ಹೊಸ ಜೇಡ ಪ್ರಭೇದಕ್ಕೆ ಸೇರಿಕೊಂಡಿದೆ ಅರ್ಕಾವತಿ !
ಜೇಡ ಅಂದ್ರೆ ತುಂಬಾ ಜನಕ್ಕೆ ಭಯ ಇರುತ್ತೆ. ಮಾರುದ್ದ ದೂರ ಓದುವವರೇ ಹೆಚ್ಚು. ಆದರೆ ಅವುಗಳ ಜೀವನ ಶೈಲಿಯೇ ವಿಭಿನ್ನ. ನಿಸರ್ಗದ ಜೊತೆಗೆ ಜೀವಿಸುವ ಪ್ರಾಣಿ, ಪಕ್ಷಿಗಳು ಮತ್ತು ಕ್ರಿಮಿ, ಕೀಟಗಳೆ ಸೊಗಸು ಬಿಡಿ.
ಇದೀಗ ಜೇಡ ಪ್ರಭೇದಕ್ಕೆ ಮತ್ತೊಂದು ಜೇಡವು ಸೇರಿಕೊಳ್ಳುತ್ತ ಇದೆ. ಅದುವೇ “ಅರ್ಕಾವತಿ” ಅಂತ. ಯಾಕೆಂದರೆ ಇದು ದೊಡ್ಡಬಳ್ಳಾಪುರ ತಾಲೂಕಿನ ಹತ್ತಿರದಲ್ಲಿರುವ ನಂದಿಬೆಟ್ಟದಲ್ಲಿನ ಹೆಗ್ಗಡಿಹಳ್ಳಿ ಎಂಬಲ್ಲಿ ಈ ಹೊಸ ಪ್ರಭೇದವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.
ಇದು ಸಾಲ್ಟಿಸಿಡೆ ( Salticidae) ಎಂಬ ಎಗರುವ ಜೇಡಗಳ ವಂಶಕ್ಕೆ ಸೇರಿದೆ. ಪಟಪಟನೆ ಹಾರಿ, ಕ್ಷಣಮಾತ್ರದಲ್ಲಿ ಕಣ್ಮರೆಯಾಗುವ ಈ ಜೇಡ ಅರ್ಧ ಸೆಂಟಿಮೀಟರ್ ಅಳತೆಗಿಂತಲೂ ಸ್ವಲ್ಪ ಗಿಡ್ಡವಿದೆ.
ಚಿನ್ಮಯ್ ಸಿ.ಮಳಿಯೆ, ಎಸ್.ಆಶಾ, ಆರ್.ಜನಾರ್ದನ, ಜೆ. ಚೇತನ್, ಎಸ್.ಪಿ. ಹರಿಚರನ್, ನವೀನ್ ಐಯ್ಯರ್, ಕೆ. ಸಾಕ್ಷಿ ಮತ್ತು ಅಕ್ಷಯ್ ದೇಶಪಾಂಡೆ ತಂಡ ಐದು ತಿಂಗಳ ವಾರಾಂತ್ಯಗಳಲ್ಲಿ ಜೇಡ ಹುಡುಕಾಟ ಮತ್ತು ಜೇಡದ ಮಾದರಿ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿದ್ದರು.
ರಷ್ಯಾ ಮೂಲದ ಇಂಟರ್ನ್ಯಾಷನಲ್ ಜರ್ನಲ್ ‘ಅರ್ಥಾಪೋಡ ಸೆಲೆಕ್ಟಾ ‘ ದಲ್ಲಿ ಈ ಹೊಸ ಪ್ರಭೇದದ ಜೇಡದ ಬಗ್ಗೆ ವೈಜ್ಞಾನಿಕವಾಗಿ ವಿವರಿಸಲಾಗಿದೆ. ಭಾರತ, ಚೀನಾ, ವೆಯಿಟ್ನಮ್ ಮತ್ತು ಶ್ರೀಲಂಕಾ ಸೇರಿದಂತೆ ಪ್ರಪಂಚದ ನಾಲ್ಕು ದೇಶಗಳಲ್ಲಿ ಈ ಪ್ರಭೇದದ ಜೇಡವನ್ನು ಕಾಣಬಹುದು.
ಜೇಡದ ಸ್ಪೆಷಾಲಿಟಿ ಏನು? ಈ ಜೇಡ ಎಲ್ಲಾ ಕಡೆನೂ ಮತ್ತು ಎಲ್ಲಾ ಸಮಯದಲ್ಲೂ ಕಾಣುವುದಿಲ್ಲ. ಬಂಡೆಯಿರುವ ನೆಲ ಮತ್ತು ಸುತ್ತ ಸ್ವಲ್ಪ ಕುರುಚಲು, ಒಣ ಹುಲ್ಲು ಇರುವ ಪ್ರದೇಶದಲ್ಲಿ ಜೇಡಗಳು. ಕಾಣಸಿಗುತ್ತದೆ. ಆದರೆ, ಗಿಡ, ಮರಗಳ ಮೇಲೆ ಕಾಣಿಸುವುದಿಲ್ಲ. ಕಾಡು ಮಲ್ಲಿಗೆ ಮತ್ತು ನೀಲಗಿರಿಯ ಸುರಳಿ ಸುತ್ತಿದ ಎಲೆಗಳಲ್ಲಿ ಸಣ್ಣ ಗೂಡು ನಿರ್ಮಿಸಿ ರಾತ್ರಿ ವಿಶ್ರಾಂತಿ ಪಡೆಯುತ್ತದೆ. ಸುರಳಿ ಸುತ್ತಿರುವ ಒಣ ಎಲೆಗಳಲ್ಲಿ ಹೆಣ್ಣು ಜೇಡ ಬಲೆಯ ಗೂಡು ನಿರ್ಮಿಸಿ ಮೊಟ್ಟೆಯಿಟ್ಟು ಮರಿಗಳು ಆಗುವವರೆಗೂ ಕಾಯುತ್ತದೆ. ಗಂಡು, ಹೆಣ್ಣು ಮತ್ತು ಮರಿ ಜೇಡಗಳನ್ನು ತಂಡ ನೋಡಿದೆ.
ರಾಜ್ಯದಲ್ಲಿ 500 ಜೇಡ ಪ್ರಭೇದ: ಗುರುತಿಸಲಾಗಿರುವ ಸುಮಾರು 50,000 ಜೇಡ ಪ್ರಭೇದಗಳ ಪಟ್ಟಿಗೆ ಹೊಸ ಜಾತಿ ಸೇರ್ಪಡೆಯಾಗಿದೆ. ಭಾರತದಲ್ಲಿ ಸುಮಾರು 2,000 ಜೇಡ ಪ್ರಭೇದಗಳಿವೆ ಎಂದು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಸುಮಾರು 500 ಜೇಡದ ಪ್ರಭೇದಗಳಿವೆ.