‘ತಪಸ್ವಿಗಳು ತಪಸ್ಸು ಮಾಡುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ ಫೋಟೋ ಹಂಚಿಕೊಂಡ ವಿರೋಧಿಗಳು! ಅಷ್ಟಕ್ಕೂ ಫೋಟೋದಲ್ಲಿ ಇರುವುದಾದರೂ ಏನು?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಹರಿಯಾಣದ ಕುರುಕ್ಷೇತ್ರದ ಮೂಲಕ ಹಾದು ಹೋಗುವಾಗ ರಾಹುಲ್, ಬಿಜೆಪಿ ಮತ್ತು RSS ಅನ್ನು ಕೌರವರು, ಪಾಂಡವರು ಎಂದೆಲ್ಲ ಹೇಳಿ ತಮ್ಮನ್ನು ತಪಸ್ವಿ ಎಂದು ಬಿಂಬಿಸಿಕೊಂಡಿದ್ದರು. ಇದರ ಕುರಿತು ವ್ಯಾಪಕ ಟೀಕೆಗಳೂ ಬಂದಿದ್ದವು. ಇದರ ಬೆನ್ನಲ್ಲೇ ರಾಹುಲ್ ಗಾಂಧಿಯವರು ಹೋಟೆಲ್ ಒಂದರಲ್ಲಿ ಕುಳಿತಿರುವ ಫೋಟೋವನ್ನು ಅನೇಕರು ವ್ಯಂಗ್ಯವಾದ ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ.

ರಾಹುಲ್ ಗಾಂಧಿ ಎದುರಿರುವ ಮೇಜಿನ ಮೇಲೆ ಚಿಕನ್ ಮತ್ತು ಮದ್ಯದ ಲೋಟ ಇರುವ ಫೋಟೋ ಇದಾಗಿದ್ದು, ಯಾತ್ರೆಯ ಸಮಯದಲ್ಲಿ ಛಾಯಾಚಿತ್ರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ಚಿತ್ರವನ್ನು ಅನೇಕರು ತಪಸ್ವಿ, ತಪಸ್ಸಿನಲ್ಲಿ ಮುಳುಗಿದ್ದಾರೆ ಎಂದು ವ್ಯಂಗ್ಯವಾಗಿ ಕೆಣಕುವ ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಕಾಶ್ಮೀರದತ್ತ ಸಾಗುತ್ತಿದ್ದು ಕೊನೆಯ ಹಂತವನ್ನು ತಲುಪುತ್ತಿದೆ. ಯಾತ್ರೆಯು ಹರಿಯಾಣದ ಮೂಲಕ ಸಾಗುತ್ತಿದ್ದಂತೆ, ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಆದರೆ ಈ ವೈರಲ್ ಚಿತ್ರದ ಫ್ಯಾಕ್ಟ್ ಚೆಕ್ ಮಾಡಿದ ಇಂಡಿಯಾ ಟುಡೇ ತಂಡ, ಈ ಫೋಟೋ ತಿರುಚಿದ ಫೋಟೋ ಎಂದು ವರದಿ ಮಾಡಿದೆ. ವೈರಲ್ ಚಿತ್ರದ ರಿವರ್ಸ್ ಇಮೇಜ್ ಹುಡುಕಾಟವು ಗುರುಪ್ರೀತ್ ಗ್ಯಾರಿ ವಾಲಿಯಾ ಎಂಬ ದೃಢೀಕೃತ ಟ್ವಿಟರ್ ಬಳಕೆದಾರರ ಟ್ವೀಟ್‌ಗೆ ಕರೆದೊಯ್ಯಿತು, ಇವರು ಪತ್ರಕರ್ತರಾಗಿದ್ದಾರೆ. ಈ ಚಿತ್ರವು ಗಾಂಧಿಯವರ ಮುಂದೆ ಗಾಜಿನ ಲೋಟದಲ್ಲಿ ಚಹಾ ಅಥವಾ ಕಾಫಿ, ಡ್ರೈ ಫ್ರೂಟ್ಸ್ ತಟ್ಟೆಗಳನ್ನು ತೋರಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಟೈಮ್ಸ್ ನೌ ವರದಿಗಾರದ ಪತ್ರಕರ್ತ ಪರಂಜಾಯ್ ಗುಹಾ ಠಾಕುರ್ತಾ ಅವರು ಭಾರತ್ ಜೋಡೋ ಯಾತ್ರೆಯು ಪಂಜಾಬ್ ಅನ್ನು ದಾಟಿದಾಗ ಹರಿಯಾಣದ ಕರ್ನಾಲ್‌ನಿಂದ ಸ್ವಲ್ಪ ದೂರದಲ್ಲಿರುವ ಕೆಫೆಯೊಂದರಲ್ಲಿ ರಾಹುಲ್ ಊಟ ಮಾಡುತ್ತಿದ್ದಾಗ ಅವರನ್ನು ಭೇಟಿಯಾದರು. ಈ ಸಮಯದಲ್ಲಿ ಅವರು ಕೆಫೆಯೊಳಗೆ ಚಿತ್ರೀಕರಿಸಿದ ರಾಹುಲ್ ಗಾಂಧಿಯವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ಚಿತ್ರವೂ ಅದೇ ಆಗಿದೆ. ಆದರೆ ಅದನ್ನು ಎಡಿಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಸತ್ಯವು ತಿಳಿದಿದ್ದು, ಜನವರಿ 9 ರಂದು ಟೈಮ್ಸ್ ನೌ ವರದಿಯು ರಾಹುಲ್ ಅವರ ಆಹಾರಕ್ರಮದ ಬಗ್ಗೆ ವರದಿ ಪ್ರಕಟಿಸಿದೆ . ಜನವರಿ 7ರಂದು ಪರಂಜಾಯ್ ಅವರ ಟ್ವೀಟ್ ಪ್ರಕಾರ ಇದು ಅವರು ತೆಗೆದ ಚಿತ್ರವಾಗಿದೆ.

ಭಕ್ತರು ಚಿತ್ರದಲ್ಲಿ ಯಾವುದಾದರೂ ಹುಳುಕು ಕಂಡುಕೊಳ್ಳಬಹುದೇ ಎಂದು ಪರಿಶೀಲಿಸಲು ಅದನ್ನು ಝೂಮ್ ಮಾಡುತ್ತಿರಬೇಕು ಎಂದು ವಾಲಿಯಾ ಟ್ವೀಟ್ ಮಾಡಿದ್ದಾರೆ. ವಾಲಿಯಾ ಟ್ವೀಟ್ ಮಾಡಿದ ಮತ್ತು ವೈರಲ್ ಆಗಿರವ ಚಿತ್ರಗಳನ್ನು ಹೋಲಿಸಿದಾಗ ಒಂದು ಲೋಟ ಆಲ್ಕೋಹಾಲ್ ಮತ್ತು ಚಿಕನ್ ಪ್ಲೇಟ್ ಅನ್ನು ಮೂಲ ಚಿತ್ರಕ್ಕೆ ಡಿಜಿಟಲ್ ಆಗಿ ಸೇರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

Leave A Reply

Your email address will not be published.