Kantara : ನಾಳೆ ( ನವೆಂಬರ್ 24) ರಂದು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಕಾಂತಾರ !
ಎಲ್ಲೆಡೆ ಸಂಚಲನ ಮೂಡಿಸಿದ್ದ ಕನ್ನಡದ ಹಿಟ್ ಸಿನಿಮಾ ಕಾಂತಾರ ಓಟಿಟಿಯಲ್ಲಿ ಯಾವಾಗ ಬರುತ್ತೆ ಎಂದು ಕಾತುರದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಸಿಹಿ ಔತಣದ ಸುದ್ದಿ. ಅಮೆಜಾನ್ ಪ್ರೈಮ್ನಲ್ಲಿ ಸಿನಿಮಾ ನೋಡಬಹುದಾದ ಭಾಗ್ಯ ಎಲ್ಲರಿಗೂ ಲಭ್ಯವಾಗಲಿದೆ. ಹೌದು, 4 ಭಾಷೆಯಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಕಾಂತಾರ ನಾಳೆ ಅಂದರೆ (24 ನವೆಂಬರ್ ) ಒಟಿಟಿಯಲ್ಲಿ ಪ್ರಸಾರವಾಗಲಿದೆ.
ಕಾಂತಾರ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರ ದೇಶದಲ್ಲಿ ಸಹ ಕರಾವಳಿಯ ಕಲೆಯನ್ನು ಬಿಂಬಿಸಿ , ದೈವಿಕ ಶಕ್ತಿ, ಆಚರಣೆಯ ಬಗ್ಗೆ ನಂಬಿಕೆಯನ್ನು ಎಲ್ಲೆಡೆ ಪಸರಿಸಿದೆ. ಅಷ್ಟು ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲಿಯೂ ದೊಡ್ಡ ಮಟ್ಟದ ಕಮಾಯಿ ಮಾಡಿ ಅಲ್ಲು ಅರ್ಜುನ್ ಅವರ ಪುಷ್ಪ ದಿ ರೈಸ್, ಯಶ್ ಅವರ ಕೆಜಿಎಫ್ 2 ಮತ್ತು ಇತರ ಬ್ಲಾಕ್ಬಸ್ಟರ್ ಹಿಟ್ಗಳ ದಾಖಲೆಗಳನ್ನು ಕೂಡ ಪುಡಿ ಮಾಡಿದ್ದು ಗೊತ್ತಿರುವ ವಿಚಾರವೇ!!.
ಈ ಚಿತ್ರವನ್ನು 14ರಿಂದ 16 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಿಸಲಾಗಿದ್ದು, ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಗಳಿಸಿದ ಹಣ ಒಟ್ಟು 400 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಈಗ ಎಲ್ಲರ ಚಿತ್ತ ಇರುವುದು ಒಟಿಟಿ ರಿಲೀಸ್ ಬಗ್ಗೆ ಮಾತ್ರ. ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದ್ದು, ಕಾಂತಾರ ನವೆಂಬರ್ 24, 2022 ರಂದು ಪ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಬಹುಶಃ ನವೆಂಬರ 23ರ ಮಧ್ಯರಾತ್ರಿಯಿಂದಲೇ ಪ್ರಸಾರ ಆರಂಭವಾಗುವ ಸಾಧ್ಯತೆ ಇದೆ.
ಆಕ್ಷನ್ ಹಾಗೂ ಸಾಹಸಮಯವಾದ ʼಕಾಂತಾರʼ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿದ್ದು, ರಿಷಬ್ ಶೆಟ್ಟಿ ಅವರ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಸಪ್ತಮಿ ಗೌಡ, ರಘು ಪಾಂಡೇಶ್ವರ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕ ಜನಪ್ರಿಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡದ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ಕಾಂತಾರʼ ಚಿತ್ರವನ್ನು ಜಗತ್ತಿನಾದ್ಯಂತ ಡಿಜಿಟಲ್ ಪ್ರೀಮಿಯರ್ ಮೂಲಕ ಬಿಡುಗಡೆಗೊಳಿಸುವುದಾಗಿ ಪ್ರೈಂ ವಿಡಿಯೊ ತಿಳಿಸಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣದ ಈ ಚಿತ್ರದ ಕಥೆ ರಚನೆ ಹಾಗೂ ನಿರ್ದೇಶನವನ್ನು ರಿಷಬ್ ಶೆಟ್ಟಿ ಮಾಡಿದ್ದಾರೆ. ಸಪ್ತಮಿ ಗೌಡ, ರಘು ಪಾಂಡೇಶ್ವರ, ಅಚ್ಯುತ್ ಕುಮಾರ್ ಮುಂತಾದ ಪ್ರಮುಖರು ಚಿತ್ರದಲ್ಲಿ ಅಭಿನಯಿಸಿದ್ದು ರಿಷಬ್ ಶೆಟ್ಟಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಎಲ್ಲ ಚಿತ್ರಮಂದಿರಗಳಲ್ಲಿ ಗೆದ್ದು ಜನರ ಮನ ಗೆದ್ದಿರುವ ಕಾಂತಾರ ಚಿತ್ರವನ್ನು ಇದೀಗ ನವೆಂಬರ್ 24ರಿಂದ ಮನೆಯಲ್ಲೇ ಕುಳಿತು ವೀಕ್ಷಿಸಬಹುದಾಗಿದೆ. ಭಾರತ ಸೇರಿದಂತೆ 240 ದೇಶ, ಪ್ರಾಂತ್ಯಗಳಲ್ಲಿನ ಪ್ರೈಂ ಸದಸ್ಯರು ಚಿತ್ರವನ್ನು ಆನ್ಲೈನ್ನಲ್ಲಿ ವೀಕ್ಷಿಸಬಹುದಾಗಿದ್ದು,ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಚಿತ್ರವನ್ನು ನೋಡಬಹುದಾಗಿದೆ.
