ಹಳೆಯ ವಾಹನ ಸವಾರರೆ ಗಮನಿಸಿ! ಹಳೆಯ ವಾಹನ ಗುಜರಿ ನೀತಿಯ ಪ್ರಯೋಜನವೇನು? ಲಾಭ – ನಷ್ಟಗಳೇನು !!!

ಕೇಂದ್ರ ಸರ್ಕಾರ ವಾಹನ ಗುಜರಿ ನೀತಿಯನ್ನು ಕಳೆದ ವರ್ಷ ಪ್ರಕಟಿಸಿದೆ. ಈ ನಡುವೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಇತ್ತೀಚೆಗಷ್ಟೇ, ಈ ವಿಚಾರವನ್ನು ಪ್ರಸ್ತಾಪಿಸಿದ್ದು, 15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಲಾಗುವ ಕುರಿತು ಮಾಹಿತಿ ನೀಡಿದ್ದಾರೆ.

 

ವಿಶ್ವದ ಹವಾಮಾನ ಬದಲಾವಣೆ ಸಮಸ್ಯೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಹಲವು ಕ್ರಮಗಳಲ್ಲಿ ವಾಹನಗಳ ಮಾಲಿನ್ಯ ನಿಗ್ರಹಿಸುವುದು ಒಂದಾಗಿದೆ. ಭಾರತ ಈ ನಿಟ್ಟಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಹಂತ ಹಂತವಾಗಿ ನಿಲ್ಲಿಸಿ ಎಲೆಕ್ಟ್ರಿಕ್ ವಾಹನಗಳನ್ನು ಸಂಪೂರ್ಣವಾಗಿ ತರುವ ಯೋಜನೆ ಜಾರಿಗೆ ತರಲು ಮುಂದಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಚಾಲಿತ ವಾಹನಗಳಿಂದ ಹೆಚ್ಚು ಮಾಲಿನ್ಯವಾಗುತ್ತದೆ. ಅದರಲ್ಲೂ 15 ವರ್ಷಗಳಿಗಿಂತ ಹೆಚ್ಚು ಹಳೆಯದಾದ ವಾಹನಗಳಿಂದ ಮಾಲಿನ್ಯ ಹೆಚ್ಚು. ಹೀಗಾಗಿ, ಇವುಗಳನ್ನು ನಿಲ್ಲಿಸುವುದು ಸರ್ಕಾರದ ಸದ್ಯದ ಗುರಿಯಾಗಿದ್ದು,ಈ ಹಿನ್ನೆಲೆಯಲ್ಲಿ ವಾಹನ ಗುಜರಿ ನೀತಿಯನ್ನು ಜಾರಿಗೆ ತರುತ್ತಿದೆ. ಈಗಾಗಲೇ 15 ವರ್ಷಗಳ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಬಗ್ಗೆ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದ್ದು , ಸರ್ಕಾರಿ ಬಸ್ಸು, ಕಾರು ಇತ್ಯಾದಿ ವಾಹನಗಳೂ ಇದರಲ್ಲಿ ಒಳಗೊಂಡಿವೆ.

ಈ ಅಧಿಸೂಚನೆಯ ಅನ್ವಯ, ವಾಹನಗಳು 15 ವರ್ಷಗಳಿಗಿಂತ ಹಳೆಯದಾದ ದುರಸ್ತಿ ಸ್ಥಿತಿಯಲ್ಲಿರುವ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ವಾಹನಗಳನ್ನು 2023 ಏಪ್ರಿಲ್ 1ರಿಂದ ಗುಜರಿಗೆ ಹಾಕಲು ಆದೇಶಿಸಲಾಗಿದೆ.ಕೆಲ ಸಮೀಕ್ಷೆಗಳ ಅನುಸಾರ, ಕರ್ನಾಟಕದಲ್ಲೇ ಅತಿ ಹೆಚ್ಚು ಹಳೆಯ ವಾಹನಗಳಿವೆ ಎನ್ನಲಾಗಿದ್ದು, ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರ ಮುಂದಿನ 15 ದಿನಗಳಲ್ಲಿ ನೀತಿ ಹೊರತರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ರಾಜ್ಯ ಸಾರಿಗೆ ಇಲಾಖೆ 2021ರಲ್ಲಿ ಬಿಡುಗಡೆ ಮಾಡಿದ ವರದಿ ಪ್ರಕಾರ ಕರ್ನಾಟಕದಲ್ಲಿ 2.8 ಕೋಟಿ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದು, ಇವುಗಳ ಪೈಕಿ 15 ವರ್ಷಕ್ಕಿಂತ ಹೆಚ್ಚು ಹಳೆಯದಾದ ವಾಹನಗಳ ಸಂಖ್ಯೆ 79 ಲಕ್ಷದಷ್ಟಿದೆ.

