Nithyananda : ಉದ್ಯೋಗ ಬೇಕೆ? ನಿತ್ಯಾನಂದನ ಕೈಲಾಸದಲ್ಲಿದೆ ಭರ್ಜರಿ ಉದ್ಯೋಗವಕಾಶ, ಕೈತುಂಬಾ ಸಂಬಳ!

ಸದಾ ವಿವಾದಗಳಿಂದಲೇ ಸುದ್ದಿ ಮಾಡುತ್ತಿರುವ, ವಿವಾದಿತ ಸ್ವಯಂ ಘೋಷಿತ ಸ್ವಾಮೀಜಿ ನಿತ್ಯಾನಂದ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ನಿತ್ಯಾನಂದರ ಕೈಲಾಸ ದೇಶದಲ್ಲಿ ಭಾರೀ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎನ್ನುವ ಸುದ್ದಿ ಬಂದಿದೆ. “ಕಾಸಿದ್ರೆ ಕೈಲಾಸ” ಅನ್ನೋ ಮಾತಿದೆ. ಆದ್ರೆ ನಮ್ಮ ನಿತ್ಯಾನಂದರು “ಕಾಸೇ ಇಲ್ಲದಿದ್ದರೆ ಏನೂ? ಕೈಲಾಸಕ್ಕೆ ಬನ್ನಿ ನಾನೇ ನಿಮಗೆ ಕೈ ತುಂಬಾ ಕಾಸು, ಮಾಡೋದಕ್ಕೆ ಕೆಲಸ ಕೊಡ್ತೀನಿ” ಅಂದಿದ್ದಾರೆ!

ಹೌದು, ಕೈಲಾಸ ದೇಶದಲ್ಲಿ ಉದ್ಯೋಗಾವಕಾಶಗಳು ಬೇಕಾದಷ್ಟು ಇದೆಯಂತೆ. ಬೇರೆ ಬೇರೆ ರೀತಿಯ ಉದ್ಯೋಗಳಿದ್ದು, ಅರ್ಹರಿಂದ, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೆಲಸಕ್ಕೆ ಸೇರುವವರಿಗೆ ಕೆಲಸದ ಜೊತೆ ಆಕರ್ಷಕ ಸಂಬಳ, ವಸತಿ ಹಾಗೂ ವೈದ್ಯಕೀಯ ವ್ಯವಸ್ಥೆ ನೀಡಲಾಗುತ್ತದೆ ಅಂತ ಕೈಲಾಸದ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈ ಮೊದಲು ‘ಕೈಲಾಸ ದೇಶ’ ನಿರ್ಮಿಸಿದ್ದೀನಿ ಅಂತ ಹೇಳಿ ಸುದ್ದಿ ಮಾಡಿದ್ದರು. ಲ್ಯಾಟಿನ್ ಅಮೇರಿಕ ದೇಶವಾದ ಈಕ್ವೆಡಾರ್‌ನಲ್ಲಿ ನಿತ್ಯಾನಂದ, ಹಿಮಾಚ್ಛಾದಿತವಾದ ಖಾಸಗಿ ದ್ವೀಪ ಪ್ರದೇಶವನ್ನು ಖರೀದಿಸಿ ಇದು ನನ್ನ ದೇಶ ಎಂದು ಹೇಳಿಕೊಳ್ಳುತ್ತಿದ್ದಾನೆ. ಟ್ರಿನಿಡಾಡ್ ಮತ್ತು ಟೊಬ್ಯಾಗೊ ಪಟ್ಟಣಗಳಿಗೆ ಈ ದೇಶ ಬಲು ಸಮೀಪ. ಭೂಪಟದಲ್ಲಿ ಗಮನಿಸಿದರೆ, ಅಮೇರಿಕ ದೇಶದ ಕೆಳಭಾಗದಲ್ಲಿ ನಿತ್ಯಾನಂದನ ಹೊಸ ದೇಶ ಇದೆ. ಈ ದೇಶಕ್ಕೆ ‘ಕೈಲಾಸ’ ಎಂದು ಹೆಸರಿಟ್ಟಿದ್ದಾನೆ.

