‘ಕಾಮಸೂತ್ರ’ ತೈಲಚಿತ್ರ ಮಾರಾಟ | ಇವುಗಳ ಬೆಲೆ ಎಷ್ಟು ಗೊತ್ತೇ!!!
ಕರ್ನಾಟಕದ ಇತಿಹಾಸವನ್ನು ಕೆದಕಿದರೆ ಅದೆಷ್ಟು ಪುರಾತನ ಶ್ರೀಮಂತ ಐತಿಹ್ಯ ಹಾಗೂ ವಾಸ್ತು ಪ್ರಕಾರದ ಜೊತೆಗೆ ಬೆಲೆಬಾಳುವ ಸೊತ್ತುಗಳನ್ನು ಒಳಗೊಂಡಿದ್ದು, ಅವೆಲ್ಲವೂ ಯುದ್ದ, ಬ್ರಿಟಿಷರ ಆಕ್ರಮಣದ ಬಳಿಕ ಅನೇಕ ದುಬಾರಿ ವಜ್ರ ವೈಢೂರ್ಯ, ಸಂಪತ್ತುಗಳು ನಾಶ ವಾಗಿದ್ದು ತಿಳಿದಿರುವ ವಿಷಯ!!. ಅದರಲ್ಲೂ ಕೂಡ ಪುರಾತನ ಕಾಲದ ಇತಿಹಾಸ ಅರಹುವ ಅದೆಷ್ಟೋ ವಸ್ತುಗಳು ಪಳೆಯುಳಿಕೆಗಳಾಗಿ ತಲೆಮರೆಗೆ ಸರಿದರೆ,ಮತ್ತೆ ಕೆಲವು ಲೂಟಿಗಾರರ ಕೈವಶವಾಗುತ್ತಿದೆ.
ಇದೀಗ, ಮೊಘಲರ ಕಾಲದ್ದು ಎಂದು ಹೇಳಲಾಗುವ ಪುರಾತನ ಕಾಲದ ಆನೆದಂತದಿಂದ ಮಾಡಿರುವ ವಿವಿಧ ಶೈಲಿಯ ಬೆಲೆಬಾಳುವ ವಸ್ತುಗಳನ್ನು ಮಾರಾಟಕ್ಕೆ ಯತ್ನಿಸಿದ್ದ ಆರೋಪಿಗಳನ್ನು ಸಿಸಿಬಿಯ ಮಹಿಳಾ ಸಂರಕ್ಷಣಾ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.
ಅನ್ಯ ರಾಜ್ಯದ ಇಬ್ಬರು ಸೇರಿ ಒಟ್ಟು ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದು, ಈ ಆರೋಪಿಗಳಿಂದ ಆನೆದಂತದಿಂದ ತಯಾರಿಸಲಾಗಿರುವ ಚೌಕಾಕಾರದ ಬಾಕ್ಸ್ 533 ಗ್ರಾಂ, ಬಾಗಿಲ ಹಿಡಿಕೆ, ಆನೆಯ ಮೂರ್ತಿ ವಾಕಿಂಗ್ ಸ್ಟೀಕ್, ಜಿಂಕೆಯ ಕೊಂಬಿನ ಹಿಡಿಕೆಯ ಎರಡು ಚಾಕು, 4 ಆನೆಯ ಮೂರ್ತಿಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಆನೆಯ ಮೂರ್ತಿಯ ಮೇಲೆ ಟಿಪ್ಪು ಹುಲಿಯೊಂದಿಗೆ ಹೋರಾಡುತ್ತಿರುವ ಚಿತ್ರ ಬಿಡಿಸಲಾಗಿದೆ. ಇದರ ಜೊತೆಗೆ ಮೊಟ್ಟೆ ಆಕಾರದ 20 ಏರಾಟಿಕ್ ವರ್ಕ್ಸ್ ಕಲೆಯ ವಾತ್ಸಾಯನ ಕಾಮಸೂತ್ರದ ಚಿತ್ರಗಳು ಸೇರಿದಂತೆ ಆನೆ ದಂತದಿಂದ ಮಾಡಿರುವ ಸುಮಾರು ಒಟ್ಟು ಏಳೂವರೆ ಕೆ.ಜಿ.ತೂಕದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹವಾಲಾ ದಂಧೆ ನಡೆಯುವ ಬಗ್ಗೆ ಬಂದ ಮಾಹಿತಿ ಅರಿತು, ಎಚ್ಚೆತ್ತ ಸಿಸಿಬಿ ಅಧಿಕಾರಿಗಳು ಹಲಸೂರು ಗೇಟ್ ಬಳಿಯ ಬನ್ನಪ್ಪ ಪಾರ್ಕ್ ಬಳಿ ಕಾರ್ಯಾಚರಣೆ ನಡೆಸಿದ್ದು, ಪುರಾತನ ಕಾಲದ ವಸ್ತುಗಳ ಜೊತೆಗೆ ಆನೆ ದಂತದಿಂದ ಮಾಡಿರುವ ವಸ್ತುಗಳ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಎಸಿಪಿ ರೀನಾ ಸುವರ್ಣ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಹರಿಯಾಣ ಹಾಗೂ ಪಂಜಾಬ್ ಮೂಲದ ಹಿಮ್ಮತ್ ಸಿಂಗ್, ಪ್ರವೀಣ್ ಸಾಂಬಿಯಾಲ್ , ಸ್ಥಳೀಯ ಆರೋಪಿಗಳಾದ ಅಬ್ದುಲ್ ಕಯೂಮ್, ಮೊಹಮ್ಮದ್ ರಫೀಕ್, ಮೊಹಮ್ಮದ್ ಇಸ್ರಾರ್ ಹಾಗೂ ಆಮ್ಜದ್ ಪಾಷಾ ಬಂಧಿತರಾಗಿದ್ದಾರೆ.
ಇನ್ನೂ ಬೆಲೆಬಾಳುವ ವಸ್ತುಗಳ ಮೂಲ ಹಾಗೂ ಯಾರಿಗೆ ಮಾರಾಟ ಮಾಡಲು ಮುಂದಾಗಿದ್ದರು ಎಂಬುದರ ಬಗ್ಗೆ ವಿಚಾರಣೆಯ ಬಳಿಕವಷ್ಟೆ ಗೊತ್ತಾಗಬೇಕಿದೆ. ಆರೋಪಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಅಪರಾಧ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ಚುರುಕುಗೊಳಿಸಿದ್ದಾರೆ.
ಆರೋಪಿಗಳ ವಿರುದ್ಧ ಈ ಹಿಂದೆ ಕ್ರಿಮಿನಲ್ ಕೇಸ್ ದಾಖಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಈಗ ವಶಪಡಿಸಿಕೊಂಡಿರುವ ವಸ್ತುಗಳನ್ನು ಗಮನಿಸಿದಾಗ ಮೇಲ್ನೊಟಕ್ಕೆ ಮೊಘಲರ ಕಾಲದ ವಸ್ತುಗಳಂತೆ ತೋರುತ್ತಿದ್ದು ನಿಖರವಾದ ಮಾಹಿತಿ ಕಲೆ ಹಾಕಲು ಡೆಹ್ರಾಡೂನ್ ನಲ್ಲಿರುವ ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್ ಹಾಗೂ ಹೈದರಾಬಾದ್ ಗೆ ರವಾನಿಸುವ ಸಾಧ್ಯತೆ ದಟ್ಟವಾಗಿದೆ.
ಪತ್ತೆಯಾಗಿರುವ ಆನೆ ದಂತದಿಂದ ಮಾಡಿರುವ ವಸ್ತುಗಳು ಎಷ್ಟು ವರ್ಷ ಹಳೆಯದು ಪತ್ತೆ ಹಚ್ಚಲು ಸ್ಯಾಂಪಲ್ ಗಳನ್ನು ಕಳುಹಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಮರದಲ್ಲಿ ನೈಸರ್ಗಿಕವಾಗಿ ಸಿಗುವ ಅಂಬರ್ ಅಂಟಿನ ತರಹದ ವಸ್ತುವಿನಲ್ಲಿ ಚೇಳೊಂದು ಜೀವಂತ ಸಮಾಧಿ ಕೂಡ ಆಗಿದ್ದು, ಇದು ಕೂಡ ಕಾಣಲು ಸಿಗುವುದು ಅಪರೂಪವಾಗಿದೆ. ಇದು ಕೂಡ ಬೆಲೆಬಾಳುವ ವಸ್ತುವಾಗಿದ್ದು ಇದನ್ನು ಕೂಡ ಜಪ್ತಿ ಮಾಡಿಕೊಳ್ಳಲಾಗಿದೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರು ಮಾಹಿತಿ ನೀಡಿದ್ದಾರೆ.