ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮಹತ್ವದ ನಿರ್ಧಾರ | ಇನ್ಮುಂದೆ ಮನೆ ಬಾಗಿಲಲ್ಲೇ ತೆರಿಗೆ ಪಾವತಿ ಸೌಲಭ್ಯ
ಜನಸಾಮಾನ್ಯರಿಗೆ ನೆರವಾಗುವ ನಿಟ್ಟಿನಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಇನ್ಮುಂದೆ ಮನೆ ಬಾಗಿಲಿಗೆ ಬಂದೇ ತೆರಿಗೆ ಸ್ವೀಕರಿಸಲಿದ್ದಾರೆ.
ಹೌದು. ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಮತ್ತು ಎಲ್ಲಾ ಆಸ್ತಿಗಳಿಗೂ ಇದರಲ್ಲಿ ನಿಖರವಾದ ತೆರಿಗೆ ಮಾಹಿತಿ ಒಳಗೊಳ್ಳುವುದರಿಂದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಂಚತಂತ್ರ ಮೊಬೈಲ್ ಆಪ್ ಸಿದ್ದಪಡಿಸುತ್ತಿದೆ.
ಈ ಮೂಲಕ ಶೀಘ್ರದಲ್ಲಿಯೇ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸಲಿದ್ದಾರೆ. ಜನತೆಗೆ ಗೊಂದಲವಿಲ್ಲದಂತೆ ತೆರಿಗೆ ಪಾವತಿಸಲು ಅನುಕೂಲವಾಗಲಿದ್ದು, ಆನ್ಲೈನ್ ನಲ್ಲಿ ತೆರಿಗೆ ಪಾವತಿಸಬಹುದು. ಡೆಬಿಟ್ ಕಾರ್ಡ್ ಸ್ವೈಪ್ ಮಾಡಲು ಕೂಡ ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಗೆ ಪಿಒಎಸ್ ಯಂತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ. ರಶೀದಿ ಕೂಡ ಸಿಗಲಿದ್ದು, ಮೊಬೈಲ್ ಗೆ ಮೆಸೇಜ್ ರವಾನೆ ಸೌಲಭ್ಯವೂ ಇರಲಿದೆ.
ಗ್ರಾಮದಲ್ಲಿ ಪಂಚಾಯಿತಿ ವ್ಯಾಪ್ತಿಗೆ ಬರುವ ಆಸ್ತಿ, ಎಷ್ಟು ತೆರಿಗೆ ವಿಧಿಸಬೇಕು, ಕಟ್ಟಡ, ಖಾಲಿ ನಿವೇಶನ, ಆಯಕಟ್ಟಿನ ಜಾಗ, ಮೌಲ್ಯ ಮತ್ತು ಬಳಕೆಗೆ ತಕ್ಕಂತೆ ಎಲ್ಲಾ ಆಸ್ತಿಗಳಿಗೂ ತೆರಿಗೆ ದರದ ನಿಖರವಾದ ಮಾಹಿತಿ ಇದರಲ್ಲಿ ಇರಲಿದೆ.