ಬಾಡಿಗೆದಾರರ ಮಾಹಿತಿಯನ್ನು ತಿಂಗಳೊಳಗೆ ನೀಡಲು ಮನೆ ಮಾಲೀಕರಿಗೆ ಸೂಚನೆ – ಪೊಲೀಸ್‌ ಇಲಾಖೆ

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸ್ಫೋಟದ ಹಿನ್ನೆಲೆ ಶಂಕಿತ ಉಗ್ರ ಮೈಸೂರಿನಲ್ಲಿ ವಾಸವಿದ್ದ ಎಂಬ ಮಾಹಿತಿಯ ಬೆನ್ನಲ್ಲೆ ಇದೀಗ ಮೈಸೂರು ನಗರ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಸೂಚನೆಯನ್ನು ಹೊರಡಿಸಲಾಗಿದೆ. ಅಂತೆಯೇ ಮಾಲಿಕರು ಮನೆ, ರೂಂ ಬಾಡಿಗೆ ಸೇರಿದಂತೆ ಬಾಡಿಗೆಗಳನ್ನು ನೀಡುವ ಮುನ್ನ ಬಾಡಿಗೆದಾರರ ಪೂರ್ಣ ಮಾಹಿತಿ ಸಂಗ್ರಹಿಸಿ ಪೊಲೀಸರಿಗೆ ನೀಡಬೇಕು ಎಂಬ ಸೂಚನೆಯನ್ನು ಮೈಸೂರು ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ತಿಳಿಸಿದ್ದಾರೆ.

 

ಇನ್ನೂ ಸುರಕ್ಷಾ ಹೆಸರಿನಲ್ಲಿ ಎರಡು ಮಾದರಿಯ ಅರ್ಜಿಗಳನ್ನು ನಗರ ಪೊಲೀಸ್‌ ಇಲಾಖೆ ಬಿಡುಗಡೆ ಮಾಡಿದೆ. ಅರ್ಜಿಯಲ್ಲಿ ಇರುವ ವಿವರಗಳ ಜೊತೆಗೆ ಅಗತ್ಯ ದಾಖಲೆಗಳನ್ನು ನೀಡಬೇಕು. ಈ ದಾಖಲೆಗಳನ್ನು ಪೋಲೀಸರು ಪರಿಶೀಲಿಸುತ್ತಾರೆ. ಇದಕ್ಕೆ ನಗರ ಪಾಲಿಕೆ ಅಧಿಕಾರಿಗಳ ಸಹಕಾರವನ್ನು ಕೂಡ ಕೇಳಿದ್ದೇವೆ. ಒಂದು ವೇಳೆ ಮಾಹಿತಿಯನ್ನು ನೀಡದೆ ಉದಾಸೀನತೆ ತೋರಿದರೆ, ಮುಂದೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆಬಾಡಿಗೆ ನೀಡುವ ಮಾಲೀಕರೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು. ಜೊತೆಗೆ ”ಬಾಡಿಗೆದಾರರು ನಕಲಿ ದಾಖಲೆಗಳನ್ನು ನೀಡುತ್ತಿದ್ದಾರೆ ಎಂಬ ಅನುಮಾನವಿದ್ದರೆ ಆಯಾ ವ್ಯಾಪ್ತಿ ಠಾಣೆ ಪೊಲೀಸರಿಗೆ ತಿಳಿಸಿ ಅನುಮಾನ ಪರಿಹರಿಸಿಕೊಳ್ಳಿ” ಎಂದು ಕೂಡ ಮನವಿ ಮಾಡಿದರು.

ಹಾಗೇ ಇನ್ನೊಂದು ತಿಂಗಳಲ್ಲಿ ಮನೆ ಮಾಲೀಕರು, ಬಾಡಿಗೆದಾರರ ಸಂಪೂರ್ಣ ವಿವರವನ್ನು ಪೊಲೀಸರಿಗೆ ನೀಡಬೇಕು. ಇನ್ನೂ ನೀಡುವ ಅರ್ಜಿಯಲ್ಲಿ ಮನೆ ಮಾಲೀಕರ ಹೆಸರು, ಉದ್ಯೋಗ, ವಿಳಾಸ ಮತ್ತು ಮೊಬೈಲ್‌ ನಂಬರ್‌ನೊಂದಿಗೆ ಬಾಡಿಗೆ ಪಡೆಯುವ ಬಾಡಿಗೆದಾರನ ಮಾಹಿತಿಯನ್ನು ಕೂಡ ಅಗತ್ಯವಾಗಿ ನೀಡಬೇಕು. ಹಾಗೇ ಬಾಡಿಗೆದಾರ ನೀಡಬೇಕಾದ ಮಾಹಿತಿ ಯಾವುದೆಲ್ಲಾ ಎಂದರೆ, ಬಾಡಿಗೆದಾರನ ಸ್ವಂತ ವಿಳಾಸ, ಪೊಲೀಸ್‌ ಠಾಣೆ, ಈ ಹಿಂದೆ ಬಾಡಿಗೆಗೆ ಇದ್ದ ಮನೆ ವಿಳಾಸ, ಬಾಡಿಗೆದಾರರ ಗುರುತಿನ ಚೀಟಿಗಳಲ್ಲಿ ಪಾಸ್‌ ಪೋರ್ಟ್‌, ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಡಿಎಲ್‌ ಅಥವಾ ಪಡಿತರ ಚೀಟಿ ಇವುಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ತಿಳಿಸಿದರು. ಆ ವೇಳೆ ಡಿಸಿಪಿಗಳಾದ ಪ್ರದೀಪ್‌ ಗುಂಟಿ, ಎಂ.ಎಸ್‌.ಗೀತ ಪ್ರಸನ್ನ ಅವರು ಕೂಡ ಇದ್ದರು.

