ಹಿಂದೂಗಳು ಮುಸ್ಲಿಮರಂತೆ ಅತಿ ಚಿಕ್ಕ ವಯಸ್ಸಿಗೆ ಮದುವೆಯಾಗಲಿ | ಹಿಂದೂಗಳು 40 ವರ್ಷದ ನಂತರ ಮದುವೆಯಾದರೆ ಮಕ್ಕಳಾಗುವುದು ಹೇಗೆ?

ಹಿಂದೂಗಳು ಮುಸ್ಲಿಮರ ಹಾಗೆ ಸಣ್ಣ ವಯಸ್ಸಿಗೆ ಮದುವೆ ಮಾಡಿಕೊಳ್ಳಬೇಕು. ಅವರು ಕೂಡ ‘ಮುಸ್ಲಿಂ ಸೂತ್ರ’ವನ್ನು
ಅಳವಡಿಸಿಕೊಳ್ಳಬೇಕು. ಹಿಂದೂಗಳು 40 ವರ್ಷದ ನಂತರ ಮದುವೆಯಾದರೆ ಮಕ್ಕಳಾಗುವುದು ಹೇಗೆ? ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿದರು.

ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಹೇಳಿಕೆಗೆ ಅಜ್ಮಲ್ ಪ್ರತಿಕ್ರಿಯೆ ನೀಡಿದ್ದು, “ಹಿಂದೂಗಳು ಪೋಷಕರ ಒತ್ತಡಕ್ಕೆ ಒಳಗಾಗಿ 40 ವರ್ಷದ ನಂತರ ಮದುವೆಯಾಗುತ್ತಾರೆ. ಹಾಗಾಗಿ 40 ವರ್ಷದ ನಂತರ ಮದುವೆಯಾದರೆ ಮಕ್ಕಳಾಗುವುದು ಹೇಗೆ? ನೀವು ಫಲವತ್ತಾದ ಭೂಮಿಯಲ್ಲಿ ಬೀಜ ಬಿತ್ತಿದರೆ, ನಿಮಗೆ ಒಳ್ಳೆಯ ಬೆಳೆ ಸಿಗುತ್ತದೆ. ಅದರಲ್ಲಿ ಬೆಳವಣಿಗೆ ಇರುತ್ತದೆ” ಎಂದು ಹೇಳಿದ್ದಾರೆ.

ಅಲ್ಲದೆ, ಹಿಂದೂಗಳು ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು. ತಮ್ಮ ಹೆಣ್ಣುಮಕ್ಕಳಿಗೆ 18-20ರ ವಯಸ್ಸಿನಲ್ಲಿ ಮದುವೆ ಮಾಡಬೇಕು. ಮುಸ್ಲಿಂ ಗಂಡಸರು 20- 22ನೇ ವಯಸ್ಸಿನಲ್ಲೇ ಮದುವೆಯಾಗುತ್ತಾರೆ ಮತ್ತು ಮುಸ್ಲಿಂ ಮಹಿಳೆಯರು 18ನೇ ವಯಸ್ಸಿಗೆ ಮದುವೆಯಾಗುತ್ತಾರೆ. ಈ ನಿಯಮ ಕಾನೂನಿನ ಅಡಿಯಲ್ಲಿ ಅನುಮತಿ ಹೊಂದಿದೆ.

ಹಿಂದೂಗಳು ಮದುವೆಗೂ ಮುನ್ನ ಒಂದು, ಎರಡು ಅಥವಾ ಮೂರು ಹೆಂಡತಿಯರನ್ನು ಕಾನೂನುಬಾಹಿರವಾಗಿ ಹೊಂದಿರುತ್ತಾರೆ. ಆದರೆ ಅವರು ಮಕ್ಕಳಿಗೆ ಜನ್ಮ ನೀಡುವುದಿಲ್ಲ. ತಮ್ಮಷ್ಟಕ್ಕೆ ಸಂಬಂಧವನ್ನು ಆನಂದಿಸುತ್ತಾರೆ ಮತ್ತು ಹಣದ ಉಳಿಕೆ ಮಾಡುತ್ತಾರೆ ಎಂದು ಎಐಯುಡಿಎಫ್ ಮುಖ್ಯಸ್ಥ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಾಗೇ ದಿಲ್ಲಿಯಲ್ಲಿ ಅಫ್ತಾಬ್ ಪೂನಾವಾಲಾನಿಂದ ನಡೆದ ಶ್ರದ್ಧಾ ವಾಲ್ಕರ್ ಭೀಕರ ಹತ್ಯೆ ಪ್ರಕರಣ ಉಲ್ಲೇಖಿಸಿ ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ ಅವರು ‘ಲವ್ ಜಿಹಾದ್’ ಬಗ್ಗೆ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಜ್ಮಲ್, “ಮುಖ್ಯಮಂತ್ರಿಯವರು ಇಂದು ದೇಶದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಅವರನ್ನು ಯಾರು ತಡೆಯುತ್ತಾರೆ? ನೀವೂ ಕೂಡ ನಾಲ್ಕರಿಂದ ಐದು ಲವ್ ಜಿಹಾದ್‌ಗಳನ್ನು ಮಾಡಿ. ಇದಕ್ಕೆ ಯಾವ ಅಡ್ಡಿ ಇಲ್ಲ. ನಮ್ಮ ಮುಸ್ಲಿಂ ಹೆಣ್ಣುಮಕ್ಕಳನ್ನು ನೀವೂ ಕೂಡ ಕರೆದುಕೊಂಡು ಹೋಗಿ. ನಾವು ಅದನ್ನು ಸ್ವಾಗತಿಸುತ್ತೇವೆ. ಅದರ ವಿರುದ್ಧ ಹೋರಾಟ ಕೂಡ ಮಾಡುವುದಿಲ್ಲ” ಎಂದು ಸವಾಲು ಎಸೆದಿದ್ದಾರೆ.

Leave A Reply

Your email address will not be published.