ಮತ್ತೊಂದು Online Fraud | FaceBook ನಲ್ಲಿ ಫ್ರೆಂಡ್ ಶಿಪ್, ನಂತರ ಯುವತಿ ಲೂಟಿ ಮಾಡಿದ್ದು ಲಕ್ಷ ಲಕ್ಷ ಹಣ | ಅಷ್ಟಕ್ಕೂ ಈಕೆ ಯಾರು?
ಸೋಷಿಯಲ್ ಮೀಡಿಯಾದಿಂದ ಎಷ್ಟು ಒಳಿತಿದೆಯೋ ಅಷ್ಟೇ ಕೆಡುಕು ಕೂಡ ಇದೆ. ಇದೀಗ ಸಾಮಾಜಿಕ ಜಾಲತಾಣದ ಮೂಲಕ ಸಾಕಷ್ಟು ವಂಚನೆಗಳು ನಡೆಯುತ್ತಿವೆ. ಅದರಲ್ಲೂ ಹಣಗಳಿಸಲು ವಂಚಕರು ಸೋಷಿಯಲ್ ಮೀಡಿಯಾವನ್ನು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ. ಫೇಸ್ಬುಕ್, ವಾಟ್ಸಪ್ ಮೂಲಕ ಪರಿಚಯ ಮಾಡಿಕೊಂಡು ಬಳಿಕ ಹಣಕ್ಕಾಗಿ ಅಶ್ಲೀಲ ದೃಶ್ಯ ತೋರಿಸಿ ಅದನ್ನ ಎಡಿಟ್ ಮಾಡಿ ಬ್ಲಾಕ್ ಮೇಲ್ ಮಾಡುವುದು. ಹೀಗೇ ಫೇಕ್ ಫೇಸ್ಬುಕ್ ಐಡಿಗಳನ್ನು ತಯಾರಿಸಿ ಅದರ ಮೂಲಕ ಹಣ ಪಡೆಯುವಂತಹ ಪ್ರಕರಣಗಳು ಎಷ್ಟೋ ಇವೆ. ಅಂತದ್ದೇ ಘಟನೆಯೊಂದು ಇದೀಗ ಪೋಲಿಸರ ಗಮನಕ್ಕೆ ಬಂದಿದೆ.
ಈ ಯುವತಿಯು UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಅವನು ಹೈದ್ರಾಬಾದ್‌ನಲ್ಲಿ ಕಟ್ಟಡ ಕಾರ್ಮಿಕರ ಮೇಲಿನ ಸೂಪರ್ ವೈಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಅವನಿಗೆ 30 ಸಾವಿರ ಸಂಬಳ ಬರುತ್ತಿತ್ತು. ಅವಳು UPSC ಪರೀಕ್ಷೆಗೆ ಚೆನ್ನಾಗಿ ತಯಾರಿ ನಡೆಸಲಿ, DC ಆಗಲಿ ಎಂದು ಹಾರೈಸುತ್ತಿದ್ದ. ಅಷ್ಟೇ ಅಲ್ಲದೆ, ಅವಳಿಗೆ ಯಾವುದೇ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದ. ಆದರೆ ಮುಂದೆ ನಡೆದ ಘಟನೆಯೇ ಬೇರೆ. ಈ ಮೊದಲಿದ್ದಕ್ಕಿಂತ ವಿಚಿತ್ರ ತಿರುವು ಪಡೆದುಕೊಂಡಿತು.
ಆನ್ಲೈನ್ ನಲ್ಲಿ ಪರಿಚಯವಾಗಿದ್ದ ಹಾಸನ ಮೂಲದ ಹುಡುಗಿಗೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿ ಬಗಲೂರು ಗ್ರಾಮದ ಯುವಕನ ನಡುವೆ ಸಲುಗೆ ಬೆಳೆದಿತ್ತು. ಈ ಸಲುಗೆ ಸಮಯದ ನಂತರ ಪ್ರೀತಿಗೆ ತಿರುಗಿತ್ತು. ಇಬ್ಬರೂ ಒಬ್ಬರನೊಬ್ಬರು ನೋಡದೆಯೇ ಮನಸಾರೆ ಪ್ರೀತಿಸುತ್ತಿದ್ದರು. ಪ್ರಿಯತಮೆಯ ಓದಿಗಾಗಿ ಮನೆಯಲ್ಲಿ ಕೂಡಿಟ್ಟ 5 ಲಕ್ಷ ನಗದು ಹಣ ಹಾಗೂ ಒಂದು ಪ್ಲಾಟ್ ಸೇರಿದಂತೆ ಎಲ್ಲವನ್ನು ಮಾರಿ ಅವಳಿಗೆ ಹಣ ಕಳಿಸುತ್ತಿದ್ದ. ಹೀಗೇ ಹಣಕ್ಕಾಗಿ ಬೇಡಿಕೆ ಹೆಚ್ಚಾದಾಗ ಆತನಿಗೆ ತಾನು ಆನ್ಲೈನ್ ವಂಚನೆಗೆ ಒಳಗಾಗಿದ್ದೇನೆ ಎಂದು ಅರಿವಾಯಿತು.
