ರೈತರೇ ನಿಮಗೊಂದು ಗುಡ್ ನ್ಯೂಸ್ | ಶ್ರೀಗಂಧ ಬೆಳೆಯಲು ಮಾರಾಟ ಮಾಡಲು ಮುಕ್ತ ಅವಕಾಶ !
ರೈತರ ಜಮೀನಿನಲ್ಲಿ ಶ್ರೀಗಂಧ ಬೆಳೆಯುವುದನ್ನು ಪ್ರೋತ್ಸಾಹಿಸಲು ಹೊಸ ಶ್ರೀಗಂಧ ನೀತಿ ಮತ್ತು 2022 ಅನ್ನು ಜಾರಿಗೆ ತರಲು ಸಂಪುಟ ಸಮ್ಮತಿ ನೀಡಿದೆ. ರೈತರು ಶ್ರೀಗಂಧವನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎಂಬ ಕಾರಣಕ್ಕೆ ಈ ನೀತಿಯನ್ನು ತರಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಸಂಪುಟದ ತೀರ್ಮಾನವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀಗಂಧವನ್ನು ಬೆಳೆಯುವುದರ ಜೊತೆಗೆ ಅದರ ಮಾರಾಟಕ್ಕೂ ಈ ಕಾಯ್ದೆಯಲ್ಲಿ ಅವಕಾಶ ಮಾಡಿಕೊಡಲಾಗುವುದು. ಅಷ್ಟೇ ಅಲ್ಲದೆ, ಶ್ರೀಗಂಧವನ್ನು ರಕ್ಷಣೆ ಮಾಡಲು ಕೂಡ ವ್ಯವಸ್ಥೆ ಮಾಡಲಾಗುವುದು. ಹಾಗೂ ಮುಕ್ತ ಮಾರುಕಟ್ಟೆಗೂ ಅವಕಾಶವಿದೆ ಎಂದು ತಿಳಿಸಿದರು. ಸರ್ಕಾರದ ಸ್ವಾಮ್ಯದಲ್ಲಿರುವ ಸಾಬೂನು ಕಾರ್ಖಾನೆಗೂ ಶ್ರೀಗಂಧ ಬೇಕಾಗಿದೆ. ಅದೇ ರೀತಿ, ಹಲವಾರು ಉದ್ದೇಶಗಳಿಗೆ ಶ್ರೀಗಂಧದ ಬೇಡಿಕೆ ಇದ್ದು, ಅರಣ್ಯಜೀವಿ ಪರಿಸರ ಇಲಾಖೆಯಿಂದ ನೀತಿಯೊಂದನ್ನು ರೂಪಿಸಲಾಗಿದೆ. ಶ್ರೀಗಂಧದ ಕಳವು ತಡೆಗಟ್ಟಲು ತಂತ್ರಜ್ಞಾನವನ್ನು ಬಳಸಿಕೊಂಡು ಮರಗಳಿಗೆ ಚಿಪ್ ಅಳವಡಿಕೆ ಮಾಡಲಾಗುವುದು ಎಂದರು.
ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ, ಕರಡಿಧಾಮ ಸೇರಿದಂತೆ ಹಲವು ಪ್ರದೇಶಗಳನ್ನು ಮೀಸಲು ಪ್ರದೇಶ ಎಂದು ಘೋಷಣೆ ಮಾಡಬೇಕು ಎನ್ನುವ ಅರಣ್ಯ ಇಲಾಖೆಯ ಪ್ರಸ್ತಾವನೆಗಳಿಗೆ ಸಚಿವ ಸಂಪುಟ ಅಸ್ತು ಎಂದಿದೆ. ಉತ್ತಾರೆಗುಡ್ಡ ವನ್ಯಜೀವಿಧಾಮ, ಬಂಕಾಪುರ ವನ್ಯಜೀವಿಧಾಮ, ಅರಸೀಕೆರೆ ಕರಡಿ ಧಾಮ ಹಿರೆಸೂಲೆಕೆರೆ ಕರಡಿ ಸಂರಕ್ಷಣಾ ಮೀಸಲು ಪ್ರದೇಶ, ಚಿಕ್ಕ ಸಂಗಮ ಪ ಸಂರಕ್ಷಣಾ ಮೀಸಲು ಪ್ರದೇಶ, ಮುಂಡಿಗೆ ಕೆರೆ ಮತ್ತು ಪ ಸಂರಕ್ಷಣಾ ಮೀಸಲು ಪ್ರದೇಶ, ಬೋನಾಳ ಪ ಸಂರಕ್ಷಣಾ ಪ್ರದೇಶಗಳನ್ನು ಹೊಸದಾಗಿ ಮೀಸಲು ಪ್ರದೇಶಗಳು ಎಂದು ಘೋಷಣೆ ಮಾಡಲಾಗಿದೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವನ್ನು ಡಿ.19ರಿಂದ 30ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಡಿ.12ರಿಂದ ನಡೆಸಲು ಉದ್ದೇಶಿಸಿದ್ದ ಅಧಿವೇಶನವನ್ನು ಒಂದು ವಾರ ಮುಂದೂಡಲು ತೀರ್ಮಾನಿಸಿ, ಡಿ.19ಕ್ಕೆ ನಿಗದಿಪಡಿಸಲಾಗಿದೆ.
ಇನ್ನೂ ಸಂಪುಟ ಸಭೆಯ ಮುಖ್ಯಾಂಶಗಳು ಏನೆಂದರೆ, ತುಮಕೂರಿನಲ್ಲಿ 56 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆ ತೀವ್ರ ನಿಗಾಟಕ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಹಾಗೂ ಬೆಂಗಳೂರಿನ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್ ಸೆಂಟರ್ ನಿರ್ಮಿಸಲು ಅನುಮೋದನೆಯಾಗಿದೆ.
ಹಾಗೇ, ಧಾರವಾಡ ಮತ್ತು ಹಳಿಯಾಳ ರಸ್ತೆಯಲ್ಲಿ ರೈಲ್ವೆ ಕ್ರಾಸಿಂಗ್ ಗೇಟ್ ಸಂಖ್ಯೆ 300ರ ಬದಲಿಗೆ, ರಸ್ತೆ ಕೆಳಸೇತುವೆಯನ್ನು 41.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಒಪ್ಪಿಗೆ ನೀಡಲಾಗಿದೆ. ಕೋಲಾರ, ಚಿಕ್ಕಮಗಳೂರು, ರಾಯಚೂರು, ದಾವಣಗೆರೆ, ಬಾಗಲಕೋಟೆ ಜಿಲ್ಲೆಯಲ್ಲಿ 158 ಕೋಟಿ ರೂ ವೆಚ್ಚದಲ್ಲಿ ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಿಸಲು ತೀರ್ಮಾನವಾಗಿದೆ. ಬೆಳಗಾವಿ ಹಾಗೂ ದಾವಣಗೆರೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳು ಮೇಲ್ದರ್ಜೆಗೆ ಅನುಮೋದನೆ.
ಕಾರ್ಮಿಕ ರಾಜ್ಯ ವಿಮಾ ಯೋಜನೆಯ ಆಸ್ಪತ್ರೆಗಳು/ ಚಿಕಿತ್ಸಾಲಯಗಳು/ರೋಗ ಪತ್ತೆ ಹಚ್ಚುವ ಕೇಂದ್ರಗಳಿಗೆ 44 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗೆ ಸಮ್ಮತಿಸಿದೆ.
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ 16.52 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿಐಪಿ ಅತಿಥಿ ಗೃಹ, ಭಕ್ತರ ಕೊಠಡಿ ಹಾಗೂ ಡಾರ್ಮೆಟ್ರಿ ಕಟ್ಟಡ ನಿರ್ಮಿಸಲು ಅನುಮೋದನೆ ಆಗಿದೆ.
ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಬಳ್ಳಾರಿ ಜಿಲ್ಲೆಯ ನೆಲ್ಲೂಡಿ ಹಾಗೂ ಇತರ ಆರು ಜನವಸತಿ ಪ್ರದೇಶಗಳ ಕುಡಿಯುವ ನೀರು ಸರಬರಾಜು ಪುನಶ್ವೇತನಗೊಳಿಸುವ ಕಾಮಗಾರಿಯನ್ನು <11.26 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದೆ. 2022 ಮತ್ತು 23ನೇ ಸಾಲಿಗೆ ಅನ್ವಯಿಸುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಗರ ಕೇಂದ್ರಗಳಿಗೆ 154.63 ಕೋಟಿ ರೂ. ವೆಚ್ಚದಲ್ಲಿ ರೋಗ ಪತ್ತೆ ಉಪಕರಣ, ರಾಸಾಯನಿಕ ರೋಗ ಪತ್ತೆ ಉಪಕರಣಗಳನ್ನು ಖರೀದಿಸಲು ಒಪ್ಪಿಗೆ ನೀಡಲಾಗಿದೆ.
ಇನ್ನು, ಗೌರಿಬಿದನೂರಿನಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನೂತನ ಕೋರ್ಟ್ ಕಟ್ಟಡದ ನಿರ್ಮಾಣಕ್ಕೆ ಸಮ್ಮತಿ ನೀಡಿದೆ. ಅಷ್ಟೇ ಅಲ್ಲದೆ, ಬಾಗಲಕೋಟೆ ಹಾಗೂ ರಾಯಚೂರು ಬಾಚಿ ರಾಜ್ಯ ಹೆದ್ದಾರಿಯ 20 ನವೀಕರಣ ಕಾಮಗಾರಿಗಳ ಒಟ್ಟು <12 .44 ಕೋಟಿ ಪರಿಷತ ಅಂದಾಜಿಗೆ ಸಮ್ಮತಿಸಿದೆ.
ಹಾಗೇ, ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಅಭಿಯಾನ ಯೋಜನೆ ಅಡಿಯಲ್ಲಿ ಕೋಲಾರ ಜಿಲ್ಲಾ ಆಸ್ಪತ್ರೆ, ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆವರಣದಲ್ಲಿ 3 ತೀವ್ರ ನಿಗಾಟಕ ನಿರ್ಮಾಣಕ್ಕೆ ಸುಮಾರು 49.89 ಕೋಟಿ ರೂ. ಗೆ ಒಪ್ಪಿಗೆ ನೀಡಲಾಗಿದೆ.
ಬೆಂಗಳೂರಿನ ಉತ್ತರಹಳ್ಳಿ ಅಂಜನಾಪುರದಲ್ಲಿರುವ ಸಾರಿಗೆ ಇಲಾಖೆ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ 11.25 ಕೋಟಿ ರೂ.ಗಳ ಪರಿಷತ ಅಂದಾಜಿಗೆ ಅನುಮತಿ ನೀಡಿದೆ. ಹಾಗೇ ಯಲ್ಲಾಪುರ ಪ.ಪಂ. ವ್ಯಾಪ್ತಿಗೆ ಸಹಸ್ರಹಳ್ಳಿಯ ಕಂದಾಯ ಗ್ರಾಮ ಪ್ರದೇಶಗಳ ಸೇರ್ಪಡೆಯಾಗಿದೆ. ಇನ್ನು, ಬೆಂಗಳೂರು ನಗರ ಜಿಲ್ಲೆ ದಾಸನಪುರ ಹೋಬಳಿ ಗಂಗೊಂಡನಹಳ್ಳಿಯಲ್ಲಿ 15 ಗುಂಟೆ ಜಮೀನನ್ನು ನಮ್ಮನೆ ಸುಮ್ಮನೆ ನಿರಾಶ್ರಿತರ ಕೇಂದ್ರಕ್ಕೆ ಕೊಡಲು ಅನುಮತಿ ನೀಡಿದೆ. ಇವಿಷ್ಟು ಸಂಪುಟ ಸಭೆಯ ಮುಖ್ಯಾಂಶಗಳಾಗಿವೆ.