ವಿಕಲಚೇತನ ಹುಡುಗನ ನೆರವಿಗೆ ಬಂದ ಮಹಿಳೆಯ ಮೇಲೆ ದಾಳಿ | ಕೊನೆಗೆ ಕಣ್ಣು ಕಳೆದುಕೊಂಡಳು!

ಇಂದಿನ ಕಾಲದಲ್ಲಿ ತಾನಾಯಿತು ತನ್ನ ಕೆಲಸವಾಯಿತು!! ಎಂದು ಯೋಚಿಸುವವರೆ ಹೆಚ್ಚು.. ಅಂತಹದರಲ್ಲಿ ಮತ್ತೊಬ್ಬರ ಕಷ್ಟ ಕಂಡು ಮರುಗಿ ಪರೋಪಕಾರ ಮಾಡಿ ತನಗೆ ಆಪತ್ತು ಬರಿಸಿಕೊಳ್ಳುವ ಉಸಾಬರಿ ಬೇಕೇ?? ಎಂಬ ಪ್ರಶ್ನೆ ಮೂಡಿಸುವ ರೀತಿಯ ಪ್ರಕರಣವೊಂದು ಮುನ್ನಲೆಗೆ ಬಂದಿದೆ.

ಅಮೆರಿಕದ ರೆಸ್ಟೋರೆಂಟ್ ಒಂದರಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುವ ಯುವತಿಯೊಬ್ಬಳು ಹದಿಹರೆಯದ ವಿಕಲಚೇತನನಿಗೆ ಸಹಾಯ ಮಾಡಿದ್ದಕ್ಕೆ ಹಲ್ಲೆಗೊಳಗಾಗಿ ಒಂದ ಕಣ್ಣನ್ನೇ ಕಳೆದುಕೊಂಡಿರುವ ದುರ್ಘಟನೆ ನಡೆದಿದ್ದು, ಫಾಕ್ಸ್-ಕೆಟಿವಿಯು ಅದನ್ನು ವರದಿ ಮಾಡಿದೆ.

ಕ್ಯಾಲಿಪೋರ್ನಿರ್ಯಾದ ಆ್ಯಂಟಿಯೋಕ್ ನಲ್ಲಿರುವ ದಿ ಹ್ಯಾಬಿಟ್ ಬರ್ಗರ್ ಗ್ರಿಲ್ ನಲ್ಲಿ ವಿಕಲಚೇತನ ಹುಡುಗನೊಬ್ಬನಿಗೆ ಒಂದಷ್ಟು ಜನರ ಗುಂಪು ಕಿರುಕುಳ ನೀಡುತ್ತಿರುವುದನ್ನು ಗಮನಿಸಿ ನೆರವಾಗಲು ಧಾವಿಸಿದ್ದು, ಆ ಸಂದರ್ಭ ಒಬ್ಬ ದುರುಳ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಗೆ 19-ವರ್ಷ-ವಯಸ್ಸಿನ ವ್ಯವಸ್ಥಾಪಕಿಯಾಗಿದ್ದ ಬಿಯಾಂಕಾ ಪ್ಲೊಮೆರಾ (Bianca Plomera) ಕಣ್ಣು ಕಳೆದುಕೊಂಡ ಘಟನೆ ನಡೆದಿದೆ. ಕೆಲ ಮೂಲಗಳ ಪ್ರಕಾರ ವಿಕಲಚೇತನ ಹುಡುಗ ಪ್ಲೋಮೆರಾಳ ಸಹೋದ್ಯೋಗಿಯೊಬ್ಬರ ಸಂಬಂಧಿ ಎನ್ನಲಾಗಿದೆ.

