Tech tips : ವೈರಸ್ ಅಟ್ಯಾಕ್ ತಪ್ಪಿಸಲು ಈ ಟ್ರಿಕ್ ಫಾಲೋ ಮಾಡಿದರೆ ನಿಮ್ಮ ಕಂಪ್ಯೂಟರ್ ಸೇಫ್!!
ಈ ಕಂಪ್ಯೂಟರ್ ಯುಗದಲ್ಲಿ ಕಂಪ್ಯೂಟರ್ ಎಂಬುದು ಮನುಷ್ಯರಿಗೆ ಬಹಳ ಮುಖ್ಯವಾಗಿಬಿಟ್ಟಿದೆ. ಮನುಷ್ಯನ ಕೈಗಿಂತಲೂ ಕಂಪ್ಯೂಟರ್ನ ಕೆಲಸವೇ ಹೆಚ್ಚು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಕಂಪ್ಯೂಟರ್ ಬಳಕೆಯನ್ನು ಗಮನಿಸಿ ಕೆಲವು ಸೈಬರ್ ಕಳ್ಳರು ವಂಚನೆ ಮಾಡುತ್ತಿದ್ದಾರೆ. ಇದಲ್ಲದೆ ಕೆಲವೊಂದು ಕಂಪ್ಯೂಟರ್ಗಳಿಗೆ ಮಾಲ್ವೇರ್ ಎಂಬ ವೈರಸ್ ಕೂಡ ಅಟ್ಯಾಕ್ ಆಗುತ್ತಿದೆ. ಆದರೆ ಈ ಹ್ಯಾಕ್ ನಿಂದ ತಪ್ಪಿಸಲು ಇದಕ್ಕೆ ಸಂಬಂಧಪಟ್ಟ ಕುತೂಹಲ ಮಾಹಿತಿ ಇಲ್ಲಿದೆ.
ಮಾಲ್ವೇರ್ ಎನ್ನುವುದು ಕಂಪ್ಯೂಟರ್ನಲ್ಲಿ ಸಂಭವಿಸುವ ವೈರಸ್ನ ಹೆಸರು. ಇದು ಕಂಪ್ಯೂಟರ್ನ ಡೇಟಾವನ್ನು ಕ್ಷಣಾರ್ಧದಲ್ಲಿ ವಶಕ್ಕೆ ಪಡೆಯುತ್ತದೆ. ವೈರಸ್ಗಳು ಕಂಪ್ಯೂಟರ್ನ ಪ್ರೋಗ್ರಾಂನೊಳಗೆ ಪ್ರವೇಶಿಸಿ, ಆ ಪ್ರೋಗ್ರಾಂ ರನ್ ಆಗುವಾಗ ಈ ವೈರಸ್ ಕೂಡ ರನ್ ಆಗಿ ಬೇರೆ ಪ್ರೋಗ್ರಾಂಗಳಿಗೆ ಅಥವಾ ಅಪ್ಲಿಕೇಶನ್ಗಳಿಗೆ ಅಲ್ಲದೇ ಇಡೀ ಕಂಪ್ಯೂಟರಿಗೆ ಹರಡುತ್ತದೆ. ಹೆಚ್ಚಾಗಿ, ಪೂರ್ವನಿರ್ಧರಿತ ದಿನದಂದು ಈ ವೈರಸ್ ಕೋಡ್ ಸಕ್ರಿಯಗೊಳ್ಳುವಂತೆ ಪ್ರೋಗ್ರಾಂ ಮಾಡಬಹುದಾಗಿದೆ. ಕೆಲ ವೈರಸ್ಗಳಲ್ಲಿ ಪ್ರೋಗ್ರಾಂ ಅನ್ನು ರನ್ ಮಾಡಲೇಬೇಕೆಂದಿಲ್ಲ. ಸ್ವಯಂ ಆಗಿ ರನ್ ಆಗುತ್ತದೆ ಮತ್ತು ತದ್ರೂಪಿ ಫೈಲ್ಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೋಗುತ್ತದೆ.
ಹಿಂದೆಲ್ಲಾ ವೈರಸ್ಗಳು ಕಂಪ್ಯೂಟರನ್ನು ಹಾಳುಗೆಡಹುವಂತೆ ಕಿಡಿಗೇಡಿಗಳ ಮೂಲಕ ಸೃಷ್ಟಿಯಾಗುತ್ತಿದ್ದವು. ಆದರೆ ಈಗ ಅವು ಮಾಹಿತಿ ಕದಿಯುವ ತಂತ್ರಜ್ಞಾನವಾಗಿ ಬೆಳೆದುಬಿಟ್ಟಿದೆ. ಕಂಪ್ಯೂಟರ್ಗೆ ದಾಳಿಯಾಗುವಂತಹ ಯಾವುದೇ ರೀತಿಯ ವೈರಸ್ಗಳು ನಿಮ್ಮ ಎಲ್ಲಾ ಡೇಟಾವನ್ನು ನಾಶಪಡಿಸುವ ಅಥವಾ ಕದಿಯುವ ಸಾಮರ್ಥ್ಯವನ್ನು ಹೊಂದಿದೆ.
