ಬೆಳ್ತಂಗಡಿ : ಕೋಳಿ ನುಂಗಿದ ಸಾರಿಬಾಳ ಹಾವು!
ಬೆಳ್ತಂಗಡಿಯ ಕೊಯ್ಯೂರು ಗ್ರಾಮದ ಅರಂತೊಟ್ಟು ಎಂಬಲ್ಲಿ ಅಪರೂಪದ ಸಾರಿಬಳ ಹಾವು ಪತ್ತೆಯಾಗಿದ್ದು ಮಾತ್ರವಲ್ಲದೆ ಕೋಳಿಯನ್ನು ಬೇರೆ ನುಂಗಿ ಹಾಕಿದ ವಿಚಿತ್ರ ಘಟನೆ ನಡೆದಿದೆ. ಇದನ್ನು ಉರಗ ಪ್ರೇಮಿ ಸ್ನೇಕ್ ಅಶೋಕ್ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ .
ಈ ಜಗವೇ ಒಂದು ವಿಸ್ಮಯ ನಗರಿ.. ಕೆಲವೊಮ್ಮೆ ಪ್ರಕೃತಿಗೆ ಸವಾಲು ಹಾಕುವಂತಹ ಘಟನೆಗಳಿಗೆ ನಾವು ಸಾಕ್ಷಿಯಾಗುತ್ತೇವೆ. ಇಲ್ಲಿ ನಮಗೆ ಕಂಡು ಬರುವ ಜೀವರಾಶಿ… ಅವುಗಳ ಜೀವನಶೈಲಿಯೇ ವಿಭಿನ್ನ.. ಈ ಪ್ರಕೃತಿಯ ಮಡಿಲಲ್ಲಿ ನಡೆಯುವ ವಿಸ್ಮಯಗಳು ನಮ್ಮನ್ನು ಅಚ್ಚರಿಗೆ ದೂಡುತ್ತದೆ. ಬೆಳ್ತಂಗಡಿಯ ಕೊಯ್ಯೂರು ಗ್ರಾಮದ ಅರಂತೊಟ್ಟಿನಲ್ಲಿ ಇಂತಹ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ.
ಫೋರೆಸ್ಟನ್ಸ್ ಬೆಕ್ಕು ಹಾವು ಅಥವಾ ಸಾರಿಬಳ ಎನ್ನುವ ಹಾವು ಹೆಚ್ಚಾಗಿ ಗುಜರಾತ್, ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದ ಕಾಡುಗಳಲ್ಲಿ ಕಂಡುಬರುತ್ತವೆ. ಇವು ಜನವಸತಿ ಪ್ರದೇಶದಲ್ಲಿ ಕಂಡುಬರುವುದು ತೀರಾ ವಿರಳವಾಗಿದ್ದು, ಇವು ಇರುಳಿನಲ್ಲಿ ಸಂಚಾರ ನಡೆಸುತ್ತವೆ.
ಹೌದು!!…ಕೊಯ್ಯೂರು ಗ್ರಾಮದ ಅರಂತೊಟ್ಟು ನಿವಾಸಿ ದೀಪಕ್ ಎಂಬುವರ ಮನೆಯಲ್ಲಿ ಸುಮಾರು 5 ಅಡಿ ಉದ್ದದ ಸಾರಿಬಳ ಹಾವು ಕೋಳಿಮರಿಯನ್ನು ಕಬಳಿಸುತ್ತಿದ್ದ ದೃಶ್ಯ ಕಂಡು ಬಂದಿದ್ದು , ಇದನ್ನು ಮನೆಯವರು ಗಮನಿಸಿದ್ದು, ಕೂಡಲೇ ಉರಗಮಿತ್ರ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದು, ಉರಗ ಸ್ನೇಹಿ ಅಶೋಕ್ ಸ್ಥಳಕ್ಕೆ ಧಾವಿಸಿ ಉರಗದ ರಕ್ಷಣೆ ಮಾಡಿದ್ದಾರೆ.
