ಮಸಾಲೆಯುಕ್ತ ಆಹಾರ ಸೇವಿಸಿ ಕೆಮ್ಮಿದ್ದೇ ತಡ ಮುರಿದೇ ಹೋಯ್ತು ಪಕ್ಕೆಲುಬು!
ಈ ಪ್ರಪಂಚದಲ್ಲಿ ವಿಚಿತ್ರವಾದ ಘಟನೆಗಳು ನಡೆಯುತ್ತಲೇ ಇರುತ್ತದೆ ಎಂಬುದಕ್ಕೆ ಬಹುಶಃ ಇಲ್ಲೊಂದು ಕಡೆ ನಡೆದ ಘಟನೆಯೇ ಸಾಕ್ಷಿ ಅನ್ನಬಹುದು. ಹೌದು. ಇಲ್ಲೊಂದು ಕಡೆ ಮಸಾಲೆಯುಕ್ತ ಆಹಾರಗಳನ್ನು ಸೇವಿಸಿ ಪಕ್ಕೆಲುಬೇ ಮುರಿದು ಹೋಗಿರುವ ಆಘಾತಕಾರಿ ಘಟನೆ ನಡೆದಿದೆ.
ಇಂತಹದೊಂದು ಘಟನೆ ಚೀನಾದಲ್ಲಿ ನಡೆದಿದ್ದು, ಶಾಂಘೈ ನಿವಾಸಿಯಾಗಿರುವ ಹುವಾಂಗ್ ಎಂಬುವವರೇ ಈ ಘಟನೆಗೆ ಸಾಕ್ಷಿಯಾದವರು. ಮಸಾಲೆಯುಕ್ತ ಆಹಾರಗಳನ್ನು ಸೇವಿಸಿದ ನಂತರ ಕೆಮ್ಮು ಕಾಣಿಸಿಕೊಂಡಿದೆ. ಕೆಮ್ಮಿದ ಕಾರಣ ಎದೆಗೂಡಲ್ಲಿ ಶಬ್ದ ಕೇಳಿದ್ದು ಪಕ್ಕೆಲುಬು ಮುರಿದಂತಾಗಿದೆ.
ಬಳಿಕ ಮಾತನಾಡುವಾಗ ಮತ್ತು ಉಸಿರಾಡುವಾಗ ನೋವು ಕಾಣಿಸಿಕೊಂಡಿದೆ. ಆದರೆ, ಅವಳು ಅದರ ಬಗ್ಗೆ ಹೆಚ್ಚು ಗಮನ ಹರಿಸಲ್ಲಿಲ್ಲ. ನಂತರ ವೈದ್ಯರನ್ನು ಭೇಟಿಯಾದಾಗ ತಪಾಸಣೆಯ ಸಂದರ್ಭ ಹುವಾಂಗ್ ಅವರ ನಾಲ್ಕು ಪಕ್ಕೆಲುಬುಗಳು ಮುರಿದಿವೆ ಎಂದು CT ಸ್ಕ್ಯಾನ್ ತೋರಿಸಿದೆ. ವೈದ್ಯರು ಆಕೆಯ ಎದೆಗೆ ಬ್ಯಾಂಡೇಜ್ ಹಾಕಿದ್ದು, ಆಕೆಯ ಪಕ್ಕೆಲುಬುಗಳು ಗುಣವಾಗಲು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ.
ಹುವಾಂಗ್ 171 ಸೆಂಟಿಮೀಟರ್ ಎತ್ತರ ಮತ್ತು 57 ಕಿಲೋಗ್ರಾಂಗಳಷ್ಟು ಭಾರವಿದ್ದಾರೆ. ಹೀಗಾಗಿ, ಕೆಮ್ಮಿದಾಗ ಪಕ್ಕೆಲುಬು ಮುರಿತಕ್ಕೆ ಹುವಾಂಗ್ ಅವರ ದೇಹದ ತೂಕ ಕಡಿಮೆ ಇರುವುದೇ ಮೂಲ ಕಾರಣ ಎಂದು ವೈದ್ಯರು ಹೇಳಿದ್ದಾರೆ. ನೋಡಲು ತೆಳ್ಳಗಿದ್ದಾರೆ. ‘ನಿಮ್ಮ ಪಕ್ಕೆಲುಬುಗಳನ್ನು ನಿಮ್ಮ ಚರ್ಮದ ಅಡಿಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಮೂಳೆಯನ್ನು ಬೆಂಬಲಿಸಲು ಯಾವುದೇ ಸ್ನಾಯುಗಳಿಲ್ಲ, ಆದ್ದರಿಂದ ಕೆಮ್ಮುವಾಗ ನಿಮ್ಮ ಪಕ್ಕೆಲುಬುಗಳು ಮುರಿತಕ್ಕೆ ಒಳಗಾಗುವುದು ಸುಲಭ’ ಎಂದು ವೈದ್ಯರು ತಿಳಿಸಿದ್ದಾರೆ.
ಚೇತರಿಸಿಕೊಂಡ ನಂತರ ತನ್ನ ಸ್ನಾಯುವಿನ ದ್ರವ್ಯರಾಶಿ ಮತ್ತು ಮೇಲಿನ ದೇಹದ ತೂಕವನ್ನು ಹೆಚ್ಚಿಸಲು ಹೆಚ್ಚಿನ ದೈಹಿಕ ವ್ಯಾಯಾಮಗಳನ್ನು ಮಾಡುವುದಾಗಿ ಹುವಾಂಗ್ ಹೇಳಿದರು. ಈಗ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.