37,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲು ತೆರೆದು ಇಳಿಯಲು ಹೊರಟ ಮಹಿಳೆ !

ಬಸ್ಸಿನಲ್ಲಿ ಕಂಡಕ್ಟರ್ ನೊಂದಿಗೆ ಜಗಳ ಮಾಡಿಕೊಂಡು, ಮಧ್ಯದಲ್ಲಿ ಬಸ್ಸನ್ನು ನಿಲ್ಲಿಸಬಹುದು, ಅದರಿಂದ ಕೆಳಕ್ಕೆ ಇಳಿಯಲೂಬಹುದು. ರೈಲಿನಲ್ಲಿ ಪ್ರಯಾಣಿಕರಿಂದ ತೊಂದರೆಯಾದರೆ ರೈಲನ್ನೂ ಬೆಲ್ ಜಗ್ಗಿ ನಿಲ್ಲಿಸಬಹುದು. ಆದರೆ ಸಾವಿರಾರು ಅಡಿ ಎತ್ತರದಲ್ಲಿ ಹಾರಾಡುತ್ತಿರುವ ವಿಮಾನದ ಬಾಗಿಲು ತೆರೆದು ಯಾರಾದರೂ ಇಳಿಯಲು ಹೊರಟರೆ ಅದಕ್ಕೆ ಏನೆನ್ನಬೇಕು ?

ಹಾಸ್ಯಪ್ರದ ಅನ್ನಿಸುವ, ಆದರೆ ಘಟನೆಯ ತೀವ್ರತೆಯಲ್ಲಿ ಭಯ ಹುಟ್ಟಿಸುವ ಒಂದು ಸನ್ನಿವೇಶ ನಡೆದಿದ್ದು, ಅದರಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಸುಮಾರು 37,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲನ್ನೇ ತೆರೆಯಲು ಹೋಗಿದ್ದಾಳೆ. ಆಕೆ ವಿಮಾನದ ಬಾಗಿಲಿಗೆ ಕೈ ಹಾಕುವ ವೇಳೆ ಅಲ್ಲಿದ್ದ ಇತರ ಪ್ರಯಾಣಿಕರ ಪರಿಸ್ಥಿತಿ ಹೇಗಾಗಿರಬೇಡ, ನೀವೇ ಊಹಿಸಿಕೊಳ್ಳಿ.

ಈ ಘಟನೆ ನಡೆದಿರುವುದು ಅಮೆರಿಕಾದ ಟೆಕ್ಸಾಸ್‌ನಲ್ಲಿ, ಸೌತ್‌ವೆಸ್ಟ್ ಏರ್‌ಲೈನ್ಸ್ 192 ರ ಮೂಲಕ, ಟೆಕ್ಸಾಸ್‌ನ ಹೂಸ್ಟನ್‌ನಿಂದ ಓಹಿಯೋದ ಕೊಲಂಬಸ್‌ಗೆ ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿತ್ತು ಆ ವಿಮಾನ. ವಿಮಾನ ಸುಮಾರು 37,000 ಅಡಿ ಎತ್ತರದಲ್ಲಿ ಹಾರಾಡುತ್ತಿತ್ತು ಈ ವೇಳೆ ಇದ್ದಕ್ಕಿದ್ದ ಹಾಗೆ ವಿಮಾನದಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಆಸನದಿಂದ ಎದ್ದು ಬಂದು ವಿಮಾನದ ಹಿಂಬದಿಯಲ್ಲಿರುವ ಬಾಗಿಲನ್ನು ತೆರೆಯಲು ಹೋಗಿದ್ದಾಳೆ. ಕೂಡಲೇ ಎಚ್ಚೆತ್ತ ವಿಮಾನದ ಸಿಬ್ಬಂದಿ ಮಹಿಳೆಯನ್ನು ತಡೆದಿದ್ದಾರೆ, ಆದರೂ ಆಕೆಯನ್ನು ದೂಡಿ ಬಾಗಿಲ ಬಳಿ ಹೋದ ಮಹಿಳೆ ಇನ್ನೇನು ಬಾಗಿಲು ಓಪನ್ ಮಾಡಬೇಕೆನ್ನುವಷ್ಟರಲ್ಲಿ ಅಲ್ಲೇ ಇದ್ದ ಮಹಿಳಾ ಪ್ರಯಾಣಿಕರೊಬ್ಬರು ಆ ಮಹಿಳೆಯನ್ನು ಹಿಡಿದಿದ್ದಾರೆ. ಅದರಿಂದ ಕೋಪಗೊಂಡ ಮಹಿಳೆ ತನ್ನನ್ನು ಹಿಡಿದ ವ್ಯಕ್ತಿಯ ಕೈಯನ್ನೇ ಕಚ್ಚಿದ್ದಾಳೆ. ಈ ವೇಳೆ ಇತರ ಸಹ ಪ್ರಯಾಣಿಕರು ಈ ಮಹಿಳೆಯನ್ನು ಹಿಡಿದಿಟ್ಟಿದ್ದಾರೆ. ಬಳಿಕ ಸಿಬ್ಬಂದಿಯ ಸೂಚನೆಯ ಮೇರೆಗೆ ಹಿಲರಿ ಕ್ಲಿಂಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಇಳಿಸಲಾಗಿದೆ.

ವಿಮಾನ ಭೂಸ್ಪರ್ಶವಾದ ಕೂಡಲೇ ವಿಮಾನದೊಳಗೆ ರಾದ್ದಂತ ಮಾಡಿದ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರ ವಶದಲ್ಲಿದ್ದ ಮಹಿಳೆಯನ್ನು ಅಗ್ಬೆಗ್ನಿನೌ ಎಂದು ಹೇಳಲಾಗಿದ್ದು, ವಿಚಾರಣೆ ವೇಳೆ ಆಕೆ ದೇವರ ಮೇಲೆ ದೂರು ಹಾಕಿದ್ದಾಳೆ. ” ಜೀಸಸ್ ಹೇಳಿದಂತೆ ನಾನು ನಡೆದುಕೊಳ್ಳುತ್ತಿದ್ದೇನೆ, ಜೀಸಸ್ ನನ್ನನ್ನು ಓಹಿಯೋಗೆ ತೆರಳುವಂತೆ ಹೇಳಿದ್ದಾರೆ. ಅಲ್ಲದೆ ವಿಮಾನದಲ್ಲಿ ಬಾಗಿಲನ್ನು ತೆರೆಯಲು ಹೇಳಿದ್ದಾರೆ, ಅದರಂತೆ ನಾನು ಬಾಗಿಲನ್ನು ತೆರೆಯಲು ಹೊರಟೆ ” ಎಂದು ಹೇಳಿಕೊಂಡಿದ್ದಾರೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಈ ಮಹಿಳೆ ತಾನು ಓಹಿಯೋಗೆ ವಿಮಾನದಲ್ಲಿ ತೆರಳುವ ವಿಚಾರ ಆಕೆಯ ಮನೆಯವರಿಗೂ ತಿಳಿದಿರಲಿಲ್ಲವಂತೆ. ಗಂಟೆಗೆ 800 ಕಿಲೋ ಮೀಟರ್ ವೇಗದಲ್ಲಿ ಹೋಗುತ್ತಿದ್ದ ವಿಮಾನವು 37000 ಅಡಿ ಎತ್ತರದಲ್ಲಿ ಮೈನಸ್ ಡಿಗ್ರೀ ಉಷ್ಣಾಂಶದಲ್ಲಿ ಓಡುತ್ತಿತ್ತು. ಒಂದು ಚೂರು ವಿಮಾನದ ಬಾಗಿಲಲ್ಲಿ ಗಾಳಿ ಒಳನುಗ್ಗಿದ್ದರೂ, ತಕ್ಷಣ ವಿಮಾನ ಅಲ್ಲೋಲ ಕಲ್ಲೋಲ ಆಗಿರೋದಂತೂ ಗ್ಯಾರಂಟಿ. ಸ್ವಲ್ಪದಲ್ಲಿ ಭಾರಿ ಅನಾಹುತ ತಪ್ಪಿ ಹೋಗಿದೆ.

Leave A Reply

Your email address will not be published.