ಅಡಿಕೆ ಬೆಳೆಗೆ ಮುಂದೆ ಭವಿಷ್ಯವಿಲ್ಲ ಎಂದ ಅರಗ ಜ್ಞಾನೇಂದ್ರ | ಗೃಹಮಂತ್ರಿಗಳ ಹೇಳಿಕೆಗೆ ಎಲ್ಲೆಡೆ ಭಾರಿ ಆಕ್ರೋಶ!!
ಅಡಿಕೆ ಬೆಳೆಯು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದ ಸಾಂಪ್ರದಾಯಿಕ ಬೆಳೆಯಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿ ಅಡಿಕೆಗೆ ಇರುವ ಬೆಲೆ ಮತ್ತು ಅದರ ಬೇಡಿಕೆಯನ್ನು ಮನಗಂಡ ರೈತರು ಅಡಿಕೆ ಕೃಷಿಯನ್ನು ನಾಡಿನಾದ್ಯಂತ ಶರವೇಗದಲ್ಲಿ ಬೆಳೆಸುತ್ತಿದ್ದಾರೆ. ಮುಗಿಬಿದ್ದು ತೋಟಗಳನ್ನು ಮಾಡುತ್ತಿದ್ದಾರೆ. ಈ ಎಲ್ಲದರ ನಡುವೆ ಅಡಿಕೆ ಕೃಷಿ ಮಾಡಲು ಸರಕಾರ ಹೊಸ ನಿಯಮದ ಸಿದ್ಧತೆ ನಡೆಸುತ್ತಿದೆ. ಏನಿದು ಹೊಸ ನಿಯಮ? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಅಡಿಕೆ ಬೆಳೆಯ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದು, ಅಡಿಕೆ ಬೆಳೆಗೆ ಭವಿಷ್ಯವಿಲ್ಲ ಎಂಬ ಅಭಿಪ್ರಾಯ ಮೂಡಿತ್ತು. ಕರಾವಳಿ- ಮಲೆನಾಡಿನ ಬೆಳೆ ಇದೀಗ ಬಯಲುಸೀಮೆಗೂ ವ್ಯಾಪಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಬಹುದು. ಇದೇ ಪರಿಸ್ಥಿತಿ ರಾಜ್ಯದಲ್ಲಿ ಮುಂದುವರೆದರೆ ಎಲ್ಲಾ ಅಡಿಕೆ ಬೆಳೆಗಾರರು ಭವಿಷ್ಯದಲ್ಲಿ ಬೀದಿಗೆ ಬೀಳಲಿದ್ದಾರೆ. ಅಲ್ಲದೆ ಅಡಿಕೆ ಬೆಳೆಯುವುದು ಹೀಗೇ ಹಬ್ಬುತ್ತ ಹೋದರೆ ಆಹಾರ ಬೆಳೆಗಳು ಕಡಿಮೆಯಾಗಿ ಅದರ ಬೆಲೆ ಗಗನಕ್ಕೇರುತ್ತದೆ ಎಂಬ ಆತಂಕ ಎಲ್ಲೆಡೆ ಮೂಡಿದೆ.
ಈ ಬಗ್ಗೆ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ಮಾತನಾಡಿ ‘ಅಡಿಕೆ ಬೆಳೆಯು ಬೆಳೆಯದಂತಹ ಜಾಗದಲ್ಲೂ ಇಂದು ಅದನ್ನು ಬೆಳೆಯುತ್ತಿದ್ದಾರೆ. ವರ್ಷದಲ್ಲಿ ನರ್ಸರಿಗಳಲ್ಲಿ ಕೋಟಿಗಟ್ಟಲೆ ಅಡಿಕೆ ಸಸಿಗಳು ಖಾಲಿಯಾಗುತ್ತಿವೆ. ಎಲ್ಲಿಗೆ ಹೋಗಿ ಎಷ್ಟು ದೂರ ಕಣ್ಣು ಹಾಯಿಸಿದರೂ ಜಮೀನುಗಳಲ್ಲಿ ಅಡಿಕೆ ಬೆಳೆಯೇ ಕಾಣಿಸುತ್ತದೆ. ಆಂಧ್ರ ಪ್ರದೇಶದಲ್ಲಿ ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯುತ್ತಿದ್ದಾರೆ. ಇದು ಇನ್ನೂ ವ್ಯಾಪಿಸುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಮುಂದೆ ಮಾತನಾಡಿದ ಅವರು ‘ಆಹಾರ ಬೆಳೆಗಳನ್ನು ಬೆಳೆಯುವ ಉದ್ದೇಶದಿಂದ ಸಾಲ ಮಾಡಿ ಡ್ಯಾಂಮ್ ಕಟ್ಟಿದ್ದೇವೆ. ಆದರೆ ಪ್ರಸ್ತುತ ಅಡಕೆ ಬೆಳೆಯುವ ಸಲುವಾಗಿ ಆ ನೀರನ್ನು ಬಳಸುವಂತಾಗಿದೆ. ಹೀಗೆ ಮುಂದುವರಿದರೆ ಇದು ನಮಗೆಲ್ಲರಿಗೂ ಭವಿಷ್ಯದಲ್ಲಿ ಮಾರಕವಾಗಲಿದೆ. ಮುಂದಿನ 5-10 ವರ್ಷಗಳಲ್ಲಿ ಇದರ ಪರಿಣಾಮವನ್ನು ನಾವು ಎದುರಿಸಲಿದ್ದೇವೆ. ರೈತರಿಗೆ ಈ ಕುರಿತು ಮನದಟ್ಟು ಮಾಡಲು ಸಾಧ್ಯವಿಲ್ಲ. ಇನ್ನು ಮುಂದೆ ಅಡಕೆ ಬೆಳೆಗೆ ಪ್ರೋತ್ಸಾಹ ನೀಡುವುದು ಅನಗತ್ಯವಾಗಿದೆ’ ಎಂದು ಹೇಳಿದರು.
ಈ ವಿಚಾರವಾಗಿ ಮಾತನಾಡಿದ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ‘ನಾವೂ ಅಡಿಕೆ ಬೆಳೆಗಾರರು. ನಮ್ಮಲ್ಲಿ 50 ಎಕರೆ ಅಡಿಕೆ ತೋಟವಿದೆ. ಅಡಿಕೆ ಬೆಲೆಗೆ ಪ್ರೋತ್ಸಾಹ ಕೊಡಬಾರದು ಎಂದರೆ ನಾವೆಲ್ಲ ಏನು ಮಾಡೋದು? ಎಷ್ಟೋ ಜನ ರೈತರು ಇದೇ ಬೆಳೆಯನ್ನು ನಂಬಿದ್ದಾರೆ. ಕೃಷಿಯನ್ನು ಪ್ರೋತ್ಸಾಹಿಸಿ’ ಎಂದರು.
ಸದ್ಯ ಗೃಹಮಂತ್ರಿಗಳ ಹೇಳಿಕೆಗೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಕೆಲವೆಡೆ ಪತ್ರಿಕಾ ಗೋಷ್ಠಿಗಳನ್ನು ನಡೆಸಿ ಪ್ರೋತ್ಸಾಹ ಧನಕ್ಕಾಗಿ ಹೋರಾಟ ಮಾಡುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.