕಿನ ತಹಸೀಲ್ದಾರ್ ಆಗಿ ಕಳೆದ ಕೆಲ ವರ್ಷಗಳಿಂದ ಕೆ.ಆರ್ ಶ್ರೀನಿವಾಸ್ ಕಾರ್ಯನಿರ್ವಹಿಸುತ್ತಿದ್ದರು, ಇದೀಗ ಮುಂಬಡ್ತಿ ಪಡೆದು ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದಾರೆ. ಶ್ರೀನಿವಾಸ್‌ಗೆ ಅಭಿನಂದನೆ ಪೂರ್ವಕವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅವರ ಕಾರ್ಯ ವೈಖರಿಯನ್ನು, ಅವರ ಮಾನವೀಯತೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಇದೇ ವೇಳೆ ಮಾತನಾಡಿದ ಶಾಸಕ ಎ.ಟಿ ರಾಮಸ್ವಾಮಿ ನನ್ನ ಇತಿಹಾಸದಲ್ಲಿಯೇ ತಾಲೂಕು ಕಚೇರಿಗೆ ಬಂದಂತಹ ವ್ಯಕ್ತಿಗಳಿಗೆ ಆತ್ಮೀಯತೆಯಿಂದ ಬರಮಾಡಿಕೊಂಡು ಕಾಫಿ ಟೀ ನೀಡಿ ಉಪಚರಿಸುವ ವ್ಯಕ್ತಿಯನ್ನು ನೋಡಿರುವುದು ಇದೇ ಮೊದಲೇ ಬಾರಿಗೆ. ಅಂತಹ ವ್ಯಕ್ತಿ ತಾಲೂಕಿನಲ್ಲಿ ಸಾಕಷ್ಟು ರೈತಪರ ಕಾರ್ಯಗಳನ್ನ ಮಾಡಿದ್ದಾರೆ. ಅರಕಲಗೂಡು ತಾಲೂಕಿನ ಜನತೆ ಅವರನ್ನ ಯಾವತ್ತೂ ಮರೆಯುವುದಿಲ್ಲ ಎಂದು ಮಾತು ಮುಂದುವರೆಸಿದ ಶಾಸಕರು ಒಂದು ಕ್ಷಣ ಗದ್ಗದಿತರಾಗಿ ದುಃಖದಿಂದ ಕಣ್ಣೀರಿಟ್ಟರು

ತಹಸೀಲ್ದಾರ್‌ ಆಗಿದ್ದ ಕೆ.ಆರ್‌ ಶ್ರೀನಿವಾಸ್‌ ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ. ನಾನು ಕ್ಷೇತ್ರದ ಶಾಸಕನಾಗಿ ಅವರು ಯಾವುದೇ ಕೆಲಸ ಬಗ್ಗೆ ಪ್ರಸ್ತಾಪಿಸಿದ್ದಾಗ, ಅವುಗಳ ಮಂಜೂರಾತಿಗೆ ತಾಲೂಕಿನಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ನನ್ನ ಗಮನಕ್ಕೆ ತರುತ್ತಿದ್ದರು. ಇಂತಹ ಒಬ್ಬ ಪ್ರಮಾಣಿಕ ವ್ಯಕ್ತಿ ನಮ್ಮ ತಾಲೂಕಿನಿಂದ ಬೇರೆಡೆ ಹೋಗುತ್ತಿರುವುದು ನಮಗೆ ನೋವಾಗಿದೆ ಎಂದು ಜೆಡಿಎಸ್‌ ಶಾಸಕ ಎ.ಟಿ ರಾಮಸ್ವಾಮಿ ಹೇಳಿದರು.

ಶಾಸಕರ ಮಾತನ್ನ ಕೇಳಿ ತಹಸೀಲ್ದಾರ್ ಕೂಡ ಬಾವುಕರಾಗಿ ಕಣ್ಣೀರು ಹಾಕಿದ್ದು, ನಾನು ಕೂಡ ತುಮಕೂರು ಜಿಲ್ಲೆಯವನು, ನನ್ನ ತಂದೆ ರೈತ ಕುಟುಂಬದಿಂದ ಬಂದವರು. ತಾಲೂಕು ಕಚೇರಿಗೆ ಒಬ್ಬ ರೈತ ಹೋದರೆ ಯಾವ ರೀತಿಯ ಕಷ್ಟ ಇರುತ್ತೆ ಎಂದು ನನಗೆ ಗೊತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ರೈತರಿಗೆ ಆ ಕಷ್ಟ ಬರಬಾರದು. ನನ್ನ ಕಚೇರಿಗೆ ಬರುವ ಯಾವುದೇ ರೈತರನ್ನು ನಾನು ದೇವರಂತೆ ಭಾವಿಸಿ ಸತ್ಕರಿಸುತ್ತೇನೆ ಎಂದು ಮನದಾಳದ ಮಾತನ್ನು ತೆರೆದಿಟ್ಟರು.

Leave A Reply

Your email address will not be published.