ಚಪ್ಪಲಿ ಎಸೆತದ ಘಟನೆಯ ನಂತರ ಸುದೀಪ್ ಗೆ ದರ್ಶನ್ ಧನ್ಯವಾದ | ಮಧ್ಯ ಬಂದ ಜಗ್ಗೇಶ್ ಹೇಳಿದ್ದೇನು ಗೊತ್ತಾ?

ಇತ್ತೀಚೆಗಷ್ಟೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಕ್ರಾಂತಿ ಚಿತ್ರದ ಆಡಿಯೋ ಲಾಂಚ್ ಮಾಡಲು ಹೊಸಪೇಟೆಗೆ ಬಂದಂತಹ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ದರ್ಶನ್ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡಿದ್ದು ಅಭಿಮಾನಿಗಳಿಗೆ, ಚಿತ್ರರಂಗದ ಕಲಾವಿದರಿಗೆ ತುಂಬಾನೇ ನೋವುಂಟು ಮಾಡಿತ್ತು. ಇದರ ಬಗ್ಗೆ ಹಲವಾರು ಜನ ಆಕ್ರೋಶ ವ್ಯಕ್ತಪಡಿಸಿದ್ದರು.

 

ಆದರೆ ಅಂದು ಮಾತ್ರ ದರ್ಶನ ತಾಳ್ಮೆ ಕಾಯ್ದುಕೊಂಡು, ಚಪ್ಪಲಿ ಎಸೆದ ವ್ಯಕ್ತಿಗೆ ” ಆಯ್ತು ಬಿಡು ಚಿನ್ನಾ’ ಅಂತ ಲೈಟ್ ದಾಟೀಲಿ ಹೇಳಿ ದೊಡ್ಡತನ ಮೆರೆದಿದ್ದರು. ಸದಾ ಅಗ್ರೆಸ್ಸಿವ್ ಮಾತನ್ನಾಡುವ ದರ್ಶನ ನ ಈ ನಡೆ ವ್ಯಾಪಕ ಮೆಚ್ಚುಗೆಗೆ ಕಾರಣ ಆಗಿತ್ತು. ಕಿಚ್ಚ ಸುದೀಪ್ ಕೂಡ ಇದರ ಬಗ್ಗೆ ಮಾತನಾಡಿ, ಬೇಸರ ವ್ಯಕ್ತಪಡಿಸುವುದರೊಂದಿಗೆ ತಮ್ಮ ಒಂದು ಕಾಲದ ಕುಚುಕು ಗೆಳೆಯನ ಮೇಲಿನ ಪ್ರೀತಿಯನ್ನು ತೋರಿದ್ದರು.

ಇದು ನಾಡಿನಾದ್ಯಂತ ವೈರಲ್ ಕೂಡ ಆಗಿತ್ತು. ಪ್ರೀತಿಯ ಗೆಳೆಯ ಸುದೀಪ್ ಮಾತಿಗೆ ದರ್ಶನ್ ಅವರು ಟ್ವೀಟ್ ಮಾಡಿ ‘ನಿಮ್ಮ ಮಾತಿಗೆ ಧನ್ಯವಾದಗಳು’ ಎಂದು ಹೇಳಿದ್ದರು. ಇದು ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರ ಅಭಿಮಾನಿ ಗಳಿಗೆ ಅತೀವ ಸಂತೋಷವನ್ನು ಉಂಟು ಮಾಡಿದೆ.

ದರ್ಶನ್ ಮತ್ತು ಸುದೀಪ್ ಗೆಳೆತನ ಹಳೆಯದು. ಇಬ್ಬರೂ ಜತೆಗೇ ಪಾರ್ಟಿ ಮಾಡುವಷ್ಟರ ಆತ್ಮೀಯತೆ ಅವರಿಬ್ಬರ ಮಧ್ಯೆ ಇತ್ತು. ಭಾರೀ ಗೆಳೆಯರಾಗಿದ್ದವರ ಫ್ರೆಂಡ್ ಶಿಪ್ ಸಡನ್ ಆಗಿ ಮುರಿದು ಬಿದ್ದಿತ್ತು. ಅವರಿಬ್ಬರ ಮಧ್ಯೆ ಮುನಿಸು ಒಳಗಿಂದೊಳಗೆ ಇದ್ದಂತಿತ್ತು. ಬಹುಶ ಈಗ ಮತ್ತೆ ಗೆಳೆತನ ಚಿಗುರಿ ನಿಲ್ಲುವ ವಸಂತ ಕಾಲ ಅನ್ನಿಸುತ್ತಿದೆ. ಕಾರಣ, ದರ್ಶನ್ ಗೆ ಚಪ್ಪಲಿ ಬೀಸಿ ಆದ ಅವಮಾನದ ಸಂದರ್ಭ ಸುದೀಪ್ ಮಾಡಿದ ಟ್ವೀಟ್.

ಇದೀಗ ಕನ್ನಡದ ಮೇರು ನಟ, ನವರಸ ನಾಯಕ ಜಗ್ಗೇಶ್ ಕೂಡ ಇದರ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ಪ್ರೀತಿಯ ಗೆಳೆಯರಾದ ದರ್ಶನ್ ಮತ್ತು ಸುದೀಪ್ ನೀವು ಹಳೆಯ ಚಿಂತನೆಗಳಿಗೆ ವಿದಾಯ ಹೇಳಿ ಹೊಸ ಸ್ನೇಹಕ್ಕೆ ಮುನ್ನುಡಿಯನ್ನು ಬರೆಯಿರಿ. ಸಹಸ್ರ ಅಭಿಮಾನಿಗಳಿಗೆ ಹರ್ಷದ ಹೊನಲನ್ನು ಹರಿಸಿ. ನೀವಿಬ್ಬರೂ ಒಂದಾದರೆ ಸುಟ್ಟ ಜಾಗ ನಂದನವನ ಆಗುತ್ತದೆ ಎಂದು ಹಾರೈಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹೈಪರ್ ಆಕ್ಟೀವ್ ಆಗಿರುವ ಮತ್ತು ವರ್ತಮಾನದ ಬಗ್ಗೆ ಸದಾ ಜಾಗೃತರಾಗಿ ತೆರೆದುಕೊಳ್ಳುವ ಜಗ್ಗೇಶ್ ಅವರು ದರ್ಶನ ಮತ್ತು ಸುದೀಪ್ ಅವರ ಹಳೆಯ ಗೆಳೆತನವನ್ನು ಮತ್ತೆ ಹೊಸದಾಗಿ ಹುಲುಸಾಗಿ ಬೆಳೆಸಲು ಕರೆ ನೀಡಿದ್ದಾರೆ.

ಆ ಜಾಗದಲ್ಲಿ ಮಿತೃತ್ವದ ನಂದನವನ ಬೆಳೆಯೋದರಲ್ಲಿ ಹೆಚ್ಚಿನ ಅನುಮಾನ ಇಲ್ಲ. ಒಟ್ಟಿನಲ್ಲಿ ಕೆಲವು ಭಿನ್ನಾಭಿಪ್ರಾಯಗಳಿಂದ ಅಂತರ ಕಾಯುತ್ತಾ ಬಂದಿದ್ದ ಮೇರು ನಟರು ಇನ್ನು ಹತ್ತಿರವಾಗುತ್ತ ಅಭಿಮಾನಿಗಳ ಮನಸ್ಸನ್ನು ಗೆಲ್ಲಲ್ಲಿದ್ದಾರೆ ಎನ್ನುವ ನಂಬಿಕೆ ಬೆಳೆದಿದೆ. ಕನ್ನಡದ ಇಬ್ಬರು ಜನಪ್ರಿಯ ನಟರ ಸಮಾಗಮ ಆಗಲಿ ಎನ್ನುತ್ತಿದೆ ಸೋಷಿಯಲ್ ಮೀಡಿಯಾ.

Leave A Reply

Your email address will not be published.