ರೆಸ್ಟೋರೆಂಟ್ ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ವಿಕಲಚೇತನ ಯುವಕನಿಗೆ ಒಂದಷ್ಟು ಜನರ ಗುಂಪು ಕಿರುಕುಳ ನೀಡುತ್ತಿರುವುದನ್ನು ಗಮನಿಸಿ ಪ್ಲೊಮೆರಾ ಅವನ ನೆರವಿಗೆ ಧಾವಿಸಿದಾಗ ಒಬ್ಬ ದುರುಳ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಯುವತಿ ಹೇಳುವ ಪ್ರಕಾರ ಹಲ್ಲೆಗಾರನ ಎರಡನೇ ಹೊಡೆತವೇ ಅವಳ ಕಣ್ಣಿಗೆ ಆಪತ್ತು ತಂದಿದೆ.

‘ಹಲ್ಲೆಗಾರ ತನ್ನ ಮೇಲೆ ಹಲ್ಲೆ ನಡೆಸಬಹುದೆಂದು ಊಹಿಸಿರಲಿಲ್ಲ ’ ಎಂದು ಹೇಳಿಕೊಂಡಿದ್ದು, ಅವಳ ಬಲಗಣ್ಣಿನಿಂದ ರಕ್ತ ಸುರಿಯುತ್ತಿದ್ದುದನ್ನು ನೋಡಿದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ತಡಮಾಡದೆ ಶಸ್ತ್ರಚಿಕಿತ್ಸೆ ನಡೆಸಿದರಾದರರೂ ಅವಳ ಕಣ್ಣನ್ನು ಉಳಿಸಲು ಸಾಧ್ಯವಾಗಿಲ್ಲ. ಅವಳ ಕಣ್ಣಿನ ಭಾಗವನ್ನು ಬ್ಯಾಂಡೇಜ್ ಮಾಡಲಾಗಿದ್ದು, ಅಷ್ಟು ಭೀಕರವಾದ ಹಲ್ಲೆಗೊಳಗಾದರೂ ಪ್ಲೊಮೆರಾ ಮಾತ್ರ ಧೃತಿಗೆಡದೆ, ತಾನು ಮಾಡಿದ್ದರಲ್ಲಿ ತಪ್ಪಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.

‘ಅದೊಂದು ದುಸ್ವಪ್ನ ಎಂದುಕೊಂಡು ಕಣ್ಣು ತೆರೆಯಲು ಪ್ರಯತ್ನಿಸುತ್ತೇನೆ ಆದರೆ ಬರಿ ಕತ್ತಲು ಮಾತ್ರ ಗೋಚರವಾಗುತ್ತಿದ್ದು, ಕಣ್ಣು ಹೋಗಿದ್ದಕ್ಕೆ ವಿಷಾದವಿದೆ. ಆದರೆ ನಾನು ಮಾಡಿದ್ದರಲ್ಲಿ ತಪ್ಪೇನೂ ಇರಲಿಲ್ಲ ವೆಂದು ಪ್ಲೊಮೆರಾ ಹೇಳಿಕೊಂಡಿದ್ದು ,ಆಕೆಗೆ ಅವಳಲ್ಲಿರುವ ಅಚಲ ವಿಶ್ವಾಸ, ಮತ್ತೊಬ್ಬರ ಮೇಲಿನ ಕಾಳಜಿ ಎದ್ದು ಕಾಣುತ್ತದೆ.

ಈ ಪ್ರಕರಣದ ಸಂಬಂಧ ಆ್ಯಂಟಿಯೋಕ್ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಹಲ್ಲೆಕೊರರ ಜೊತೆಗಿದ್ದ ಜನರ ಜೊತೆ ಬಿಎಮ್ ಡಬ್ಲ್ಯೂ ಕಾರಲ್ಲಿ ಹೋದ ಹಲ್ಲೆಕೋರನ ಪತ್ತೆಗೆ ಜಾಲ ಬೀಸಿದ್ದಾರೆ. ಇದರ ಜೊತೆಗೆ ಪ್ಲೊಮೆರಾ ಆರ್ಥಿಕ ನೆರವು ಕೋರಿ ಅವಳ ಕುಟುಂಬವು GoFundMe page ಕೂಡ ಆರಂಭಿಸಿದ್ದಾರೆ.

Leave A Reply

Your email address will not be published.