ಈ ಬಗ್ಗೆ ಖಾಸಗಿ ಉದ್ಯೋಗಿಯಾಗಿರುವ ಬಗಲೂರು ಗ್ರಾಮದ ಅಶೋಕಕುಮಾರ್ (ಹೆಸರು ಬದಲಿಸಲಾಗಿದೆ) ಎಂಬ ಯುವಕ ತನಗೆ ಆಗಿರುವ ಮೋಸದ ಕುರಿತು ದಿನಾಂಕ 15.11.2022 ರಂದು ಪೋಲಿಸರಿಗೆ ದೂರು ನೀಡಿದ್ದ. ಅದರಲ್ಲಿ ತನಗಾದ ಮೋಸದ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದ.
ಮೋಸ ಹೋದ ಯುವಕ ನೀಡಿರುವ ದೂರಿನ ಪ್ರಕಾರ, ಜೂನ್ ತಿಂಗಳ 29ರಂದು ಈ ಯುವಕನಿಗೆ, Manjula.K.R ಎಂಬ ಪೇಸ್ ಬುಕ್ ಐಡಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಆಗ ಈ ಯುವಕ ರಿಕ್ವೆಸ್ಟ್ ಅನ್ನು accept ಮಾಡಿದ್ದು, ನಂತರ ಮೆಸೇಜ್ ಮಾಡಿ ಇಬ್ಬರ ನಡುವೆ ಫೇಸ್ ಬುಕ್ ಮೂಲಕ ಸಂಪರ್ಕ ಬೆಳೆಯುತ್ತದೆ. ಇದನ್ನೇ ದಾಳವಾಗಿ ಬಳಸಿಕೊಂಡ ಆ ಯುವತಿ, ನಮ್ಮ ತಾಯಿಗೆ ಆರೋಗ್ಯ ಸರಿ ಇಲ್ಲ, ಅದಕ್ಕೆ 700/- ರೂ ಫೋನ್ ಪೇ ಮಾಡಿ ಅಂತಾ ಮನವಿ ಮಾಡುತ್ತಾಳೆ. ಇದನ್ನು ನಿಜವೆಂದು ನಂಬಿ ಮನಸ್ಸು ಕರಗಿ ಆತ ಫೋನ್ ಪೇ ಮಾಡಿದ್ದಾನೆ.
ಇದನ್ನೇ ಬಂಡವಾಳವಾಗಿಸಿಕೊಂಡು ಆ ಯುವತಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ ಎಂದು ಹಣ ನೀಡುವಂತೆ ಪದೇ ಪದೇ ಕೇಳುತ್ತಿರುತ್ತಾಳೆ. ಈ ಬಾರಿಯೂ ಸತ್ಯವೆಂದು ನಂಬಿದ ಯುವಕ ಇಲ್ಲಿಯವರೆಗೆ ಸುಮಾರು 40 ಲಕ್ಷ ರೂಪಾಯಿ ಅವಳಿಗೆ ಫೋನ್ ಪೇ ಮೂಲಕ ಕಳಿಸಿದ್ದಾನೆ. ಒಂದು ಬಾರಿಯೂ ಅವಳ ಮುಖ ಕೂಡ ನೋಡಿಲ್ಲ, ಒಂದು ವಿಡಿಯೋ ಕಾಲ್ ಕೂಡಾ ಮಾಡಿಲ್ಲ. ಆದರೂ ಅಷ್ಟು ಹಣ ಕಳಿಸಿದ್ದಾನೆ ಎಂದರೆ ಆಶ್ಚರ್ಯವೇ.