ಕಂಪ್ಯೂಟರ್ ಗೆ ವೈರಸ್ ಅಟ್ಯಾಕ್ ಆಗಿದೆ ಎಂದಾದರೆ ಸಿಸ್ಟಮ್ ನಲ್ಲಿ ಬಿಓಡಿ( ಬ್ಲೂ ಸ್ಕ್ರೀನ್ ಆಫ್ ಡೆತ್) ಕಾಣಿಸುವುದು ವೈರಸ್ ಅಟ್ಯಾಕ್ ಆಗಿರುವ ಮುಖ್ಯ ಲಕ್ಷಣವಾಗಿದೆ. ಕಂಪ್ಯೂಟರ್ ಸಾಮಾನ್ಯ ವೇಗಕ್ಕಿಂತ ಮತ್ತಷ್ಟು ನಿಧಾನವಾಗಿ ಕೆಲಸ ಮಾಡುತ್ತದೆ. ಪ್ರೊಸೆಸ್ ಆಗುವ ರಿಸೋರ್ಸ್ ಕೋಟ್ಗಳ ಮೇಲೆ ಮಾಲ್ವೇರ್ ವೈರಸ್ಗಳು ಅಟ್ಯಾಕ್ ಮಾಡಿದಾಗ ಈ ರೀತಿ ಆಗುವ ಸಾಧ್ಯತೆ ಇರುತ್ತದೆ. ಪ್ರೋಗ್ರಾಮ್ ಅನ್ನು ರನ್ ಮಾಡಲು ನೀವು ಯಾವಾಗ ಬಯಸುತ್ತೀರೋ ಆಗ ಫೈಲ್ ಕರಪ್ಟ್ ಆಗಿದೆ ಎಂದು ಪದೇ ಪದೇ ತೋರಿಸುತ್ತದೆ. ಒಂದು ಫೋಲ್ಡರ್ನೊಳಗಡೆ ನೀವು ರಚಿಸದ ಕೆಲವು ಶಾರ್ಟ್ ಕಟ್ ಫೋಲ್ಡರ್ ಸೃಷ್ಟಿಯಾದರೆ ಅದು ವೈರಸ್ಗಳ ದಾಳಿಯಿಂದ ಬರಲು ಸಾದ್ಯ.
ವೈರಸ್ ದಾಳಿಯಾಗಿದೆ ಎಂದು ತಿಳಿದ ತಕ್ಷಣ ನಿಮ್ಮ ಇಂಟರ್ನೆಟ್ ಕನೆಕ್ಷನ್ ಅನ್ನು ತಪ್ಪಿಸಿ. ಈ ಮೂಲಕ ನಿಮ್ಮ ಕಂಪ್ಯೂಟರ್ ಹ್ಯಾಕ್ ಆಗದಂತೆ ತಪ್ಪಿಸಬಹುದು. ಉತ್ತಮ ಗುಣಮಟ್ಟದ ಆಂಟಿವೈರಸ್ ಅನ್ನು ಕಂಪ್ಯೂಟರ್ ಗೆ ಇನ್ಸ್ಟಾಲ್ ಮಾಡಿ ಬಳಸಿ. ಈ ಆಂಟಿ ವೈರಸ್ಗೆ ನಿಗದಿತವಾಗಿ ಕೊನೆಯ ದಿನಾಂಕವನ್ನು ನೀಡಿರುತ್ತಾರೆ. ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆಂಟಿ ವೈರಸ್ ಹಾಕುವುದರಿಂದ ಇದು ನಿಮ್ಮ ಕಂಪ್ಯೂಟರನ್ನು ಹ್ಯಾಕ್ ಆಗುವುದರಿಂದ ರಕ್ಷಿಸುತ್ತದೆ.
ನೀವು ಮೊಬೈಲ್, ಪೆನ್ ಡ್ರೈವ್ ಅಥವಾ ಯಾವುದೇ ಸಾಧನವನ್ನು ಕಂಪ್ಯೂಟರ್ಗೆ ಸಂಪರ್ಕಿಸುವಾಗ ಮೊದಲು ಸ್ಕ್ಯಾನ್ ಮಾಡಿಕೊಳ್ಳಿ. ಮುಖ್ಯವಾಗಿ ನೀವು ಆನ್ಲೈನ್ನಲ್ಲಿ ಏನಾದರು ವೀಕ್ಷಿಸುವಾಗ ಅಥವಾ ಡೌನ್ಲೋಡ್ ಮಾಡುವಾಗ ಆ ಲಿಂಕ್ ಅನ್ನು ಸರಿಯಾಗಿ ಚೆಕ್ ಮಾಡಿಕೊಂಡು ಓಪನ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಕಂಪ್ಯೂಟರ್ ಅಲ್ಲಿರುವ ಡೇಟಾ ಹ್ಯಾಕ್ ಆಗುವುದಿಲ್ಲ.