ಕ್ರಿಸ್ಮಸ್ ಮತ್ತು ಹೊಸವರ್ಷ ಆಚರಣೆಗೆ ಪೊಲೀಸರಿಂದ ಮಹತ್ವದ ಆದೇಶ!
ಇನ್ನೇನು ಹೊಸವರ್ಷ ಬಂದೇ ಬಿಟ್ಟಿತು. ಅದಕ್ಕೂ ಮುನ್ನ, ಕೆಲವೇ ದಿನಗಳಲ್ಲಿ ಕ್ರಿಸ್ ಮಸ್ ಹಬ್ಬ ಕೂಡ ಬರುತ್ತಿದೆ. ಕಳೆದ ಬಾರಿ ಕೊರೊನಾದಿಂದಾಗಿ ಹೊಸ ವರ್ಷ ಆಚರಣೆಗೆ ಅಡ್ಡಿ ಇತ್ತು. ಹಾಗಾಗಿ ಬೆಂಗಳೂರಿನ ಜನರು ಈ ಬಾರಿಯ ಹೊಸವರ್ಷದ ಆಚರಣೆಯನ್ನು ಅದ್ಧೂರಿಯಾಗಿ ಮಾಡಬೇಕು ಎಂದು ಸಿದ್ಧತೆ ನಡೆಸಿದ್ದಾರೆ. ಆದರೆ ಈ ಬಾರಿ ಕ್ರಿಸ್ ಮಸ್ ಮತ್ತು ಹೊಸವರ್ಷ ಆಚರಣೆಗೆ ಅನುಮತಿ ಕಡ್ಡಾಯಗೊಳಿಸಿದ್ದಾರೆ.
ಬೆಂಗಳೂರು ನಗರ ಪಂಚತಾರ ಹೋಟೆಲ್ , ಕ್ಲಬ್ ಗಳು, ಮನರಂಜನಾ ಕಾರ್ಯಕ್ರಮ ಆಯೋಜಕರಿಗೆ ಪೊಲೀಸರು ಸೂಚನೆ ನೀಡಿದ್ದು, ಆಚರಣೆ ವೇಳೆ ಮಾದಕವಸ್ತುಗಳ ಸರಬರಾಜು ಆಗಬಾರದು. ಮಹಿಳೆಯರು, ಮಕ್ಕಳ ಸುರಕ್ಷತೆಗೆ ಅಗತ್ಯವಾದ ಕ್ರಮವನ್ನು ಕೈಗೊಳ್ಳಬೇಕು.
ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕು. ಪಾರ್ಕಿಂಗ್ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಆಯೋಜಕರಿಗೆ ಸೂಚನೆ ನೀಡಿದ್ದಾರೆ. ಹಾಗೇ ಹೋಟೆಲ್‌ಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದಾರೆ. ಬೆಳಕಿನ ವ್ಯವಸ್ಥೆ ಸಮರ್ಪಕವಾಗಿರಬೇಕು.
ಅಲ್ಲದೆ, ಕ್ರಿಮಿನಲ್ ಹಿನ್ನೆಲೆಯುಳ್ಳವರು, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಅವರ ಬಗ್ಗೆ ಗಮನ ಹರಿಸಬೇಕು ಎಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೂಚನೆ ನೀಡಲಾಗಿದೆ.