ಈ ಹಾವಿನಲ್ಲಿಯು ಕೂಡ ಎರಡು ಪ್ರಭೇದಗಳಿದ್ದು ಬೂದು ಬಣ್ಣ ಹಾಗೂ ಕಪ್ಪು ಚುಕ್ಕೆ ಹೊಂದಿದ್ದರೆ, ಮಗದೊಂದು ಪ್ರಭೇದ ಕಪ್ಪು ಚುಕ್ಕೆಗಳೊಂದಿಗೆ, ತಿಳಿ ಕೆಂಪು, ಕಂದು ಬಣ್ಣವನ್ನು ಹೊಂದಿರುತ್ತದೆ. ಇವುಗಳ ಪ್ರಮುಖ ಆಹಾರ ಸಣ್ಣ ಪಕ್ಷಿ, ಮೊಟ್ಟೆ, ಇಲಿ, ಬಾವಲಿಯಾಗಿದೆ.
ಅಪರೂಪವಾಗಿ ಕಂಡುಬರುವ ಈ ಪ್ರಭೇದದ ಉರಗ ಕೊಳ್ಳೂರಿನಲ್ಲಿ ಕಂಡು ಬಂದಿದೆ. ಸಾಮಾನ್ಯವಾಗಿ , ಕಟ್ಟುಹಾವಿನ ಮಾದರಿಯನ್ನು ಹೋಲುವುದರಿಂದ ಇವು ಕಂಡು ಬಂದಲ್ಲಿ ಜನರು ಕೊಲ್ಲಲು ಮುಂದಾಗುತ್ತಾರೆ. ಆದರೆ, ಇವು ವಿಷರಹಿತ ಹಾವಿನ ಪ್ರಭೇದಕ್ಕೆ ಸೇರಿವೆ.
ತನ್ನ 11 ವರ್ಷಗಳ ಹಾವು ಹಿಡಿಯುವ ಸೇವೆಯಲ್ಲಿ ಇದುವರೆಗೆ ಬೂದು ಬಣ್ಣದ ಸಾರಿಬಾಳ ಎರಡು ಬಾರಿ ಹಾಗೂ ತಿಳಿ ಕೆಂಪು ಕಂಡು ಕಂದು ಬಣ್ಣದ ಹಾವು ಇದೇ ಮೊದಲ ಬಾರಿ ಕಂಡು ಬಂದಿದೆ ಎಂದು ಅಶೋಕ್ ಅವರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಅನೇಕ ಜೀವ ರಾಶಿಗಳು ಅವನತಿಯ ಹಾದಿಯಲ್ಲಿದ್ದು, ಈ ಹಿಂದೆ ಇದ್ದ ಅದೆಷ್ಟೋ ಜೀವಿಗಳ ಪಳೆಯುಳಿಕೆ ಮಾತ್ರ ನೋಡಲು ಸಾಧ್ಯವಾಗುತ್ತಿದೆ. ಹಾಗಾಗಿ, ಹೆಚ್ಚಿನ ಸಂದರ್ಭದಲ್ಲಿ ಯಾವುದೇ ಜೀವಿಯಾದರೂ ಕೂಡ ಅದಕ್ಕೆ ತೊಂದರೆ ನೀಡಿದಾಗ ಮಾತ್ರ ಮತ್ತೊಬ್ಬರ ಮೇಲೆ ದಾಳಿ ಮಾಡಲು ಮುಂದಾಗುತ್ತದೆ. ಹಾಗಾಗಿ, ಅವುಗಳಿಗೂ ಕೂಡ ನಮ್ಮಂತೆ ಜೀವಿಸುವ ಹಕ್ಕಿದ್ದು, ಅದನ್ನು ಕೊಲ್ಲುವ ಬದಲಿಗೆ ರಕ್ಷಣಾ ಕಾರ್ಯಕ್ಕೆ ಮುಂದಾಗುವುದು ಉತ್ತಮ.