ವಾಹನ ಸವಾರರೇ ನಿಮಗೊಂದು ಬ್ಯಾಡ್ ನ್ಯೂಸ್ | ವಾಹನ ದಂಡ ಬಾಕಿ ಇಟ್ಟರೆ ಇದಂತೂ ಕ್ಯಾನ್ಸಲ್ ಖಂಡಿತ!
ಸರ್ಕಾರ ಎಷ್ಟೇ ರೂಲ್ಸ್ ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ.. ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ ಅನೇಕ ಪ್ರಸಂಗಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಹಾಗಾಗಿ, ಹೀಗೆ ರೂಲ್ಸ್ ಬ್ರೇಕ್ ಮಾಡುವವರಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಹೊಸ ಮಾಸ್ಟರ್ ಪ್ಲಾನ್ ಮಾಡಲಾಗಿದೆ.
ಸಿಲಿಕಾನ್ ಸಿಟಿಯ ವಾಹನ ಸವಾರರೇ ಗಮನಿಸಿ!!!.. ಇನ್ಮುಂದೆ ವಾಹನಗಳ ಮೇಲೆ ದಂಡ ಬಾಕಿಯಿದ್ರೆ ಇನ್ಶೂರೆನ್ಸ್ ಕ್ಯಾನ್ಸಲ್ ಆಗುತ್ತದೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ದಿನಂಪ್ರತಿ ನಿಯಮ ಉಲ್ಲಂಘನೆಯಾಗುತ್ತಿರುವ ಪ್ರಕರಣಗಳು ಕೂಡ ಹೆಚ್ಚಾಗಿ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 30 ಸಾವಿರಕ್ಕೂ ಹೆಚ್ಚು ಟ್ರಾಫಿಕ್ ಕೇಸ್‌ಗಳು ದಾಖಲಾಗುತ್ತಿವೆ. ಅಲ್ಲದೆ, ಕಳೆದ 11 ತಿಂಗಳಲ್ಲಿ ಬೆಂಗಳೂರಿನಲ್ಲಿ 96 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದೆ.
ಈ ರೀತಿ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಂದ 11 ತಿಂಗಳಲ್ಲಿ ಬರೋಬ್ಬರಿ 164 ಕೋಟಿ ರೂ. ದಂಡದ ಮೊತ್ತ ವಸೂಲಿ ಮಾಡಲಾಗಿದ್ದು, ವರ್ಷಾಂತ್ಯಕ್ಕೆ ಒಂದು ಕೋಟಿ ಕೇಸ್ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಬೆಂಗಳೂರು ನಗರ ಒಂದರಲ್ಲೇ ಇಷ್ಟು ಕೇಸ್ ದಾಖಲಾಗುತ್ತಿದ್ದು, ಸಂಚಾರ ದಟ್ಟಣೆಯಲ್ಲಿ ಹೆಸರುವಾಸಿಯಾಗಿದ್ದ ಸಿಲಿಕಾನ್ ಸಿಟಿ ಈಗ ಸಂಚಾರ ನಿಯಮ ಉಲ್ಲಂಘನೆ ಹಾಗೂ ದಂಡ ಕಟ್ಟುವಲ್ಲಿ ಕೂಡ ತನ್ನ ಛಾಪು ಮೂಡಿಸಿದೆ.
ಇದರಿಂದಾಗಿ ವಾಹನ ಸಂಖ್ಯೆ ಹೆಚ್ಚಾಗುತ್ತ ಹೋದಂತೆ ಸಂಚಾರ ನಿರ್ವಹಣೆ ಕೂಡ ಪೊಲೀಸರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದು, ರೂಲ್ಸ್ ಬ್ರೇಕ್ ಮಾಡೋದನ್ನು ನಿಲ್ಲಿಸುವ ಪ್ರಯತ್ನವಾಗಿ ಪೊಲೀಸ್ ಇಲಾಖೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಐಟಿಎಂ (ITM) ಸಿಸ್ಟಮ್ ಬಳಕೆ ಮಾಡಲು ಮುಂದಾಗಿದೆ.
