Vastu Tips : ಈ ಸಸ್ಯಗಳು ನಿಮ್ಮ ಬಡತನಕ್ಕೆ ಕಾರಣ ಆಗಬಹುದು!

ಪ್ರತಿಯೊಬ್ಬರಿಗೂ ಅವರದ್ದೇ ಆದ ನಂಬಿಕೆಗಳಿರುವುದು ಸಹಜ. ಕೆಲವರು ದೇವರ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡಿದರೆ ಮತ್ತೆ ಕೆಲವರು ದೇವರನ್ನು ಅತಿಯಾಗಿ ನಂಬಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಮನೆ ಕಟ್ಟುವಾಗ, ಮದುವೆ ಹೀಗೆ ಯಾವುದೇ ಶುಭ ಕಾರ್ಯ ಮಾಡುವಾಗಲೂ ಕೂಡ ಪಂಡಿತರ ಸಲಹೆ ಪಡೆದು ಪೂಜೆ ಪುನಸ್ಕಾರ ನಡೆಸುವುದು ಹೆಚ್ಚಿನವರ ವಾಡಿಕೆ.

ಹಾಗೆಯೇ ಮನೆಯಲ್ಲಿ ಕೂಡ ಕೆಲವೊಂದು ನಿಯಮಗಳನ್ನು ಪಾಲಿಸುವುದು ಕ್ರಮ. ಕೆಲವು ವಸ್ತುಗಳು ಮನೆಗೆ ಸಕಾರಾತ್ಮಕ ಪ್ರಭಾವ ಬೀರಿದರೆ ಮತ್ತೆ ಕೆಲವು ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗೆಯೇ ಮನೆ ಅಥವಾ ಆವರಣದಲ್ಲಿ ಹಸಿರು ಇರಬೇಕು ಎಂದು ಹೆಚ್ಚಿನವರು ಬಯಸುತ್ತಾರೆ. ಆದ್ರೆ ವಾಸ್ತು ಶಾಸ್ತ್ರದಲ್ಲಿ ಯಾವ ಗಿಡ ಬೆಳೆಸಬೇಕು ಮತ್ತು ಬೆಳೆಸಬಾರದು ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಮನೆಯ ಅಂದ ಚೆಂದ ಹೆಚ್ಚಿಸುವ ಇಲ್ಲವೇ ಹೂದೋಟ ಮಾಡುವ ಅಭ್ಯಾಸ ಹೆಚ್ಚಿನವರಿಗೆ ಇರುತ್ತದೆ. ಇಲ್ಲವೇ ಹಸಿರು ಗಿಡ ಬೆಳೆಸುವ ಅಭ್ಯಾಸ ಇರುತ್ತದೆ. ಹಾಗೆಯೇ ನಗರ ಪ್ರದೇಶಗಳ ಜನರು ಇರುವ ಚಿಕ್ಕ ಜಾಗದಲ್ಲಿಯೇ ಬೋನ್ಸಾಯ್ ಗಿಡಗಳನ್ನು ಇಡುತ್ತಾರೆ. ಈ ಗಿಡಗಳು ಮನೆಯಲ್ಲಿರುವ ಸದಸ್ಯರಿಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತವೆ ಎಂದು ನಂಬಲಾಗುತ್ತದೆ.

ಕೆಲವರು ಮನೆ ಮುಂದೆ ಮನಿ ಪ್ಲಾಂಟ್ ಇಡುತ್ತಾರೆ. ಇದರ ಬಳ್ಳಿಯನ್ನು ಮನೆಯೊಳಗೆಯೂ ವಿಸ್ತರಿಸುವ ಪರಿಪಾಠ ಇರುತ್ತದೆ. ಇದನ್ನು ಹಚ್ಚುವದರಿಂದ ಹಣದ ಕೊರತೆ ಆಗುವುದಿಲ್ಲ ಎಂಬ ನಂಬಿಕೆ ಕೂಡ ಇದೆ. ಒಂದು ವೇಳೆ ಮನಿ ಪ್ಲಾಂಟ್ ಒಣಗಿದರೆ, ನೀವು ಆರ್ಥಿಕ ಸಂಕಷ್ಟ ಅನುಭವಿಸಲಿದ್ದೀರಿ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಆದ್ದರಿಂದ ಮನಿ ಪ್ಲಾಂಟ್ ಹಸಿರು ಆಗಿರುವಂತೆ ನೋಡಿಕೊಳ್ಳಬೇಕು.

ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ಗಿಡಗಳು ಇಡಬಾರದು ಎಂದು ವಾಸ್ತು ತಜ್ಞರು ಹೇಳುವುದು ಕೇಳಿರಬಹುದು. ಕೆಲವು ಗಿಡಗಳನ್ನು ನೆಡಬೇಕು ಎಂದು ಕೂಡ ಹೇಳುತ್ತಾರೆ. ಕೆಲವರು ಕ್ಯಾಕ್ಟಸ್ ಮತ್ತು ಮೆಣಸಿನಕಾಯಿ ಗಿಡಗಳನ್ನು ಬೆಳೆಸಲು ಇಷ್ಟಪಡುತ್ತಾರೆ. ಆದರೆ, ಇವು ನೋಡಲು ಸುಂದರವಾಗಿ ಕಂಡರೂ ಕೂಡ ವಾಸ್ತು ಪ್ರಕಾರ ಒಳ್ಳೆಯದಲ್ಲ ಎಂಬ ಮಾತಿದ್ದು, ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎಂಬ ನಂಬಿಕೆ ಇದೆ.

ಮನೆಯ ಆಸುಪಾಸಿನಲ್ಲಿ ಸೋರೆಕಾಯಿ ಬೆಳೆಸಬಾರದು ಜೊತೆಗೆ ಮುಳ್ಳಿನ ಗಿಡಗಳನ್ನು ನೆಡಬಾರದು. ಅಷ್ಟೆ ಅಲ್ಲದೆ, ಮನೆಯ ಪರಿಸರದಲ್ಲಿ ನಿಂಬೆ, ಹತ್ತಿಯಂತಹ ಗಿಡಗಳಿದ್ರೆ ಅಲ್ಲಿ ನೆಗೆಟಿವ್ ಎನರ್ಜಿ ಬರುತ್ತದೆ ಎಂಬ ಮಾತಿದೆ. ಇಂತಹ ಮನೆಗಳಲ್ಲಿ ಮಾನಸಿಕ ಒತ್ತಡದ ಜೊತೆಗೆ ಆರ್ಥಿಕ ಸಮಸ್ಯೆಗಳು ಕಂಡು ಬರುತ್ತವೆ. ಹಾಗಾಗಿ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಬೀರುವ ಗಿಡಗಳನ್ನು ನೆಡುವುದು ಒಳ್ಳೆಯದು.

Leave A Reply

Your email address will not be published.