ತಾನೇ ನಿರ್ಮಿಸಿದ್ದೇನೆ ಎಂದು ಹೇಳಿ ಕೊಳ್ಳುವ ಕೈಲಾಸ ದೇಶದಲ್ಲಿ ಉದ್ಯೋಗಾವಕಾಶ ಇದೆಯಂತೆ. ಭಾರತದ ವಿವಿಧ ಕೈಲಾಸ ಶಾಖೆಗಳು ಉತ್ತಮ ಸಂಬಳದೊಂದಿಗೆ ಉದ್ಯೋಗಗಳನ್ನು ಒದಗಿಸುತ್ತಿವೆ ಎಂದು ಕೈಲಾಸ ದೇಶದ ಪ್ರಕಟಣೆ ತಿಳಿಸಿದೆ.

ಉದ್ಯೋಗಿಗಳು ಕೈಲಾಸದ ಭಾರತೀಯ ಶಾಖೆಯಲ್ಲಿ ಸೂಕ್ತ ವೇತನದೊಂದಿಗೆ, 1 ವರ್ಷದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಕೈಲಾಸಕ್ಕೆ ಸೇರಿದ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶಕ್ಕೆ ಹೋಗಬಹುದು. ನಿತ್ಯಾನಂದ ಹಿಂದೂ ವಿಶ್ವವಿದ್ಯಾಲಯ, ಸಾಗರೋತ್ತರ ದೇವಾಲಯಗಳು, ಭಾರತದಲ್ಲಿನ ಕೈಲಾಸ ದೇವಾಲಯಗಳು, ಕೈಲಾಸ ಐಟಿ ವಿಭಾಗ, ಕೈಲಾಸ ವಿದೇಶಿ ರಾಯಭಾರ ಕಚೇರಿ, ಕೊಳಾಯಿ ಮತ್ತು ವಿದ್ಯುತ್ ಘಟಕ, ಗ್ರಂಥಾಲಯ ಸೇರಿದಂತೆ ಹಲವೆಡೆ ಕೆಲಸ ಖಾಲಿ ಇದೆಯಂತೆ.

ಉದ್ಯೋಗದ ಜೊತೆ ಕೈತುಂಬಾ ಸಂಬಳ, ವಾಸ್ತವ್ಯದ ಸೌಲಭ್ಯ, ಆಹಾರ, ವಸತಿ, ವೈದ್ಯಕೀಯ ವೆಚ್ಚವನ್ನು ಉಚಿತವಾಗಿ ನೀಡಿ, ಕೈಲಾಸದಲ್ಲಿ ಉದ್ಯೋಗ ನೀಡಲಾಗುತ್ತದೆ. ಆಸಕ್ತರು ಸಂಪರ್ಕಿಸಿ ಎಂದು ಸ್ವಾಮಿ ನಿತ್ಯಾನಂದ ಪ್ರಕಟಣೆ ಹೊರಡಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಿತ್ಯಾನಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದೂ, ಶ್ರೀಲಂಕಾದಲ್ಲಿ ವೈದ್ಯಕೀಯ ಆಶ್ರಯವನ್ನು ಕೋರಿದ್ದಾರೆ ಎನ್ನಲಾಗಿದೆ. ತನ್ನ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ತನ್ನ ಜೀವ ಅಪಾಯದಲ್ಲಿದೆಂದು, ನಿತ್ಯಾನಂದ ಸ್ವಾಮಿ ಶ್ರೀಲಂಕಾದ ಮೊರೆ ಹೋಗಿದ್ದಾರೆ ಅಂತ ಹೇಳಲಾಗುತ್ತಿದೆ.

Leave A Reply

Your email address will not be published.