ಐಟಿಎಂ (ITM) ಸಿಸ್ಟಮ್ ಬಳಕೆ ಹೇಗೆ?
ವಾಹನ ಸವಾರರು ನಿಯಮ ಉಲ್ಲಂಘನೆ ಮಾಡಿದರೆ, ಪೊಲೀಸ್ ಇಲಾಖೆ ಟೆಕ್ನಾಲಜಿ ಸ್ಟ್ರೈಕ್ ಮೂಲಕ ರೂಲ್ಸ್ ಬ್ರೇಕ್ ಮಾಡುವವರ ಕಡಿವಾಣಕ್ಕೆ ಅಣಿಯಾಗಿದೆ. ನಗರದ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಆ ವಾಹನಗಳಿಗೆ ಸ್ವಯಂ ಚಾಲಿತ ದಂಡ ವಿಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಆರಂಭಿಸಿದ್ದು, ಈ ಮೂಲಕ ನಿಯಮ ಉಲ್ಲಂಘನೆ ಮಾಡಿದರೆ ಆ ವಾಹನ ಮಾಲೀಕರ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಇ-ಚಲನ್ ರವಾನೆಯಾಗುತ್ತದೆ.
ಹೈಯೆಂಡ್ ಕ್ಯಾಮೆರಾ ಮೂಲಕ ರೂಲ್ಸ್ ಬ್ರೇಕ್ ಮಾಡುವವರ ಮೇಲೆ ಕಣ್ಣಿಡುವ ಜೊತೆಗೆ, ಪ್ರತಿ ಚಲನವಲನಗಳನ್ನು ರೆಕಾರ್ಡ್ ಮಾಡಬಹುದು. ಜೊತೆಗೆ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ನಿಯಮ ಉಲ್ಲಂಘನೆಯಾಗುವುದನ್ನು ರೆಕಾರ್ಡ್ ಮಾಡಲಾಗುತ್ತದೆ.
ಅಷ್ಟೆ ಅಲ್ಲದೆ, ಆ ವಾಹನದ ಸವಾರ ಮಾಡಿದ ಉಲ್ಲಂಘನೆ ವೀಡಿಯೋ ಕೂಡ ನೋಟಿಸ್ ಜೊತೆ ಮಾಲೀಕನ ಕೈಗೆ ತಲುಪಲಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ 259 ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಅನ್ನು ಸೆರೆಹಿಡಿಯುವ ಕ್ಯಾಮೆರಾಗಳು ಮತ್ತು 80 ರೆಡ್‌ಲೈಟ್ ವಯಲೇಷನ್ ಡಿಟೆಕ್ಷನ್ ಕ್ಯಾಮೆರಾಗಳನ್ನು ನಗರದ ಪ್ರಮುಖ 50 ಜಂಕ್ಷನ್‌ಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಈ ಮೂಲಕ ಸಂಚಾರ ಉಲ್ಲಂಘನೆ ಮಾಡುವವರ ಪತ್ತೆ ಸುಗಮವಾಗಿ ಮಾಡಲು ಸಾಧ್ಯವಾಗಲಿದೆ.
ವಾಹನ ಸವಾರರು ತ್ರಿಬಲ್ ರೈಡಿಂಗ್ ಮಾಡಿದರೆ, ಸೀಟ್ ಬೆಲ್ಟ್ ಹಾಕದೆ ಇದ್ದಲ್ಲಿ, ಜೀಬ್ರಾ ಕ್ರಾಸ್ ದಾಟಿದ್ರೆ ಫೋಟೋ ದಂಡದ ಜೊತೆ ರೂಲ್ಸ್ ಬ್ರೇಕ್ ಮಾಡುವವರನ್ನು ಸುಲಭವಾಗಿ ಪತ್ತೆ ಹಚ್ಚಲು ನೆರವಾಗುತ್ತವೆ . ರಾತ್ರಿ ಹೊತ್ತಿನಲ್ಲೂ ಕಾರ್ಯನಿರ್ವಹಿಸಲಿರುವ ಕ್ಯಾಮೆರಾಗಳು, ರೂಲ್ಸ್ ಬ್ರೇಕ್ ಮಾಡಿದ 5 ಸೆಕೆಂಡ್‌ಗಳಲ್ಲೇ ವಿಡಿಯೋ ಜೊತೆ ದಂಡದ ನೋಟೀಸ್ ರವಾನಿಸುತ್ತವೆ.
