ವಿದ್ಯಾರ್ಥಿಗಳೇ ಗಮನಿಸಿ : ಪಿಯುಸಿ ಯಲ್ಲಿ ಬಹು ಆಯ್ಕೆ ಪ್ರಶ್ನೆ ಮಾದರಿ ಜಾರಿಗೆ : ಸರಕಾರ ಚಿಂತನೆ

ರಾಜ್ಯ ಸರ್ಕಾರ ಮಕ್ಕಳ ಫಲಿತಾಂಶ ಸುಧಾರಣೆ ಮಾಡುವ ಸಲುವಾಗಿ ಹೊಸ ಯೋಜನೆ ರೂಪಿಸಿದ್ದು,ಪದವಿ ಪೂರ್ವ ಶಿಕ್ಷಣದ ವ್ಯವಸ್ಥೆಯಲ್ಲಿ ಬಹು ಆಯ್ಕೆ ಮಾದರಿ ಪ್ರಶ್ನೆ ಜಾರಿಗೆ ತರಲು ಚಿಂತನೆ ನಡೆಸಿದೆ.

ಹೌದು, ಪಿಯುಸಿಯ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ತಂದು ಸುಧಾರಣಾ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದ್ದು, 2023-24 ರಿಂದ ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಪರಿಚಯಿಸಲು ಸರ್ಕಾರ ಚಿಂತನೆ ನಡೆಸಿದ್ದು, ದ್ವಿತೀಯ ಪಿಯುಸಿಗೆ ಸೀಮಿತಗೊಳಿಸದೆ, ಪ್ರಥಮ ಪಿಯುಸಿಗೂ ಬಹು ಆಯ್ಕೆ ಮಾದರಿಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ ಸಿ ನಾಗೇಶ್ ನೇತೃತ್ವದಲ್ಲಿ ನಡೆದ ಪಿಯು ಇಲಾಖೆಯ ಪರಿಶೀಲನಾ ಸಭೆಯಲ್ಲಿ ಈ ಕುರಿತು ಪ್ರಸ್ತಾಪವಾಗಿ ಚರ್ಚೆಯಾಗಿದೆ ಎನ್ನಲಾಗಿದ್ದು, ಆದರೆ ಈ ಕುರಿತಾಗಿ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ತಿಳಿದು ಬಂದಿದೆ.

ಈ ಸಭೆಯ ಸಮಾಲೋಚನೆ ಸಂದರ್ಭ ಕೆಲ ಹಿರಿಯ ಅಧಿಕಾರಿಗಳು ಪಿಯುಸಿಯಲ್ಲಿ ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು ಪರಿಚಯಿಸುವಂತೆ ಪ್ರಸ್ತಾಪ ಮಾಡಿದ್ದು, ಮಕ್ಕಳ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಪಿಯುಸಿಯಲ್ಲಿ ಬಹುಪ್ರಶ್ನೆ ಮಾದರಿ ಅಳವಡಿಸಿಸಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.

ಹಾಗಾಗಿ, ಸರ್ಕಾರ ಮುಂದಿನ ಸಭೆಗಳಲ್ಲಿ ಈ ವಿಚಾರದ ಕುರಿತಾಗಿ ಕೂಲಂಕುಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸರ್ಕಾರ ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ 2020 (NEP) ಯನ್ನು ಜಾರಿಗೆ ತರುವ ಕುರಿತಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.

75 ವರ್ಷಗಳ ನಂತರ ಸ್ವಾವಲಂಬಿ ಸಮಾಜಕ್ಕಾಗಿ ಎನ್‌ಇಪಿಯನ್ನು ಪರಿಚಯಿಸುವ ಕುರಿತು ಮಾಹಿತಿ ನೀಡಿದ್ದು , ಸಾಮಾಜಿಕ ಬದಲಾವಣೆ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ಎನ್‌ಇಪಿ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.