ಭೀಕರ ಅಪಘಾತ : ಜಾಗ್ವರ್ ಕಾರಿನ ವೇಗಕ್ಕೆ ಯುವತಿ ಬಲಿ
ಇತ್ತೀಚಿಗೆ ರಸ್ತೆ ಅಪಘಾತಗಳು ದಿನೇ ದಿನೇ ಹೆಚ್ಚುತ್ತಲಿವೆ. ಭೀಕರ ಅಪಘಾತಗಳು ಆಗುವುದನ್ನು ತಪ್ಪಿಸಲು ಎಷ್ಟೇ ಪ್ರಯತ್ನವನ್ನು ಸರ್ಕಾರ ಕೈಗೊಂಡರು ಜನರು ಮಿತಿ ಮೀರಿ ಸಂಚಾರ ನಿಯಮಗಳನ್ನು ಅಲ್ಲಗೆಳೆಯುವದನ್ನು ಕಾಣಬಹುದು. ಹೌದು ದುಬಾರಿ ಕಾರೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಭಾನುವಾರ ನೋಯ್ಢಾದಲ್ಲಿ ನಡೆದಿದೆ.
ಘಟನೆಯಲ್ಲಿ ಸ್ಕೂಟರ್ ಸವಾರೆ 24ವರ್ಷದ ದೀಪಿಕಾ ತ್ರಿಪಾಠಿ ಮೃತಪಟ್ಟಿದ್ದಾರೆ. ಭಾನುವಾರ ದೀಪಿಕಾ ತನ್ನ ಸ್ಕೂಟರ್ ನಲ್ಲಿ ಆಫೀಸ್ ಗೆ ಹೊರಟಿದ್ದರು. ಸೆಕ್ಟರ್ 96 ಹತ್ತಿರದ ಡಿವೈಡರ್ ಬಳಿ ಸ್ಕೂಟರ್ ಯೂ ಟರ್ನ್ ಮಾಡಲು ಹೋಗಿದ್ದಾರೆ. ಈ ವೇಳೆ ವೇಗವಾಗಿ ಬಂದ ಜಾಗ್ವಾರ್ ಕಾರು ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ.
ಜಾಗ್ವಾರ್ ಕಾರು ದೀಪಿಕಾ ಅವರನ್ನು ಎಳೆದುಕೊಂಡೇ ಕೆಲ ಮೀಟರ್ ದೂರ ಹೋಗಿದ್ದು, ಘಟನೆಯಲ್ಲಿ ದೀಪಿಕಾ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳನ್ನು ಸ್ಥಳೀಯರು ಆಸ್ಪತ್ರೆಗೆ ಕೆರೆದುಕೊಂಡು ಹೋಗಿದ್ದಾರೆ ಆದರೆ ಅಷ್ಟರಲ್ಲಾಗಲೇ ದೀಪಿಕಾ ಕೊನೆಯುಸಿರು ಎಳೆದಿದ್ದಾರೆ.
ಪೊಲೀಸ್ ವರದಿ ಪ್ರಕಾರ ಬಹುರಾಷ್ಟ್ರೀಯ ಕಂಪನಿಯ ಬ್ಯಾಂಕ್ ಉದ್ಯೋಗಿಯೊಬ್ಬರು ಜಾಗ್ವಾರ್ ಕಾರನ್ನು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಈ ಸಂಬಂಧ ಅವರನ್ನು ಬಂಧಿಸಿ ಕೊಲೆ ಆರೋಪ ಕೇಸ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಅದಲ್ಲದೆ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ OR 04 Q 0001 ನಂಬರಿನ ಜಾಗ್ವಾರ್ ಕಾರು ಚಾಲಕನ ವಿರುದ್ಧ ಈ ಹಿಂದೆಯೇ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಪೊಲೀಸ್ ಕಮಿಷನರ್ ಲಕ್ಷ್ಮೀ ಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಂಗಳವಾರ ಆರೋಪಿ ವಿರುದ್ಧ ಕೊಲೆ ಕೇಸ್ ಅನ್ನಾಗಿ ಪರಿವರ್ತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.