ಇದರ ಜೊತೆಗೆ ಮೊಬೈಲ್‌ನಲ್ಲಿಯೇ ಕ್ಯೂಆರ್ ಕೋಡ್ ಮೂಲಕ ಫೈನ್ ಕಟ್ಬಬೇಕಾಗಿದ್ದು, ಫೈನ್ ಕಟ್ಟಿಲ್ಲವೆಂದರೆ, 24 ಗಂಟೆಗಳಲ್ಲಿ ಮನೆ ಬಾಗಿಲಿಗೆ ನೋಟಿಸ್ ಬರಲಿದೆ. ನೋಟಿಸ್ ಬಂದ ನಂತರ ಠಾಣೆಯಲ್ಲಿ ಫೈನ್ ಕಟ್ಟಲು ಅವಕಾಶವಿಲ್ಲ. ಕೋರ್ಟ್‌ಗೆ (Court) ಹೋಗಿ ಕಟ್ಟಬೇಕಾಗುತ್ತದೆ. ಈ ಎಲ್ಲಾ ಕ್ರಮಗಳ ಮೂಲಕ ವಾಹನ ಸವಾರರಿಗೆ ರೂಲ್ಸ್ ಬ್ರೇಕ್ ಮಾಡೋದನ್ನು ತಡೆಯಲು ಟ್ರಾಫಿಕ್ಗ್ ಪೊಲೀಸರು ಮುಂದಾಗಿದ್ದಾರೆ.
ಅಷ್ಟೆ ಅಲ್ಲ, ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ, ಪ್ರತಿವರ್ಷ ವಿಮೆ ಮಾಡಿಸಲು ಹೋದಾಗ ಟ್ರಾಫಿಕ್ ಪೊಲೀಸರಿಂದ ಎನ್‌ಓಸಿ ಕೊಡಬೇಕಾಗುತ್ತದೆ. ಎನ್‌ಓಸಿ ಕೊಡದೆ ಇದ್ದಲ್ಲಿ ಇನ್ಶೂರೆನ್ಸ್ ನವೀಕರಣ ಆಗದೇ ಇರುವಂತೆ ಕೂಡ ಮಾಡಲು ಯೋಜನೆ ರೂಪಿಸಲಾಗಿದೆ.
ಇನ್ಶೂರೆನ್ಸ್ ಕಂಪನಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲು ಪೊಲೀಸರು ಮುಂದಾಗಿದ್ದು, ಹಾಗೆಯೇ ಯೆಲ್ಲೋ ಬೋರ್ಡ್ ಗಾಡಿಗಳ ಎಫ್‌ಸಿ ಹಾಗೂ ವೈಟ್ ಬೋರ್ಡ್ ಗಾಡಿಗಳ ವಿಮೆ ಮಾಡಿಸಲು ಹೋದಾಗ ಅಲ್ಲಿಯೇ ದಂಡ ಪಡೆಯುವ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಕೆಲವೇ ದಿನಗಳಲ್ಲಿ ಪೊಲೀಸ್ ಇಲಾಖೆ ಈ ಪ್ಲ್ಯಾನ್ ರೂಪಿಸಿದ್ದು, ಸದ್ಯದಲ್ಲೇ ಅನುಷ್ಠಾನ ಮಾಡುವ ಸಾಧ್ಯತೆ ದಟ್ಟವಾಗಿದೆ.