25 ವರ್ಷಗಳಿಗಿಂತ ಹೆಚ್ಚು ಹಳೆಯದಾದ ಸಾವಿರಾರು ವಾಹನಗಳು ಈಗಲೂ ರಾಜ್ಯದ ರಸ್ತೆಗಳಲ್ಲಿ ಸಂಚರಿಸುತ್ತಿರುವುದು ತಿಳಿದುಬಂದಿದೆ. ಅಷ್ಟೆ ಅಲ್ಲದೆ, ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಕೂಡ ಈ ಪ್ರಮಾಣದಲ್ಲಿ ಹಳೆಯ ವಾಹನಗಳಿಲ್ಲ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಹಳೆಯ ವಾಹನ ಗುಜರಿ ನೀತಿ ಕೇವಲ ಸರ್ಕಾರಿ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ ಎಂದುಕೊಂಡರೆ ಖಂಡಿತ ಅಲ್ಲ!!!..ಈ ನಿಯಮ ಎಲ್ಲಾ ವಾಹನಗಳಿಗೂ ಅನ್ವಯ ಆಗಲಿವೆ. ಕೇಂದ್ರ ಸರ್ಕಾರದ ಗುಜರಿ ನೀತಿಗೆ ಅನುಗುಣವಾಗಿ ರಾಜ್ಯ ಸರ್ಕಾರ ಸ್ಕ್ರಾಪೇಜ್ ಪಾಲಿಸಿ ತರುವ ಯೋಜನೆಯಲ್ಲಿದ್ದು, ಹಳೆಯ ವಾಹನವನ್ನು ಕೊಟ್ಟು, ಹೊಸ ವಾಹನ ಖರೀದಿ ಮಾಡಿಕೊಳ್ಳಲು ಮುಂದಾಗುವವರಿಗೆ ಕೆಲವೊಂದು ರಿಯಾಯಿತಿ ನೀಡಲಾಗುತ್ತದೆ. ಇದರ ಜೊತೆಗೆ ತೆರಿಗೆ ವಿನಾಯಿತಿ ,ಹೀಗೆ ಹಲವು ಉತ್ತೇಜನಗಳನ್ನು ರಾಜ್ಯ ಸರ್ಕಾರ ಪ್ರಕಟಿಸುವ ಸಾಧ್ಯತೆಗಳಿವೆ.

ಕರ್ನಾಟಕದಲ್ಲಿ ಕೆಎಸ್ಸಾರ್ಟಿಸಿ ನಿಗಮಗಳು ಬಹಳಷ್ಟು ಹೊಸ ಬಸ್ಸುಗಳನ್ನು ಖರೀದಿಸಿದ್ದು, ಹೀಗಾಗಿ, ಹಳೆಯ ವಾಹನಗಳನ್ನು ಗುಜರಿಗೆ ವಿಲೇವಾರಿ ಮಾಡಿದರು ಕೂಡ ಪ್ರಯಾಣಿಕ ಸೇವೆ ನೀಡುವಷ್ಟು ವ್ಯವಸ್ಥೆಗಳಿವೆ ಎನ್ನಲಾಗಿದೆ.ಹಳೆಯ ವಾಹನಗಳ ಫಿಟ್ನೆಸ್ ಟೆಸ್ಟ್ ಮಾಡಿಸಿದ ಬಳಿಕ ಎಫ್ಸಿ ಪಡೆಯುವುದು ಕಡ್ಡಾಯಪಡಿಸಲಾಗಿದೆ.