ಅಷ್ಟೇ ಅಲ್ಲದೆ, ಹೋಟೆಲ್, ಲಾಡ್ಜ್‌, ಹೋಂ ಸ್ಟೇಗಳಲ್ಲಿ ಸರಿಯಾದ ದಾಖಲೆ ಕೊಡದಿದ್ದ ವ್ಯಕ್ತಿಗಳಿಗೆ ರೂಮ್‌ಗಳನ್ನು ನೀಡುವಂತಿಲ್ಲ. ನಮ್ಮ ಸಿಬ್ಬಂದಿ ಪ್ರತಿದಿನ ಪರಿಶೀಲನೆ ಮಾಡುತ್ತಾರೆ. ಒಂದು ವೇಳೆ ಬಾಡಿಗೆದಾರರ ಬಳಿ ದಾಖಲೆ ಇಲ್ಲದೇ ಅವರಿಗೆ ಉಳಿದುಕೊಳ್ಳಲು ಅವಕಾಶ ನೀಡಿದ್ದು, ನಮ್ಮ ಗಮನಕ್ಕೆ ಬಂದರೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಹಾಗೇ ರೂಮ್ ಬಾಡಿಗೆ ಪಡೆಯಲು ಬರುವವರು ನೀಡುವ ದಾಖಲೆಯ ಬಗ್ಗೆ ಮಾಲಿಕರಿಗೆ, ಸಿಬ್ಬಂದಿಗಳಿಗೆ ಏನಾದರೂ ಅನುಮಾನ ಬಂದರೆ ಪೊಲೀಸರ ಗಮನಕ್ಕೆ ತಂದು ಅನುಮಾನ ಬಗೆಹರಿಸಿಕೊಳ್ಳಬಹುದು.

ಇನ್ನೂ ಮೈಸೂರು ನಗರಕ್ಕೆ ಪ್ರವೇಶಿಸುವ 9 ಪಾಯಿಂಟ್‌ಗಳಲ್ಲಿ ನಗರಕ್ಕೆ ಆಗಮಿಸುವ ಹಾಗೂ ನಗರದಿಂದ ಹಿಂದಿರುಗುವವರ ಬಗ್ಗೆ ನಮ್ಮ ಸಿಬ್ಬಂದಿ ಪರಿಶೀಲಿಸಿ, ವಿಳಾಸ ನಮೂದಿಸಿಕೊಳ್ಳಲಿದ್ದಾರೆ. ಹಾಗೇ ನಗರದೊಳಗೆ 23 ಪಾಯಿಂಟ್‌ಗಳನ್ನು ಮಾಡಲಾಗಿದೆ. ಅನುಮಾನಾಸ್ಪದವಾಗಿ ಕಂಡು ಬಂದವರನ್ನು ಪರಿಶೀಲನೆ ನಡೆಸಲಾಗುತ್ತದೆ. ನಗರ ಪಾಲಿಕೆಯಿಂದ ರಾತ್ರಿ 11ರ ನಂತರ ಕೂಡ ತೆರೆದಿರಲು ಅವಕಾಶವಿರುವ ಅಂಗಡಿಗಳನ್ನು ಬಿಟ್ಟು, ಉಳಿದ ಎಲ್ಲಾ ಅಂಗಡಿಗಳನ್ನು ರಾತ್ರಿ 11ರ ವೇಳೆಗೆ ಮುಚ್ಚಬೇಕು ಎಂದುಪೊಲೀಸ್‌ ಆಯುಕ್ತರು ತಿಳಿಸಿದರು.

Leave A Reply

Your email address will not be published.