ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ : ಪೊಲೀಸರ ತಂಡ ಮಹತ್ವದ ಪ್ರಗತಿ- ಎಡಿಜಿಪಿ
ಮಂಗಳೂರು: ಇಲ್ಲಿನ ನಾಗುರಿ ಬಳಿ ಕಳೆದ ಶನಿವಾರ ಸಂಜೆ ನಡೆದ ಆಟೋ ರಿಕ್ಷಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರ ತಂಡ ಮಹತ್ವದ ಪ್ರಗತಿ ಸಾಧಿಸಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ಶಂಕಿತ ಶಾರೀಕ್ ನನ್ನು ಆತನ ಮನೆಯವರು ಗುರುತು ಪತ್ತೆ ಮಾಡಿದ್ದಾರೆ. ತೀರ್ಥಹಳ್ಳಿಯಿಂದ ಬಂದಿದ್ದ ಮೂವರು ಸಂಬಂಧಿಕರು ಆತನ ಗುರುತು ಪತ್ತೆ ಮಾಡಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಮಂಗಳೂರು ನಗರ ಕಮೀಷನರ್ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಶಾರಿಕ್ ಸಹಿತ ಮೂವರು ಪೊಲೀಸರ ವಶದಲ್ಲಿದ್ದಾರೆ. ಇಬ್ಬರನ್ನು ಮೈಸೂರಿನಿಂದ ಓರ್ವನನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ. ಓರ್ವನನ್ನು ಊಟಿಯಿಂದ ಕರೆದುಕೊಂಡು ಬರಲಾಗುತ್ತಿದೆ. ಸ್ಪೋಟದ ಒಂದು ವಾರದ ಹಿಂದೆಯೆ ಶಾರಿಕ್ ಮಂಗಳೂರಿಗೆ ಬಂದು ವಾಪಸಾಗಿದ್ದ ಎಂದಿದ್ದಾರೆ.
ನಾಗುರಿ ಘಟನೆಗೆ ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಯ ಪ್ರಭಾವವಿದೆ. ಅವರ ಜೊತೆ ಅರಾಫತ್ ಅಲಿ ಎಂಬಾತನಿದ್ದ. ಅಲ್ಲದೆ ಅಬ್ದುಲ್ ತಾಹಾ ಎಂಬಾತ ಉಗ್ರನಿದ್ದ ಎಂದು ಎಡಿಜಿಪಿ ಮಾಹಿತಿ ನೀಡಿದರು.
ಆತನಿಂದ ವಶಪಡಿಸಿಕೊಂಡ ಮೊಬೈಲ್ ಮತ್ತು ಕುಟುಂಬದವರು ಗುರುತಿಸಿರುವ ಕಾರಣದಿಂದ ಆರೋಪಿ ಮೊಹಮ್ಮದ್ ಶಾರೀಕ್ (24 ವ) ಎಂದು ತಿಳಿದು ಬಂದಿದೆ. ಈತನ ಮೇಲೆ ಮಂಗಳೂರು ಪೂರ್ವ ಮತ್ತು ಉತ್ತರ ಠಾಣೆ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.
2020ರ ನವೆಂಬರ್ 27ರಂದು ಮಂಗಳೂರು ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಮತ್ತು 28ರಂದು ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿ ಪ್ರಚೋದನಕಾರಿ ಗೋಡೆ ಬರಹ ಬರೆದ ಪ್ರಕರಣದಲ್ಲಿ ಬಂಧನವಾಗಿದ್ದ. ಈತನ ಜತೆ ಮಾಜ್ ಮುನೀರ್ ಎಂಬಾತನೂ ಸಿಕ್ಕಿ ಬಿದ್ದಿದ್ದ. ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ಈ ವರ್ಷದ ಅಗಸ್ಟ್ 15ರಂದು ಶಿವಮೊಗ್ಗ ಗಲಾಟೆ ಸಂಧರ್ಭದಲ್ಲಿ ಶಿವಮೊಗ್ಗ ದಲ್ಲಿ ಜಬೀವುಲ್ಲಾ ಎಂಬಾತನನ್ನು ದಸ್ತಗಿರಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಶಾರೀಕ್ ಅಲರ್ಟ್ ಆಗಿ ಊರು ಬಿಟ್ಟು ಹೋಗಿದ್ದ. ಕೊಯಂಬತ್ತೂರು, ಕೇರಳ, ಮೈಸೂರು ಗೆ ಹೋಗಿದ್ದ. ಆತ ಮೈಸೂರಿನ ಬಾಡಿಗೆ ಮನೆಯಲ್ಲಿದ್ದ. ನವೆಂಬರ್ 19ರಂದು ಮೈಸೂರಿನಿಂದ ಹೊರಟು ಹುಣಸೂರು ಮಡಿಕೇರಿ ಮೂಲಕ ಮಂಗಳೂರಿಗೆ ಬಂದು ಆಟೋದಲ್ಲಿ ಪಂಪ್ ವೆಲ್ ಕಡೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.
ಶಾರೀಕ್ ನು ತಾನಿದ್ದ ಬಾಡಿಗೆ ಮನೆಯಿಂದ ಸಲ್ಪೆಕ್ಸ್ ಸಲ್ಫರ್ ಪೌಡರ್, ನಟ್ ಬೋಲ್ಟ್ ಗಳು, ಸರ್ಕ್ಯುಟ್ ಗಳು, ಮಲ್ಟಿಫಂಕ್ಷನ್ ಡಿಲೆ ಟೈಮರ್, ಗ್ರೈಂಡರ್ ಮಿಕ್ಸರ್, ಮ್ಯಾಚ್ ಬಾಕ್ಸ್, ಬ್ಯಾಟರಿ, ಟೈಮರ್, ಆಧಾರ್, ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಕೊಯಮತ್ತೂರು ಸ್ಪೋಟಕ್ಕೆ ನಂಟು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಇತ್ತೀಚೆಗೆ ನಡೆದ ಸ್ಪೋಟಕ್ಕೂ ಶಾರೀಕ್ ಗೂ ನಂಟಿರುವ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರ ತಂಡ ಮಂಗಳೂರಿಗೆ ಬಂದಿದೆ ಎಂದರು.