ಬಂಟ್ವಾಳ:ಯುವ ವಕೀಲನ ಮೇಲೆ ಪೊಲೀಸರ ದೌರ್ಜನ್ಯ ಪ್ರಕರಣ!! ರಾತ್ರೋ ರಾತ್ರಿ ಎಳೆದೊಯ್ಯುವ ವಿಡಿಯೋ ವೈರಲ್-ಅಮಾನತಿಗಾಗಿ ರಸ್ತೆಗಿಳಿದ ವಕೀಲರ ಸಂಘ!!

ಪುಂಜಾಲಕಟ್ಟೆ:ಇಲ್ಲಿನ ಠಾಣಾ ವ್ಯಾಪ್ತಿಯ ಯುವ ವಕೀಲರೊಬ್ಬರ ಮನೆಗೆ ರಾತ್ರೋ ರಾತ್ರಿ ನುಗ್ಗಿ ಮನೆ ಮಂದಿಯನ್ನು ನಿಂದಿಸಿ, ವಕೀಲರನ್ನೇ ಠಾಣೆಗೆ ಎಳೆದೊಯ್ದು ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಿದ ಆರೋಪವೊಂದು ಕೇಳಿ ಬಂದ ಬೆನ್ನಲ್ಲೇ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದು,ನಿನ್ನೆ ವಕೀಲರ ಸಂಘದ ವತಿಯಿಂದ ಠಾಣಾ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು.

ಏನಿದು ಪ್ರಕರಣ!?
ಮಂಗಳೂರಿನ ಯುವ ವಕೀಲರಾದ ಕುಲ್ ದೀಪ್ ಶೆಟ್ಟಿ ಎಂಬವರ ಜಾಗದ ವಿಚಾರದಲ್ಲಿ ತಗಾದೆಯೊಂದು ಎದ್ದಿದ್ದು,ಬಳಿಕ ಠಾಣೆಯ ಮೆಟ್ಟಿಲೇರಿತ್ತು ಎನ್ನಲಾಗಿದೆ.ಗೇಟ್ ಹಾಕಿದ್ದಾರೆ ಎಂದು ಕುಲ್ ದೀಪ್ ವಿರುದ್ಧ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಮೂವರು ಸಿಬ್ಬಂದಿಗಳನ್ನು ಒಳಗೊಂಡ ಎಸ್.ಐ ಸುತೇಶ್ ನೇತೃತ್ವದ ಪೊಲೀಸರ ತಂಡ ವಕೀಲರ ಮನೆಗೆ ಬಂದಿತ್ತು.

ಬಂದವರೇ ಅವಾಚ್ಯವಾಗಿ ನಿಂದಿಸಿದಲ್ಲದೇ, ಎಫ್.ಐ.ಆರ್ ಆಧಾರದಲ್ಲಿ ಏಕಾಏಕಿ ಕಾಲರ್ ಪಟ್ಟಿ ಹಿಡಿದು ಜೀಪಿಗೆ ತಳ್ಳಿದ್ದು, ಬಳಿಕ ಮನೆಮಂದಿಯೊಂದಿಗೂ ಗೂಂಡಾಗಿರಿ ವರ್ತಿಸಿದೆ ಎನ್ನಲಾಗಿದೆ.ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಘಟನೆಯ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಬಳಿಕ ಪೊಲೀಸರು ಜಾಣ ಮೌನ ವಹಿಸಿದ್ದರು ಮಾತ್ರವಲ್ಲದೇ, ಓರ್ವ ಕೊಲೆ ಆರೋಪಿಯನ್ನು ಎಳೆದೊಯ್ಯುವ ರೀತಿಯಲ್ಲಿ ಎಳೆದಾಡಿರುವುದು ದೃಶ್ಯದಲ್ಲಿ ಕಂಡುಬಂದಿದೆ.

ಈ ವೇಳೆ ಕುಲ್ ದೀಪ್ ಅವರ ತಾಯಿ ಮಗನನ್ನು ಬಿಡುವಂತೆ ಒತ್ತಾಯಿಸಿದ್ದು,ಇದ್ಯಾವುದಕ್ಕೂ ಜಗ್ಗದ ಎಸ್.ಐ ಜೀಪನ್ನು ಹಿಂದೊಮ್ಮೆ, ಮುಂದೊಮ್ಮೆ ಚಲಾಯಿಸಿ ಕರುಣೆ ಇಲ್ಲದಂತೆ ವರ್ತಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸದ್ಯ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕಾನೂನು ಕಲಿತಿರುವ ವಕೀಲರಿಗೆ ಇಂತಹ ಪರಿಸ್ಥಿತಿ ಬಂದರೆ, ಸಾಮಾನ್ಯ ಜನರಿಗೆ ಪೊಲೀಸರು ನೀಡುವ ದೌರ್ಜನ್ಯ ಹೇಗಿರಬಹುದು ಎನ್ನುವುದು ಉತ್ತರ ಸಿಗದ ಪ್ರಶ್ನೆಯಾಗುಳಿದಿದ್ದು, ಕೂಡಲೇ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.

Leave A Reply

Your email address will not be published.