Ration Card : ಆದ್ಯತಾ ಪಡಿತರ ಚೀಟಿ ವಿತರಣೆಗೆ ರಾಜ್ಯ ಸರಕಾರ ಆದೇಶ!
ಸರ್ಕಾರವು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ಪಡಿತರ ಚೀಟಿಯೂ ಒಂದು. ಇದೀಗ ರಾಜ್ಯ ಸರ್ಕಾರವು ಬಡ ಕುಟುಂಬಗಳಿಗೆ ಗುಡ್ ನ್ಯೂಸ್ ನೀಡಿದೆ.ರಾಜ್ಯದಲ್ಲಿ ಹೊಸದಾಗಿ ಆಧ್ಯತಾ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ಕಾಯುತ್ತಿರುವ ಬಡ ಕುಟುಂಬಗಳಿಗೆ ಅಂತೂ ಇಂತೂ ಆದ್ಯತಾ ಪಡಿತರ ಚೀಟಿ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ 2022 ಆಗಸ್ಟ್ 25 ರ ವರೆಗೂ ಆಧ್ಯತಾ ಪಡಿತರ ಚೀಟಿಗಾಗಿ (Ration Card) ರಾಜ್ಯಾದ್ಯಂತ ಅರ್ಜಿ ಸಲ್ಲಿಸಿರುವ ಬರೊಬ್ಬರಿ 2,73,662 ಅರ್ಜಿದಾರರ ಪೈಕಿ ವಿಲೇವಾರಿಗೆ ಯೋಗ್ಯವಿರುವ ಒಟ್ಟು 1,55,927 ಮಂದಿ ಅರ್ಜಿದಾರರಿಗೆ ಹೊಸದಾಗಿ ಆದ್ಯತಾ ಪಡಿತರ ಚೀಟಿ ವಿತರಿಸಲು ಸರ್ಕಾರ ರಾಜ್ಯದ (Karnataka) ಎಲ್ಲಾ ಜಿಲ್ಲಾಡಳಿಗಳಿಗೆ ಆದೇಶಿಸಿದೆ. ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗೆ 2017-18 ರಿಂದ 2021-22ನೇ ಸಾಲಿನಲ್ಲಿ ಕೂಡ ಅರ್ಜಿ ಸಲ್ಲಿಸಿದ್ದು ಅರ್ಜಿಗಳ ವಿಲೇವಾರಿ ಸಂದರ್ಭದಲ್ಲಿ,2017-18ನೇ ಸಾಲಿನ ಸಲ್ಲಿಕೆ ಆಗಿರುವ ಅರ್ಜಿಗಳ ವಿಲೇವಾರಿಗೆ ಮೊದಲ ಆದ್ಯತೆ ನೀಡುವಂತೆ ಸರ್ಕಾರ ಸೂಚಿಸಿದೆ.
ಪ್ರಥಮ ಆದ್ಯತೆಯಾಗಿ ತೀವ್ರ ಆಹಾರ ಅಭದ್ರತೆಗೆ ಒಳಗಾಗಿರುವ ಕುಟುಂಬಗಳು ಮತ್ತು ಇದುವರೆಗೂ ಯಾವುದೇ ಪಡಿತರ ಚೀಟಿ ಹೊಂದಿಲ್ಲದ ಕುಟುಂಬಗಳನ್ನು ಪರಿಗಣಿಸುವಂತೆ ಸರ್ಕಾರ ಸೂಚಿಸಿದೆ. ಎರಡನೇ ಆದ್ಯತೆಯಾಗಿ ಮೂಲ ಬುಡಕಟ್ಟು, ಅಲೆಮಾದರಿ ಕುಟುಂಬಗಳು, ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟವರ್ಗಗಳ ಹಾಗೂ ಕಾಡಿನಲ್ಲಿ ವಾಸ ಮಾಡುವ ಕುಟುಂಬಗಳಿಗೆ ಆದ್ಯತಾ ಪಡಿತರ ಚೀಟಿ ವಿತರಿಸಬೇಕೆಂದು ಸರ್ಕಾರದ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
ರಾಜ್ಯದಲ್ಲಿ 1,55,927 ಅರ್ಜಿದಾರರಿಗೆ ಆದ್ಯತಾ ಪಡಿತರ ಚೀಟಿ ವಿತರಿಸಲು ಆದೇಶಿಸಿರುವ ಸರ್ಕಾರ ಕಲಬುರಗಿ ಜಿಲ್ಲೆಯಲ್ಲಿ 15,432, ಬೆಂಗಳೂರು ನಗರ ಜಿಲ್ಲೆಯಲ್ಲಿ 13,532, ವಿಜಪುರದಲ್ಲಿ 10,980, ಬೆಳಗಾವಿಯಲ್ಲಿ 10,874 ಅರ್ಜಿದಾರರಿಗೆ ಆದ್ಯತಾ ಪಡಿತರ ಚೀಟಿ ಸಿಗಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಟ್ಟು 4,060 ಅರ್ಜಿಗಳು ಆದ್ಯತಾ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು ಆ ಪೈಕಿ 2042 ಅರ್ಜಿಗಳ ಸ್ಥಳ ಪರೀಶೀಲಿಸಿರುವ ಆಹಾರ ಇಲಾಖೆ ಅಧಿಕಾರಿಗಳು, ಒಟ್ಟು 1,623 ಅರ್ಜಿಗಳು ಆದ್ಯತಾ ಪಡಿತರ ಚೀಟಿ ವಿತರಿಸಲು ಅರ್ಹವೆಂದು ಗುರುತಿಸಿವೆ.
ಅಲ್ಲದೇ ಪ್ರತಿ ಅಧಿಕಾರಿ ವಿತರಿಸುವ ಹೊಸ ಆದ್ಯತಾ ಮತ್ತು ಆದ್ಯತೇತರ ಪಡಿತರ ಚೀಟಿಗಳ ಬಗ್ಗೆ ಇಲಾಖೆ ಅಥವಾ ಬೋರ್ಡ್‌ನಲ್ಲಿ ಪ್ರಕಟಿಸುವಂತೆ ಸೂಚಿಸಿದೆ. ಈಗಾಗಲೇ ಆದ್ಯತೇತರ ಪಡಿತರ ಚೀಟಿ ಹೊಂದಿರುವವರು ಆಧ್ಯತಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದರೆ ಅಂತಹ ಕುಟುಂಬಗಳನ್ನು ಆದ್ಯತಾ ಕುಟುಂಬಗಳಿಗೆ ಪರಿಗಣಿಸಬಾರದೆಂದು ಸರ್ಕಾರ ಸೂಚಿಸಿದೆ. ಅರ್ನಹರಿಗೆ ಯಾವುದೇ ರೀತಿ ಆದ್ಯತಾ ಚೀಟಿ ವಿತರಿಸದೇ ಅರ್ಹ ಕುಟುಂಬಗಳಿಗೆ ವಿತರಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.