ಒಂದು ವೇಳೆ ಕ್ಷಮತಾ ಪರೀಕ್ಷೆಯಲ್ಲಿ ಪಾಸ್ ಮಾಡಲು ಸಾಧ್ಯವಾಗದೆ ಇರುವ ಹಳೆಯ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯಪಡಿಸಲಾಗಿದೆ. 2023 ಏಪ್ರಿಲ್ 1ರಿಂದ ಇದು ಜಾರಿಗೆ ಬರಲಿದ್ದು, 15 ವರ್ಷಗಳಷ್ಟು ವಯಸ್ಸಾದ ಎಲ್ಲಾ ಸರ್ಕಾರಿ ವಾಹನಗಳನ್ನು 2023 ಏಪ್ರಿಲ್ 1ರಿಂದ ಸಂಪೂರ್ಣವಾಗಿ ಹಿಂಪಡೆದು ಗುಜರಿಗೆ ಹಾಕಲಾಗಲಿದ್ದು ಜೊತೆಗೆ ಬೇರೆ ವಾಹನಗಳನ್ನು ಫಿಟ್ನೆಸ್ ಟೆಸ್ಟ್ಗೆ ಒಳಪಡಿಸಲಾಗುತ್ತದೆ.

15 ವರ್ಷಕ್ಕಿಂತ ಹೆಚ್ಚು ಹಳೆಯದಾದ ಕಮರ್ಷಿಯಲ್ ವಾಹನಗಳು ಫಿಟ್ನೆಸ್ ಟೆಸ್ಟ್ನಲ್ಲಿ ತೇರ್ಗಡೆಯಾದರೆ ಮಾತ್ರ ರಸ್ತೆಗಳಲ್ಲಿ ಓಡಿಸಲು ಅನುಮತಿ ನೀಡಲಾಗುತ್ತದೆ. ಒಂದು ವೇಳೆ ವಾಹನ ಪರೀಕ್ಷೆಯಲ್ಲಿ ವಿಫಲವಾದರೆ ಆ ವಾಹನಗಳನ್ನು ಗುಜರಿಗೆ ಹಾಕುವುದು ಅನಿವಾರ್ಯವಾಗಿದ್ದು, ಟ್ರಕ್ನಂತಹ ಹೆವಿ ಕಮರ್ಷಿಯಲ್ ವಾಹನಗಳ ಫಿಟ್ನೆಸ್ ಪರೀಕ್ಷೆಗಳು ಏಪ್ರಿಲ್ 1ರಿಂದಲೇ ನಡೆಯಲಿದೆ.

ಇತರ ಖಾಸಗಿ ವಾಹನಗಳು 20 ವರ್ಷಕ್ಕಿಂತ ಹೆಚ್ಚು ಹಳೆಯದಾಗಿದ್ದರೆ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಟ್ಯಾಕ್ಸಿ ಇತ್ಯಾದಿ ಕಮರ್ಷಿಯಲ್ ವಾಹನಗಳು ಮತ್ತು ಇತರ ಖಾಸಗಿ ವಾಹನಗಳ ಫಿಟ್ನೆಸ್ ಟೆಸ್ಟ್ 2024 ಜೂನ್ 1ರಿಂದ ನಡೆಯುತ್ತದೆ.

ವಾಹನ ಗುಜರಿ ನೀತಿಯಿಂದ ಏನು ಲಾಭ?

ಹಳೆಯ ವಾಹನಗಳಿಂದ ಮಾಲಿನ್ಯ ಹೊರಹೊಮ್ಮುವುದು ಹೆಚ್ಚಾಗಿದ್ದು, ಹೀಗಾಗಿ ಇವುಗಳು ರಸ್ತೆಗಿಳಿಯುವುದು ನಿಂತರೆ ಪರಿಸರ ಮಾಲಿನ್ಯ ಸ್ವಲ್ಪ ತಗ್ಗುತ್ತದೆ.

