ವನ್ಯಜೀವಿ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ! ಫೆಬ್ರವರಿಯಿಂದ ಶುರುವಾಗಲಿದೆ ಚೀತಾ ಪ್ರವಾಸೋದ್ಯಮ
ಭಾರತದಲ್ಲಿ ತೀರಾ ವಿರಳ ಅಥವಾ ನಶಿಸಿಯೇ ಹೋಗಿದ್ದಂತಹ ಚೀತಾ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದಂದು ಆಫ್ರಿಕಾದಿಂದ ಭಾರತಕ್ಕೆ ತರಿಸಲಾಗಿತ್ತು. ಎಂಟು ಚೀತಾಗಳು ಭಾರತಕ್ಕೆ ವಿಶೇಷ ವಿಮಾನದಲ್ಲಿ ತರಿಸಿ ಇವುಗಳನ್ನು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನಕ್ಕೆ ಸೇರಿಸಲಾಗಿತ್ತು. ಇದೀಗ ಈ ಚೀತಾಗಳ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ ಮಧ್ಯಪ್ರದೇಶ ಸರ್ಕಾರ ವನ್ಯಜೀವಿ ಪ್ರಿಯರಿಗೆ ಗುಡ್ನ್ಯೂಸ್ ಕೊಟ್ಟಿದೆ.
ನಮೀಬಿಯಾದಿಂದ ತರಿಸಲಾದ ಚೀತಾಗಳು ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಆರೋಗ್ಯವಾಗಿವೆ. ಈ ಹಿನ್ನೆಲೆಯಲ್ಲಿ 2023ರ ವರ್ಷದ ಫೆಬ್ರವರಿಯಿಂದ ಕುನೊ ಪಾರ್ಕ್ನಲ್ಲಿ ಚೀತಾ ಪ್ರವಾಸೋದ್ಯಮ ಆರಂಭಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೀತಾಗಳನ್ನು ಹಂತ-ಹಂತವಾಗಿ ದೊಡ್ಡ ಆವರಣಕ್ಕೆ ಬಿಡಲಾಗಿದೆ. ಈಗ ಅವು ವಾತಾವರಣಕ್ಕೆ ಒಗ್ಗಿಕೊಂಡಿದ್ದು ಆರೋಗ್ಯಕರವಾಗಿವೆ. ಕಳೆದ ನವೆಂಬರ್ 5 ರಂದು ಎಲ್ಟನ್ ಮತ್ತು ಫ್ರೆಡ್ಡಿ ಗಂಡು ಚೀತಾವನ್ನು , ನವೆಂಬರ್ 18ರಂದು ಒಬಾನ್ ಗಂಡು ಚೀತಾವನ್ನು,, ನವೆಂಬರ್ 27 ರಂದು ಆಶಾ ಮತ್ತು ಟಿಬಿಲಿಸಿ ಹೆಣ್ಣು ಚೀತಾವನ್ನು, ನವೆಂಬರ್ 28 ರಂದು ಸಿಯಾಯಾವನ್ನು, ಸವನ್ನಾ ಹಾಗೂ ಸಾಶಾ ಹೆಣ್ಣು ಚೀತಾಗಳನ್ನ ದೊಡ್ಡ ಆವರಣಕ್ಕೆ ಬಿಡಲಾಗಿದೆ.
ಎಲ್ಲಾ ಚಿರತೆಗಳು ಸಂಪೂರ್ಣವಾಗಿ ಫಿಟ್ ಆಗಿದ್ದು ಮುಕ್ತವಾಗಿ ಬೇಟೆಯಾಡುತ್ತಿವೆ. ಆದರೆ ದೊಡ್ಡ ಆವರಣದಲ್ಲಿರುವ ಚಿರತೆಗಳನ್ನು ತೆರೆದ ಅರಣ್ಯಕ್ಕೆ ಬಿಡುವ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ಚೀತಾ ಟಾಸ್ಕ್ ಫೋರ್ಸ್, ಚಿರತೆ ಪರಿಚಯಿಸುವ ಯೋಜನೆಯ ಮೇಲ್ವಿಚಾರಣೆಯ ತಜ್ಞರ ಗುಂಪು ಹಾಗೂ ಮಧ್ಯಪ್ರದೇಶ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳಲ್ಲಿದೆ ಕುನೊ ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯಾಧಿಕಾರಿ (DFO) ಪ್ರಕಾಶ್ ಕುಮಾರ್ ವರ್ಮಾ ಈ ಬಗ್ಗೆ ಮಾಹಿತಿ ನೀಡಿದರು
ಭಾರತೀಯ ವನ್ಯಜೀವಿ ಸಂಸ್ಥೆಯು `ಭಾರತದಲ್ಲಿ ಚಿರತೆಯ ಮರುಪರಿಚಯಕ್ಕಾಗಿ ಕ್ರಿಯಾ ಯೋಜನೆ’ ಎಂಬುದು ಚೀತಾ ಫ್ಯಾಮಿಲಿಯನ್ನು ಅಭಿವೃದ್ಧಿ ಪಡಿಸಲು ಸಿದ್ಧಪಡಿಸಿರುವ ಯೋಜನೆಯಾಗಿದೆ. ಇದರ ಹಿನ್ನಲೆಯಲ್ಲೆ ಇನ್ನೂ 12 ರಿಂದ 14 ಗಂಡು ಮತ್ತು ಹೆಣ್ಣು ಚೀತಾಗಳನ್ನು ದಕ್ಷಿಣ ಆಫ್ರಿಕಾ, ನಮೀಬಿಯಾ ಹಾಗೂ ಇತರ ಆಫ್ರಿಕನ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ
2023ರ ಫೆಬ್ರವರಿಯಿಂದ ಚೀತಾ ಪ್ರವಾಸೋದ್ಯಮ ಆರಂಭವಾಗುವ ನಿರೀಕ್ಷೆಯನ್ನ ಅಧಿಕಾರಿಗಳು ಹೊಂದಿದ್ದಾರೆ. ಅದಕ್ಕೆ ಪೂರಕ ಸಿದ್ಧತೆಗಳೂ ಬರದಲ್ಲಿ ಸಾಗುತ್ತಿವೆ. ಎಲ್ಲವೂ ಅಂದುಕೊಂಡಂತೆ ಆದರೆ 75 ವರ್ಷಗಳ ಬಳಿಕ ಕಾಡಿನಲ್ಲಿ ಚೀತಾಗಳು ಕಾಣಿಸಿಕೊಳ್ಳಲಿವೆ. ಅಲ್ಲದೇ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ.