ವಿದ್ಯಾರ್ಥಿಗಳೇ ಗಮನಿಸಿ- UG, PG ಪರೀಕ್ಷಾ ಕ್ರಮದಲ್ಲಿ ಬದಲಾವಣೆ

ಪ್ರಸ್ತುತ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೌದು ಈಗಾಗಲೇ ವಿದ್ಯಾರ್ಥಿಗಳಿಗೆ ಉತ್ತರಪತ್ರಿಕೆಯಲ್ಲಿ ಇಂಗ್ಲಿಷ್ ಅಥವಾ ಕನ್ನಡ ಇವುಗಳಲ್ಲಿ ಆಯ್ಕೆ ಅನುಸಾರ ಒಂದು ಭಾಷೆಯಲ್ಲಿ ಉತ್ತರ ಬರೆಯುವ ಅನುಮತಿ ನೀಡಲಾಗಿತ್ತು. ಅದರೆ ಸರ್ಕಾರವು ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ. ಇನ್ನುಮುಂದೆ ವಿದ್ಯಾರ್ಥಿಗಳು ಒಂದೇ ಪ್ರಶ್ನೆ ಪತ್ರಿಕೆಗೆ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ಉತ್ತರ ಬರೆಯಬಹುದು ಎಂದು ರಾಜ್ಯ ಉನ್ನತ ಶಿಕ್ಷಣ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದೆ.

ಈಗಾಗಲೇ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್​ ನಾರಾಯಣ್ ಅವರು ಕರೆದಿದ್ದ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ವಾರ್ಷಿಕ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಇದರಿಂದಾಗಿ ವಿದ್ಯಾರ್ಥಿಗಳು ಸರಾಗವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಂತಾಗಿದೆ. ಅದಲ್ಲದೆ ಪಾಲಿಟೆಕ್ನಿಕ್ ಕೋರ್ಸ್​​ಗಳಲ್ಲಿ ಈ ಬದಲಾವಣೆ ಈಗಾಗಲೇ ಜಾರಿಯಲ್ಲಿದೆ.

ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಪ್ರಕಾರ ರಾಜ್ಯದಲ್ಲಿ ನೂತನ ಬುಡಕಟ್ಟು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಬದಲು, ಅಸ್ತಿತ್ವದಲ್ಲಿರುವ ಕರ್ನಾಟಕ ರಾಜ್ಯ ಜಾನಪದ ವಿಶ್ವವಿದ್ಯಾಲಯದಲ್ಲಿ ಬುಡಕಟ್ಟು ಅಧ್ಯಯನಕ್ಕೆ ವ್ಯವಸ್ಥೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಮತ್ತು ಉತ್ತಮ ಆಡಳಿತ ಮಾಸದ ಅಂಗವಾಗಿ ಉಪಕುಲಪತಿಗಳು ಮತ್ತು ಉನ್ನತ ಅಧಿಕಾರಿಗಳು ತಮ್ಮ ಮೇಲ್ವಿಚಾರಣೆಯಲ್ಲಿರುವ ಕಾಲೇಜುಗಳಿಗೆ ಭೇಟಿ ನೀಡಿ ಸೂಚನೆಗಳ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ಅವರು ಒತ್ತಿ ಹೇಳಿದರು. ಹೆಚ್ಚಿನ ಹೂಡಿಕೆ ಮತ್ತು ಸಂಶೋಧನಾ ಯೋಜನೆಗಳಿಗೆ ಒತ್ತು ನೀಡಬೇಕು ಎಂದು ಮಾಹಿತಿ ನೀಡಿದರು.

ಇನ್ನು ಪ್ರಾದೇಶಿಕ ಭಾಷೆಗಳಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ, ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಆಶಯದಂತೆ ಗುಣಮಟ್ಟದ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೆ ಭಾಷಾಂತರ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ರಾಜ್ಯ ಉನ್ನತ ಶಿಕ್ಷಣ ಮಂಡಳಿ ತೀರ್ಮಾನ ಮಾಡಿದೆ ಎಂದು ಮಾಹಿತಿ ತಿಳಿಸಿದೆ.

ಸದ್ಯ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ಅಂಕವನ್ನು ಪಡೆಯಲು ಮತ್ತು ಪ್ರಾದೇಶಿಕ ಭಾಷೆಯ ಬೆಳವಣಿಗೆಗೆ ಇದು ಕಾರಣ ಆಗಬಲ್ಲದು ಎಂದು ಒಮ್ಮತದ ಅಭಿಪ್ರಾಯವನ್ನು ಸಭೆಯಲ್ಲಿ ಮಂಡಿಸಲಾಯಿತು.

Leave A Reply

Your email address will not be published.