ಹಳೆಯ ವಾಹನಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದೇ ಇದ್ದಲ್ಲಿ, ಅಪಘಾತ ಆಗುವ ಸಂಭವ ಹೆಚ್ಚು ಇದ್ದು, ಇದರ ಹೊರತಾಗಿ, ಹೊಸ ವಾಹನಗಳಲ್ಲಿ ಸುರಕ್ಷತೆಯ ಅಂಶಗಳನ್ನು ಕೇಂದ್ರೀಕರಿಸಲಾಗಿರುತ್ತದೆ. ಹೀಗಾಗಿ, ರಸ್ತೆಯಲ್ಲಿ ವಾಹನ ನಿಯಂತ್ರಣ ಸುಲಭವಾಗಲಿದ್ದು, ಅಷ್ಟೆ ಅಲ್ಲದೆ, ಇದರಿಂದ ಅಪಘಾತ ಸಾಧ್ಯತೆ ಕಡಿಮೆ ಆಗುವ ನಿರೀಕ್ಷೆಯಿದೆ.

ಹಳೆಯ ವಾಹನ ಗುಜರಿಗೆ ಸೇರಿದರೆ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದ್ದು, ಇದರ ಪರಿಣಾಮದಿಂದ ಆಟೊಮೊಬೈಲ್ ಕ್ಷೇತ್ರವನ್ನು ಉತ್ತೇಜನಗೊಳಿಸಿದಂತೆ ಆಗುತ್ತದೆ.

ಮುಂದಿನ ವರ್ಷದಿಂದ ಫಿಟ್ನೆಸ್ ಟೆಸ್ಟ್ಗಳನ್ನು ಆಟೊಮೇಟೆಡ್ ಟೆಸ್ಟಿಂಗ್ ಸ್ಟೇಷನ್ಗಳಲ್ಲಿ (ಎಟಿಎಸ್) ಮಾಡಬೇಕಾಗಿದ್ದು, ಹೀಗಾಗಿ, ದೇಶಾದ್ಯಂತ ಹೆಚ್ಚಿನ ಕಡೆಗಳಲ್ಲಿ ಈ ರೀತಿಯ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಹಾಗಾಗಿ, ಇದನ್ನು ನಿರ್ವಹಿಸಲು ಸಿಬ್ಬಂದಿಯ ಅಗತ್ಯವಿದ್ದು , ಅನೇಕ ಮಂದಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಹಳೆಯ ವಾಹನಗಳು ಗುಜರಿಗೆ ಸೇರ್ಪಡೆಯಾಗುವುದರಿಂದ ಉಕ್ಕಿನ ಉದ್ಯಮಕ್ಕೆ ಗುಜರಿ ವಸ್ತುಗಳು ಹೆಚ್ಚು ದೊರೆಯಲಿವೆ, ಅದರಲ್ಲೂ ವಿಶೇಷವಾಗಿ, ಕಡಿಮೆ ಬೆಲೆಗೆ ಕಚ್ಛಾ ವಸ್ತುಗಳು ದೊರೆಯುವುದರಿಂದ ಉಕ್ಕು ತಯಾರಕ ಸಂಸ್ಥೆಗಳಿಗೆ ಪ್ರಯೋಜನವಾಗಲಿದೆ. ಇದನ್ನು ಮರು ಬಳಕೆ ಮಾಡಲು ಕಟ್ಟಡ ನಿರ್ಮಾಣ ಇತ್ಯಾದಿ ಸಂಬಂಧಿತ ಕ್ಷೇತ್ರದಲ್ಲಿ ಬಳಸಬಹುದು.