ದಕ್ಷಿಣ ಕನ್ನಡದ ಅದರಲ್ಲೂ ಕೂಡ ತುಳುನಾಡಿನ ಕಾಡುಬೆಟ್ಟು ಕಾಡಿನಲ್ಲಿ ವಾಸಿಸುವ ಸಮುದಾಯವೊಂದರ ಸುತ್ತ ಕಥೆಯನ್ನು ಹೆಣೆದು ಕಣ್ಣಿಗೆ ಕಟ್ಟುವಂತೆ ಬಿಂಬಿಸಲಾಗಿದೆ. ಕಾಲ ಬದಲಾದರು ಕೂಡ ಎಂದಿಗೂ ಮುಗಿಯದ ಹಣದ ಮೇಲಿನ ವ್ಯಾಮೋಹ ಜೊತೆಗೆ ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ಚಿತ್ರದಲ್ಲಿ ತೋರಿಸಲಾಗಿದೆ .
ಡಿಜಿಟಲ್ ವೇದಿಕೆಯಲ್ಲಿ ಕಾಂತಾರವನ್ನು ಬಿಡುಗಡೆ ಮಾಡುತ್ತಿರುವ ಕುರಿತು ಮಾತನಾಡಿರುವ ನಿರ್ದೇಶಕ ಹಾಗೂ ನಟರಾಗಿರವ ರಿಷಬ್ ಶೆಟ್ಟಿ, “ದೇಶದ ಮೂಲೆಮೂಲೆಗಳಲ್ಲಿನ ಸಿನಿಮಾ ಪ್ರಿಯರು ಕಾಂತಾರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ತನಗೆ ತುಂಬಾ ಖುಷಿ ಇದ್ದು, ಇದರಬ್ ಜೊತೆಗೆ ಈ ಚಿತ್ರ ಪ್ರೈಂ ವೀಡಿಯೊ ಮೂಲಕ ಜಾಗತಿಕವಾಗಿ ಡಿಜಿಟಲ್ ಪ್ರೀಮಿಯರ್ನಲ್ಲಿ ಬಿಡುಗಡೆಗೊಳ್ಳುತ್ತಿದೆ. ಕಾಂತಾರ ಸಿನಿಮಾ ದ ಮೇಲೆ ಚಿತ್ರತಂಡಕ್ಕಿರುವ ಆಸಕ್ತಿಯ ಜೊತೆಗೆ ಪರಿಶ್ರಮಕ್ಕೆ ಸಾಕ್ಷಿಯಾಗಿ ಈ ಕಥೆಯನ್ನು ವಿಶ್ವಮಟ್ಟದಲ್ಲಿ ಇನ್ನಷ್ಟು ಜನರಿಗೆ ತಲುಪುವ ವೇದಿಕೆ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಡಿಸಿದ್ದಾರೆ.
ಇದು ಸಾರ್ವತ್ರಿಕವಾಗಿ ಆಕರ್ಷಣೆ ಹೊಂದಿದ ಕಥೆಯಾಗಿದ್ದು, ಕಥಾವಸ್ತುವಿನಲ್ಲಿ ಸ್ಥಳೀಯ ತುಳುನಾಡಿನ ಸಂಸ್ಕೃತಿಯ ಬಿಂಬದ ಜೊತೆಗೆ ಚಿತ್ರದ ಕೊನೆಯ ಕ್ಷಣದವರೆಗೂ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸುತ್ತಲೇ ಇದೆ ಎಂದಿದ್ದಾರೆ.
ಚಿತ್ರದ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಕೂಡ ಅಭಿಪ್ರಾಯ ಬಿಚ್ಚಿಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಮುಖಾಂತರ ನಾವು ಯಾವಾಗಲೂ ಆಕರ್ಷಕವಾದ ಕಥೆಗಳನ್ನು ಅಸಾಮಾನ್ಯ ರೀತಿಯಲ್ಲಿ ಪ್ರಸ್ತುತ ಪಡಿಸುವುದಕ್ಕೆ ಇಷ್ಟಪಡುತ್ತೇವೆ. ಕಾಂತಾರ ಸಿನಿಮಾ ಕೂಡ ಇದೆ ರೀತಿಯ ಒಂದು ಪ್ರಯತ್ನವಾಗಿದ್ದು, ಚಿತ್ರವು ವಿವಿಧ ಹಿನ್ನೆಲೆ ಹಾಗೂ ಪ್ರದೇಶಗಳಿಂದ ಬಂದ ಪ್ರೇಕ್ಷಕರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ರಿಷಬ್ ಹಾಗೂ ಇಡೀ ಚಿತ್ರತಂಡ ಇಂಥದ್ದೊಂದು ಅತ್ಯದ್ಭುತ ಚಿತ್ರವನ್ನು ನಿರ್ಮಿಸಲು ಸಾಕಷ್ಟು ಪರಿಶ್ರಮ ಪಟ್ಟಿದ್ದು, ಈಗ ಇಂಥ ಅದ್ಭುತವಾದ ಚಿತ್ರವನ್ನು ಪ್ರೈಂ ವಿಡಿಯೊ ಮುಖಾಂತರ ಜಗತ್ತಿನಾದ್ಯಂತ ಇರುವ ಪ್ರೇಕ್ಷಕರನ್ನು ತಲುಪಲು ಉತ್ಸುಕರಾಗಿದ್ದೇವೆ “ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.