ಹರೇಕಳ ಗ್ರಾಮ ಪಂಚಾಯಿತಿ ಕಟ್ಟಡದ ಗೋಡೆಯ ಮೇಲೆ ಹರೇಕಳ ಹಾಜಬ್ಬರ ಚಿತ್ರ| ಅಕ್ಷರ ಸಂತನಿಗೆ ಮತ್ತೊಮ್ಮೆ ಸಂದ ಗೌರವ

ಕಿತ್ತಳೆ ಹಣ್ಣನ್ನು ಮಾರಿ ತನ್ನೂರಿನಲ್ಲಿ ಶಾಲೆ ಕಟ್ಟಿದ್ದ ಹಾಜಬ್ಬ ಅವರಿಗೆ ಹರೇಕಳ ಗ್ರಾಮ ಪಂಚಾಯಿತಿಯವರು, ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಹಾಜಬ್ಬ ಅವರ ಚಿತ್ರ ಬಿಡಿಸುವ ಮೂಲಕ ವಿಶೇಷ ಗೌರವವನ್ನು ಸಲ್ಲಿಸಿದ್ದಾರೆ.

ಹರೇಕಳ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಪಂಚಾಯಿತಿ ಕಟ್ಟಡದ ಗೋಡೆ ಪೂರ್ತಿಯಾಗಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಚಿತ್ರವನ್ನು ರಚಿಸುವ ಮೂಲಕ ಗ್ರಾಮದ ಮಕ್ಕಳ ಬಾಳಿಗೆ ಬೆಳಕಾದ ಅಕ್ಷರ ಸಂತನಿಗೆ ವಿಶೇಷವಾದ ಗೌರವವನ್ನು ಅರ್ಪಿಸಲಾಗಿದೆ.

ಶಾಸಕರ ವಿಶೇಷ ಹಾಗೂ ವಿವಿಧ ಅನುದಾನದ ಅಡಿಯಲ್ಲಿ ಹರೇಕಳ ಗ್ರಾಮಕ್ಕೆ ಬಾವಲಿಗುರಿ ಪ್ರದೇಶದಲ್ಲಿ ನೂತನವಾಗಿ ಕಟ್ಟಡ ನಿರ್ಮಾಣವಾಗುತ್ತಿದೆ. ಸುಮಾರು ಒಂದೂವರೆ ವರ್ಷದಿಂದ ನಡೆಯುತ್ತಿದ್ದ ಈ ಕಾಮಗಾರಿ ಇದೀಗ ಸಮಾರೋಪಾದಿಯಲ್ಲಿದೆ. ಅತಿ ಬೇಗನೆ ಉದ್ಘಾಟನೆಯ ಹಂತಕ್ಕೆ ತಲುಪಲಿದೆ. ಕಟ್ಟಡದ ಒಂದು ಅಂತಸ್ತಿನ ಗೋಡೆಯ ಪೂರ್ತಿಯಾಗಿ ಕಿತ್ತಳೆ ಹಣ್ಣನ್ನು ಹಿಡಿದಿರುವ ಹರೇಕಳ ಹಾಜಬ್ಬ ಅವರ ಚಿತ್ರವನ್ನು ತುಂಬಾ ಅದ್ಭುತವಾಗಿ ರಚಿಸಲಾಗಿದೆ.

ಹರೇಕಳ ಗ್ರಾಮದ ಹೆಸರನ್ನು ಇಡೀ ಜಗತ್ತಿಗೆ ಪಸರಿಸಿದ ಕೀರ್ತಿ ಅವರದು. ಹಾಜಬ್ಬ ಅವರು ಪ್ರತೀದಿನ ಕಿತ್ತಳೆ ಹಣ್ಣು ಮಾರಿ ಅದರಿಂದ ಬಂದ ಹಣವನ್ನು ಕೂಡಿಟ್ಟು ತನ್ನೂರಿನಲ್ಲಿ ಶಾಲೆ ಕಟ್ಟಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಈ ಗ್ರಾಮಕ್ಕೆ ಅವರಿಂದಲೇ ವಿಶೇಷವಾದ ಗೌರವ ಕೂಡ ಬಂದಿದೆ. ದೇಶದ ಅತ್ಯುನ್ನತ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇವರ ಅತ್ಯುತ್ತಮ ಕಾರ್ಯಕ್ಕೆ ಗ್ರಾಮದ ಸರ್ವ ಸದಸ್ಯರ ನಿರ್ಣಯದಂತೆ ಕಟ್ಟಡದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬ ಅವರ ಚಿತ್ರ ರಚಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ತಿಳಿಸಿದರು.

Leave A Reply

Your email address will not be published.