ಕೊನೆಗೆ ಕೆಲವು ದಿನಗಳ ಬಳಿಕ ಯುವಕನಿಗೆ ಫೋನ್ ಮಾಡಿದ ಮಂಜುಳಾ ತಾನು ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದು, ಡಿಸಿ ಪೋಸ್ಟ್ ಸಿಗುತ್ತದೆ. ಇದೀಗ ಹಾಸನದಲ್ಲಿದ್ದೇನೆ ನನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಅದಕ್ಕೆ ಬೆಂಗಳೂರಿಗೆ ಹೋಗಬೇಕು. ಆದರೆ ಅಲ್ಲಿ ಖರ್ಚಿಗೆ ನನ್ನ ಬಳಿ ಹಣವಿಲ್ಲ. ನೀನು ನನಗೆ ಹಣಕಾಸಿನ ಸಹಾಯ ಮಾಡಿದರೆ ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾಳೆ. ಈ ಮಾತು ಕೇಳಿ ಯುವಕ ಪೂರ್ತಿಯಾಗಿ ಹಳ್ಳಕ್ಕೆ ಬಿದ್ದಿದ್ದಾನೆ. ಈ ಬಾರಿಯು ಮುಗ್ಧ ಹುಡುಗ ಹಣ ಕಳುಹಿಸಿದ್ದಾನೆ.
ನಂತರ ಪೇಸ್ಬುಕ್ ಫ್ರೆಂಡ್ ಮಂಜುಳಾ ಮತ್ತಷ್ಟು ಸಲುಗೆಯಿಂದ ನಡೆದುಕೊಂಡಿದ್ದು ಅದನ್ನು ನಂಬಿದ ಯುವಕ ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ಬರೊಬ್ಬರಿ 40 ಲಕ್ಷ ರೂಪಾಯಿಗಳನ್ನು ಮಂಜುಳಾ ಖಾತೆಗೆ ರವಾನಿಸಿದ್ದಾನೆ. ಅಷ್ಟೇ ಅಲ್ಲದೆ, ಫೋನ್ ಪೇ ಹಣ ಸೇರಿ ಒಟ್ಟು 41,26,800 ರೂ. ಮಂಜುಳಾಗೆ ನೀಡಿದ್ದಾನೆ. ಆ ಬಳಿಕ ಮಂಜುಳಾ ಹತ್ತಿರವೇ ತನ್ನ ಖರ್ಚಿಗೆ ಹಣವಿಲ್ಲವೆಂದು 2,21,930 ರ ವಾಪಸ್ ಪಡೆದಿದ್ದಾನೆ.
ಇಷ್ಟೂ ಸಾಕಾಗದೆ ಮಂಜುಳಾ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಡುತ್ತಿದ್ದಳು, ಹಣಕ್ಕಾಗಿ ಪೀಡಿಸುತ್ತಿದ್ದಳು. ಇದರಿಂದ ಯುವಕನಿಗೆ ಸಂಶಯ ಬಂದು ತಾನು ಮೋಸ ಹೋದೆನೆಂದು ತಿಳಿದು ನ.15ರಂದು ಆಕೆಯ ವಿರುದ್ದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಈ ಆನ್ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖಾ ತಂಡ ರಚಿಸಲಾಗಿದೆ. ಶೀಘ್ರದಲ್ಲಿಯೇ ಪ್ರಕರಣ ಭೇದಿಸಲಾಗುವುದು, ದೂರುದಾರನಿಗೆ ನ್ಯಾಯ ಒದಗಿಸುತ್ತೇವೆ ಎಂದು ಎಸ್ಪಿ ಹೆಚ್ ಡಿ ಆನಂದಕುಮಾರ್ ಹೇಳಿದರು. ಇದೀಗ ಅಮಾಯಕ ಯುವಕನಿಗೆ ಮೋಸ ಮಾಡಿದ ಯುವತಿಗಾಗಿ ಸಿಇಎನ್ ಪೊಲೀಸರು ಶೋಧ ನಡೆಸಿದ್ದಾರೆ. ಆಕೆಯ ಇರುವಿಕೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಕೆಲ ಸ್ಥಳಗಳಿಗೆ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಆಕೆ ಇರುವ ಜಾಗವನ್ನು ಪತ್ತೆ ಹಚ್ಚಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.