ತನ್ನ ಬಳಿ ಚಿಕಿತ್ಸೆಗೆ ಬರುತ್ತಿದ್ದ ಮಹಿಳೆಯರ ವೀಡಿಯೋ ಮಾಡುತ್ತಿದ್ದ ಕಾಮುಕ ವೈದ್ಯ | ಕೊನೆಗೂ ಪೊಲೀಸ್ ಬಲೆಗೆ!

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನಂಪ್ರತಿ ಹೆಚ್ಚುತ್ತಿದ್ದು, ಅದರಲ್ಲೂ ಕೂಡ ಹೆಣ್ಣೆಂದರೆ ತಮಗೆ ಬೇಕಾದಂತೆ ಆಟವಾಡಿಸುವ ಗೊಂಬೆಗಳಂತೆ ಬಳಸಿಕೊಂಡು, ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡುವ ವಿಕೃತ ಕಾಮಿ ವ್ಯಕ್ತಿತ್ವದವರು ಕೂಡ ನಮ್ಮ ನಡುವೆ ಇದ್ದಾರೆ. ಹಾಗೆಂದು ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಅಳೆಯಲಾಗದು. ಆದರೆ, ಮತ್ತೊಬ್ಬರ ಜೀವ ಉಳಿಸುವ ವೈದ್ಯನೇ ಮತೊಬ್ಬರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದ್ದ ಘಟನೆಯೊಂದು ಮುನ್ನಲೆಗೆ ಬಂದಿದೆ.

ಹೌದು!! ಚಿಕಿತ್ಸೆ ಹೆಸರಲ್ಲಿ ವಿಕೃತಿ ಮೆರೆಯುತ್ತಿದ್ದ ಸೈಕೋ ವೈದ್ಯನೊಬ್ಬ ಮಹಿಳೆಯರ ಜತೆಗೆ ಅಶ್ಲೀಲವಾಗಿ ವರ್ತಿಸಿ, ಆಂಧ್ರಕ್ಕೆ ಪರಾರಿಯಾಗಿರುವ ಘಟನೆ ನಡೆದಿದೆ. ಆಸ್ಪತ್ರೆಗೆ ಬರುವ ಮಹಿಳೆಯರ ವಿಡಿಯೋ ಕದ್ದು ಚಿತ್ರೀಕರಿಸುತ್ತಿದ್ದ ಈತನ ದುರ್ವರ್ತನೆ ಯುವತಿಯೊಬ್ಬರ ಸಮಯಪ್ರಜ್ಞೆಯಿಂದ ಬೆಳಕಿಗೆ ಬಂದಿದ್ದು, ಯಶವಂತಪುರದ ಮತ್ತಿಕೆರೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದ ವೆಂಕಟರಮಣ ಎಂಬ ವೈದ್ಯ ನ್ಯಾಚುರೋಪಥಿ ಮತ್ತು ಅಕ್ಯೂಪಂಕ್ಚರ್ ಚಿಕಿತ್ಸೆ ನೀಡುತ್ತಿದ್ದ ಎನ್ನಲಾಗಿದೆ.

ಕಾಲು ನೋವು ಎಂದು ಚಿಕಿತ್ಸೆಗೆ ಬಂದಿದ್ದ ಮಹಿಳೆ ಜತೆ ಚಿಕಿತ್ಸೆ ನೆಪದಲ್ಲಿ ಅನುಚಿತವಾಗಿ ನಡೆದುಕೊಂಡಿದ್ದು, ಖಾಸಗಿ ಅಂಗಗಳಿಗೂ ಇಂಜೆಕ್ಷನ್ ನೀಡಲು ಮುಂದಾಗಿದ್ದ ಎನ್ನಲಾಗಿದೆ. ಟ್ರಿಟ್ಮೆಂಟ್ ಹೆಸರಲ್ಲಿ ಕಳ್ಳತನದಿಂದ ವಿಡಿಯೋ ಕೂಡ ರೆಕಾರ್ಡ್ ಮಾಡಿಕೊಂಡಿದ್ದು, ಇದು ಗೊತ್ತಾಗುತ್ತಿದ್ದಂತೆ ಯುವತಿ ಕುಟುಂಬಸ್ಥರ ಬಳಿ ದೂರಿದ್ದಾಳೆ.

ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಯುವತಿಯ ಮನೆಯವರು ದೂರು ದಾಖಲಿಸಿದ್ದಾರೆ.ಹಾಗಾಗಿ, ವೈದ್ಯನ ವಿರುದ್ಧ ಐಪಿಸಿ 354c ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆಯೆ ವೈದ್ಯ ಆಂಧ್ರಪ್ರದೇಶಕ್ಕೆ ಪರಾರಿಯಾಗಿ ತಲೆ ಮರೆಸಿಕೊಂಡಿದ್ದಾನೆ. ಈ ಪ್ರಕರಣ ಯಶವಂತಪುರ ಪೊಲೀಸರಿಂದ ಸಿಸಿಬಿಗೆ ವರ್ಗಾವಣೆಯಾಗಿದ್ದು, ಸಿಸಿಬಿ ಪೊಲೀಸರು ಆತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಸಿಸಿಬಿ ಪೊಲೀಸರು ವೈದ್ಯ ವೆಂಕಟರಮಣನ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ, ಈತ ಮೊಬೈಲ್‌ನಲ್ಲಿ ಹಲವು ಮಹಿಳೆಯರ ವಿಡಿಯೋ ಮಾಡಿದ್ದು ಬಹಿರಂಗವಾಗಿದ್ದು, ಚಿಕಿತ್ಸೆ ವೇಳೆ ಕದ್ದು ರೆಕಾರ್ಡ್ ಮಾಡಿರುವ ಇಂಥ ಹಲವಾರು ವಿಡಿಯೋಗಳು ಪತ್ತೆಯಾಗಿವೆ.

ಈ ಬಗ್ಗೆ ರೋಗಿಗಳು ಪ್ರಶ್ನೆ ಮಾಡಿದರೆ ಚಿಕಿತ್ಸೆ ಕೊಡುವಾಗ ಕಾಯಿಲೆಯ ಮೂಲವನ್ನು ಹುಡುಕಬೇಕು ಎನ್ನುತ್ತಿದ್ದ ಎನ್ನಲಾಗಿದ್ದು ಚಿಕಿತ್ಸೆ ಬೇಕಾದರೆ ಪಡೆಯಿರಿ ಇಲ್ಲವಾದರೆ ಹೊರಡಿ ಎಂದು ಕೂಡ ದರ್ಪ ತೋರಿಸುತ್ತಿದ್ದ ಎನ್ನಲಾಗಿದೆ. ಈ ಕೃತ್ಯವನ್ನು ಹಲವು ತಿಂಗಳಿಂದ ವೈದ್ಯ ಎಸಗುತ್ತಿದ್ದ ಎನ್ನಲಾಗಿದ್ದು, ಯಶವಂತಪುರ, ಬಸವನಗುಡಿ ಹಾಗೂ ಸಿಸಿಬಿ ಸೈಬರ್ ಸೆಲ್‌ನಲ್ಲಿಯೂ ಈಗ ದೂರುಗಳು ದಾಖಲಾಗಿ ತನಿಖೆ ನಡೆಯುತ್ತಿದ್ದು, ವೈದ್ಯನ ನಾಟಕದ ಇತಿಹಾಸ ಜಾಲಾಡುವಲ್ಲಿ ಖಾಕಿ ಪಡೆ ಮುಂದಾಗಿದೆ.

Leave A Reply

Your email address will not be published.