ಬಿಎಂಟಿಸಿ ಮಾಸ್ಟರ್ ಪ್ಲಾನ್| ಶೀಘ್ರದಲ್ಲೇ ಆಗಲಿದೆ ಕಂಡೆಕ್ಟರ್ ಲೆಸ್! ಏನಿದು ಹೊಸ ಬದಲಾವಣೆ?
ಇದೀಗ ಬಿಎಂಟಿಸಿ, ನೌಕರರಿಗೆ ಸಂಬಳ ನೀಡಲಾಗದೆ ಹೆಣಗಾಡುತ್ತಿದೆ. ಹೀಗಿರುವಾಗ ನಷ್ಟದ ಸುಳಿಯಿಂದ ಪಾರಾಗಲು ನಿಗಮದಿಂದ ಮಾಸ್ಟರ್ ಪ್ಲಾನ್ ರೆಡಿಯಾಗಿದೆ. ಈ ಹೊಸ ಬದಲಾವಣೆ ಏನೆಂದರೆ ಬಸ್ನಲ್ಲಿ ಡ್ರೈವರ್ ಇರುತ್ತಾರೆ. ಆದರೆ ಕಂಡೆಕ್ಟರ್ ಮಾತ್ರ ಇರುವುದಿಲ್ಲ. ಇನ್ನೂ ಈ ಹೊಸ ಪ್ಲಾನ್ ಏನು? ಕಂಡಕ್ಟರ್ ಇಲ್ಲದೆ ಟಿಕೆಟ್ ಕಲೆಕ್ಷನ್ ಹೇಗೆ? ಈ ಎಲ್ಲದರ ಮಾಹಿತಿ ಇಲ್ಲಿದೆ.
ಪ್ರತಿಸಲ ನೀವು ಬಿಎಂಟಿಸಿ ಬಸ್ ಹತ್ತುತ್ತಿದ್ದಂತೆ ನಿಮ್ಮನ್ನು ಸ್ವಾಗತಿಸುವುದೇ ಕಂಡೆಕ್ಟರ್. ಆದರೆ ಇನ್ಮುಂದೆ ಬಿಎಂಟಿಸಿಯಲ್ಲಿ ಕಂಡೆಕ್ಟರ್ ನ ಮುಖದರ್ಶನ ಆಗುವುದಿಲ್ಲ. ಯಾಕೆಂದರೆ ಇನ್ಮುಂದೆ ಡಿಜಿಟಲ್ ತಂತ್ರಜ್ಞಾನದಿಂದ ಟಿಕೆಟ್ ಕಲೆಕ್ಷನ್ ಆಗಲಿದೆ. ಇದೀಗ ನಿಗಮ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ಅದರ ಜೊತೆಗೆ ಡ್ರೈವರ್ ಕೊರತೆಯೂ ಉಂಟಾಗಿದೆ. ಅಷ್ಟೇ ಅಲ್ಲ, ಹೊಸ ನೇಮಕಾತಿಗೂ ಸರ್ಕಾರ ಸಮ್ಮತಿಸುತ್ತಿಲ್ಲ. ಹಾಗಾಗಿ ಕಂಡೆಕ್ಟರ್ ಪೋಸ್ಟ್‌ಗಳನ್ನು ಇಲ್ಲವಾಗಿಸಲು ನಿಗಮ ಮಾಸ್ಟರ್ ಪ್ಲಾನ್ ಮಾಡಿದೆ.
ಬಿಎಂಟಿಸಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸುವ ಪ್ರಯತ್ನವನ್ನು ಇದೀಗ ಆರಂಭಿಸಲಾಗಿದೆ. ಕಾಮನ್ ಮೊಬಿಲಿಟಿ ಕಾರ್ಡ್, ಇ ಪಾಸ್, ಸೇರಿದಂತೆ ಹಲವಾರು ಡಿಜಿಟಲ್ ಸೌಲಭ್ಯವನ್ನು ಜಾರಿಗೆ ತಂದು ಟಿಕೆಟ್ ಕಲೆಕ್ಷನ್ ನ್ನೂ ಸಂಪೂರ್ಣ ಡಿಜಿಟಲೈಸ್ ಮಾಡಲು ಬಿಎಂಟಿಸಿ ತೀರ್ಮಾನ ಮಾಡಿದೆ. ಇದರಿಂದಾಗಿ ನಿಗಮದಲ್ಲಿರುವ ಎಲ್ಲಾ ಕಂಡೆಕ್ಟರ್ ಗಳು ಕೆಲಸದಿಂದ ಮುಕ್ತರಾಗಲಿದ್ದಾರೆ.
ಈಗ ಇರುವ ಪ್ರತಿಯೊಬ್ಬ ಕಂಡಕ್ಟರ್‍ಗಳು ಕಂಡೆಕ್ಟರ್ ಕಂ ಡ್ರೈವರ್ ಆಗಿರುವವರು. ಹಾಗಾಗಿ ಈ ಎಲ್ಲಾ ಕಂಡೆಕ್ಟರ್‌ಗಳನ್ನು ಡ್ರೈವಿಂಗ್‍ಗೆ ನಿಯೋಜಿಸಲು ಬಿಎಂಟಿಸಿ ಯೋಜಿಸಿದೆ. ಈ ರೀತಿಯಾಗಿ ಹೊಸ ನೇಮಕಾತಿ ಇಲ್ಲದೇ ಬಸ್‍ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಹೊಸ ಪ್ಲಾನ್ ಮಾಡಿದೆ. ಆದರೆ ಇದಕ್ಕೆ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.
ಈ ಹೊಸ ಬದಲಾವಣೆ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವ ಯೋಜನೆಯಾಗಿದೆ. ಮುಂದೆ ಬಿಎಂಟಿಸಿಯನ್ನು ಖಾಸಗೀಕರಣ ಮಾಡುವ ನಿಟ್ಟಿನಲ್ಲಿ ಇಷ್ಟೇಲ್ಲಾ ನಡೆಯುತ್ತಿದೆ. ಇದರಿಂದ ಬಿಎಂಟಿಸಿ ಸಂಸ್ಥೆಯ ನೌಕರರು ಬೀದಿಗೆ ಬೀಳುತ್ತಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಕಾರ್ಮಿಕ ಮುಖಂಡ ಆನಂದ್ ಆಗ್ರಹಿಸಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ ಕಂಡೆಕ್ಟರ್ ಇಲ್ಲದೆ ಬಸ್ ಎಂದರೆ ಊಹಿಸಲು ಅಸಾಧ್ಯವಾದದ್ದು. ಹೆಚ್ಚಿನ ಜನರಿಗೆ ಡಿಜಿಟಲ್ ತಂತ್ರಜ್ಞಾನವನ್ನು ಒಪ್ಪಿಕೊಳ್ಳಲು ಸಮಯ ಬೇಕಾಗುತ್ತದೆ. ಆದರೂ ಬಿಎಂಟಿಸಿ ಸಿಬ್ಬಂದಿ ಆರ್ಥಿಕ ಹೊರೆ ತಪ್ಪಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಸಜ್ಜಾಗಿದೆ.