ಹಳೆಯ ವಾಹನಗಳ ಮಾಲೀಕರು ನಿಯಮದ ಅನುಸಾರ ಇಲ್ಲವೇ ಹಳೆಯ ಗಾಡಿ ಕೊಟ್ಟು ಹೊಸ ವಾಹನ ಖರೀದಿಗೆ ಮುಂದಾಗುವುದರಿಂದ ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳಿಗೆ ಇನ್ಮುಂದೆ 15 ವರ್ಷ ಮಾತ್ರ ಬಳಕೆ ಮಾಡಲು ಸಾಧ್ಯವಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಲಕ್ಷ್ಯ ವಹಿಸಬಹುದು ಎಂಬುದು ಸರ್ಕಾರ ದ ಲೆಕ್ಕಾಚಾರವಾಗಿದ್ದು, ಅಲ್ಲದೆ, ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಉತ್ತೇಜನ ಕೂಡ ದೊರೆತಂತೆ ಆಗುತ್ತದೆ. ಇದೆಲ್ಲದರ ಹೊರತಾಗಿ, ಹೊಸ ವಾಹನಗಳನ್ನು ಕೊಂಡು ಕೊಳ್ಳಲು ಆಗದೇ ಇದ್ದಾಗ, ಸಾರ್ವಜನಿಕ ಸಾರಿಗೆ ಬಳಸುತ್ತಾರೆ. ಇದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚು ಸೌಕರ್ಯ ಬಳಕೆಗೆ ಉತ್ತೇಜನ ದೊರೆಯುತ್ತದೆ.

ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ಪ್ರತಿ ವಿಚಾರದಲ್ಲಿಯೂ ಅನುಕೂಲ ಹಾಗೂ ಅನಾನುಕೂಲ ಇರುವುದು ಸಹಜ.

ಈ ನೀತಿ ಜಾರಿಗೆ ಬಂದರೆ ಆಗುವ ತೊಂದರೆ?

ಕೆಲವರು ಹೊಸ ವಾಹನ ಖರೀದಿಸಲಾಗದೇ ಇದ್ದ ಸಂದರ್ಭ, ತಮ್ಮ 15 ವರ್ಷದ ಹಳೆಯ ವಾಹನವನ್ನು ಬಳಸುತ್ತಾರೆ. ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದವರಿಗೆ ವಾಹನ ಗುಜರಿಗೆ ಹಾಕಿದರೆ ಹೊಸ ವಾಹನ ಕೊಂಡುಕೊಳ್ಳಲು ಸಾಧ್ಯವಾಗದೆ ತೊಂದರೆ ಉಂಟಾಗಬಹುದು.

15 ವರ್ಷಗಳಿಂತ ಹಳೆಯದಾದ ವಾಹನಗಳ ನೊಂದಣಿ ನವೀಕರಣವಂತೂ ಬಹಳ ದುಬಾರಿಯಾಗಲಿದ್ದು, ನಾಲ್ಕು ಚಕ್ರ ವಾಹನಗಳ ಆರ್ಸಿ ರಿನಿವಲ್ಗೆ 7,500 ರೂನಿಂದ 12,500 ರೂವರೆಗೆ ಶುಲ್ಕ ಪಾವತಿಸಬೇಕಾಗಿದ್ದು, ಜನರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.

ಒಂದು ವೇಳೆ, ಫಿಟ್ನೆಸ್ ಟೆಸ್ಟ್ ಮಾಡಿಸಿ ವಾಹನ ಇಟ್ಟುಕೊಳ್ಳುತ್ತೇವೆ ಎಂದು ಕೊಂಡರು ಕೂಡ ಕ್ಷಮತಾ ಪರೀಕ್ಷೆಗೆ 600 ರೂಪಾಯಿ ಇದ್ದ ದರ ಈಗ 1000-1500 ರೂಗೆ ಏರಿಕೆಯಾಗಲಿದೆ.15 ವರ್ಷದ ಹಳೆಯ ವಾಹನಕ್ಕೆ ಎಫ್ಸಿ ಮಾಡಿಸಿ ಮುಂದುವರಿಸುತ್ತೇವೆ ಎಂದರೂ ಕೂಡ ದುಬಾರಿ ದರದಿಂದಾಗಿ ಮಾಲೀಕರು ಈ ವಾಹನವನ್ನು ಗುಜರಿಗೆ ಹಾಕಬೇಕಾದ ಅನಿವಾರ್ಯತೆ ಎದುರಾಗಲಿದೆ.

Leave A Reply

Your email address will not be published.