ಧರ್ಮಗಳ ಬಗ್ಗೆ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು, ಯಾವುದೇ ಧರ್ಮ ಕೆಟ್ಟದ್ದಲ್ಲ. ಭಗವಾನ್ ಶ್ರೀರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ದೇವರೇ. ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಎಚ್ಚರಿಕೆಯನ್ನು ವಹಿಸಿ. ನಮ್ಮ ದೇಶವನ್ನು ಬಲಿಷ್ಠಗೊಳಿಸಲು ನಾವು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.
ಚುನಾವಣೆ ರ್ಯಾಲಿಯೊಂದರಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಿಮ್ಮ ಬಳಿ ಬಂದು ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಾರೆ. ಭಾರತದಲ್ಲಿ ಶೇ.70 ರಿಂದ 80 ರಷ್ಟು ಹಿಂದೂ ಜನಸಂಖ್ಯೆ ಇದೆ. ಅವರು ಅಪಾಯದಲ್ಲಿದ್ದಾರೆ ಎಂದು ನೀವು ನಂಬುತ್ತೀರಾ ಎಂದು ಪ್ರಶ್ನಿಸಿದರು.
ಯಾವುದೇ ಧರ್ಮ ಕೆಟ್ಟದ್ದಲ್ಲ. ಆದರೆ ಭ್ರಷ್ಟರಾಗಿರುವುದು ಮನುಷ್ಯರು, ಧರ್ಮವಲ್ಲ. ಚುನಾವಣೆಯ ಸಮಯದಲ್ಲಿ ‘ಹಿಂದೂ ಖತ್ರೇ ಮೈ ಹೈ’ ಅನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ವಿಚಾರಗಳಿಗೆ ಬಲಿಯಾಗಬೇಡಿ ಎಂದು ನಾನು ನಿಮ್ಮಲ್ಲಿ ವಿನಂತಿಸುತ್ತೇನೆ ಎಂದು ಹೇಳಿದರು.
ಕಾಶ್ಮೀರ ಕಣಿವೆಯಲ್ಲಿ ಮುಸ್ಲಿಂ ಶಾಲಾ ಮಕ್ಕಳನ್ನು “ರಘುಪತಿ ರಾಘವ ರಾಜಾ ರಾಮ್” ಎಂಬ ಹಿಂದೂ ಶ್ಲೋಕವನ್ನು ಹಾಡುವಂತೆ ಮಾಡಲಾಗಿದೆ. ಈ ರೀತಿಯಾಗಿ ಬಿಜೆಪಿ ಶಾಲೆಗಳಲ್ಲಿ ತನ್ನ ಹಿಂದುತ್ವದ ಅಜೆಂಡಾವನ್ನು ಪ್ರಚಾರ ಮಾಡುತ್ತಿದೆ ಎಂಬ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಹೇಳಿಕೆಯನ್ನು ಅಬ್ದುಲ್ಲಾ ತಿರಸ್ಕರಿಸಿದ್ದಾರೆ.
ಸೆಪ್ಟೆಂಬರ್ 13 ರಂದು ಶಾಲೆಗಳಲ್ಲಿ ಎಲ್ಲಾ ದೇವರನ್ನು ಪ್ರಾರ್ಥನೆ ಮಾಡುವ ಸಲುವಾಗಿ “ರಘುಪತಿ ರಾಘವ ರಾಜಾ ರಾಮ್ ಈಶ್ವರ ಅಲ್ಲಾ ತೇರೋ ನಾಮ್” ಅನ್ನು ಪಠಿಸಲು ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಹಾಗೇ ಹಿಂದೂಗಳು ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿದರೆ, ಪುರುಷ ಅಥವಾ ಮಹಿಳೆ ಮುಸ್ಲಿಂ ಆಗಿ ಪರಿವರ್ತನೆ ಹೊಂದುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ನ್ಯಾಷನಲ್ ಕಾನ್ಫರೆನ್ಸ್ ಎಂದಿಗೂ ಪಾಕಿಸ್ತಾನದ ಬೆಂಬಲಕ್ಕಿಲ್ಲ. ಅದು ಯಾವಾಗಲೂ ಭಾರತದೊಂದಿಗೆ ಧೃಡವಾಗಿ ನಿಂತಿದೆ. ನಾವು ಎಂದಿಗೂ ಪಾಕಿಸ್ತಾನದೊಂದಿಗೆ ಕೈಜೋಡಿಸಲಿಲ್ಲ. ಜಿನ್ನಾ ಅವರು ನನ್ನ ತಂದೆಯನ್ನು ಭೇಟಿಯಾಗಲು ಬಂದಿದ್ದರು. ಆದರೆ, ನಾವು ಅವರೊಂದಿಗೆ ಕೈಜೋಡಿಸಲು ನಿರಾಕರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.