ಫೋನ್‌ಪೇ ಅಪ್ಲಿಕೇಶನ್ ನಿಂದ ಗುಡ್ ನ್ಯೂಸ್ | ಇನ್ಮುಂದೆ ಬೇಕಾಗಿಲ್ಲ ಆಕ್ಟಿವೇಟ್ ಗೆ ಡೆಬಿಟ್ ಕಾರ್ಡ್!
ಹಿಂದಿನ ದಿನಗಳಲ್ಲಿ ಮನೆಯಿಂದ ಎಲ್ಲಿಗಾದರೂ ಹೊರಹೋಗಬೇಕಾದರೆ ಜೊತೆಯಲ್ಲಿ ಹಣವನ್ನು ಕಡ್ಡಾಯವಾಗಿ ಇಟ್ಟುಕೊಂಡು ಹೋಗಲಾಗುತ್ತಿತ್ತು. ಆದರೆ ಇದೀಗ ಕಾಲ ತುಂಬಾ ಬದಲಾಗಿದೆ. ಈಗೇನಿದ್ದರೂ ಕೆಲವೇ ಸೆಕೆಂಡುಗಳ ಅಂತರದಲ್ಲಿ ಹಣ ವರ್ಗಾವಣೆ ಮಾಡುವ ಕಾಲ. ಇಂದು ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಪ್ರತಿಯೊಬ್ಬರೂ ಕೂಡ ಆನ್‌ಲೈನ್ ಪಾವತಿಯನ್ನು ಸ್ವೀಕರಿಸುತ್ತಾರೆ. ಡಿಜಿಟಲ್ ಇಂಡಿಯಾದಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ತಂತ್ರಜ್ಞಾನದ ಹೊಸ ಯುಗ ಪ್ರಾರಂಭವಾಗಿದೆ. ಯುಪಿಐ ಮೂಲಕ ಎಲ್ಲ ರೀತಿಯ ಹಣಕಾಸು ವ್ಯವಹಾರ, ಬ್ಯಾಂಕಿನ ವ್ಯವಹಾರ ತುಂಬಾ ಸುಲಭವಾಗಿದೆ. ಸ್ಮಾರ್ಟ್ ಫೋನ್ ಗಳ ಮೂಲಕ ಹಣ ವರ್ಗಾವಣೆ, ಬಿಲ್ ಪಾವತಿ ಮತ್ತು ಸ್ವೀಕೃತಿಯನ್ನು ಇದು ತುಂಬಾ ಸುಲಭಗೊಳಿಸಿದೆ.
ಫೋನ್‌ಪೇ ಸೇರಿದಂತೆ ಯಾವುದೇ ಯುಪಿಐ ಪಾವತಿ ಆಧಾರಿತ ಅಪ್ಲಿಕೇಶನ್ ಆಕ್ಟಿವೇಟ್ ಮಾಡುವಾಗ ಡೆಬಿಟ್ ಕಾರ್ಡ್ ಅವಶ್ಯಕವಾಗಿತ್ತು. ಇದೇ ಕಾರಣಕ್ಕೆ ಡೆಬಿಟ್ ಕಾರ್ಡ್ ಅನ್ನು ಹೊಂದಿರದ ಬ್ಯಾಂಕ್ ಖಾತೆ ಹೊಂದಿರುವ ಬಳಕೆದಾರರು ಯುಪಿಐ ಪಾವತಿ ಅಪ್ಲಿಕೇಶನ್ ಬಳಸಲು ಸಾಧ್ಯವಾಗಿರಲಿಲ್ಲ. ಇದನ್ನೇ ಗಮನದಲ್ಲಿಟ್ಟುಕೊಂಡು ಫೋನ್‌ಪೇ ಅಪ್ಲಿಕೇಶನ್ ಗುಡ್ ನ್ಯೂಸ್ ನೀಡಿದ್ದು, ಇದೀಗ ಆಧಾರ್ ಆಧಾರಿತ ಯುಪಿಐ ಅಪ್ಲಿಕೇಶನ್‌ಗೆ ಪ್ರವೇಶ ನೀಡಲು ಅವಕಾಶ ನೀಡಿದೆ. ಹೌದು. ಡೆಬಿಟ್ ಕಾರ್ಡ್ ಇಲ್ಲದೇ ಯುಪಿಐ ಆಕ್ಟಿವೇಟ್ ಮಾಡಲು ಸಾಧ್ಯವಾಗದವರಿಗೆ ಹೊಸ ನಿಯಮವನ್ನು ಪರಿಚಯಿಸಿದ್ದು, ಸಾಕಷ್ಟು ಮಂದಿಗೆ ಅನುಕೂಲ ಮಾಡಿಕೊಟ್ಟಿದೆ.
ಇದಕ್ಕಾಗಿ ಇನ್ಮುಂದೆ ಡೆಬಿಟ್ ಕಾರ್ಡ್ ಬದಲಿಗೆ ಆಧಾರ್ ಸಂಖ್ಯೆಯ ಮೂಲಕ ಕೂಡ ಫೋನ್‌ಪೇ ಆಕ್ಟಿವ್ ಮಾಡುವುದಕ್ಕೆ ಅವಕಾಶ ನೀಡಿದೆ. ಇದು ಮುಂದಿನ ದಿನಗಳಲ್ಲಿ ಡೆಬಿಟ್ ಕಾರ್ಡ್ ಹೊಂದಿಲ್ಲದ ಬಳಕೆದಾರರು ಫೋನ್‌ಪೇ ಬಳಸುವುದಕ್ಕೆ ಸಾಧ್ಯವಾಗಲಿದೆ. ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಯುಪಿಐ ಐಡಿ ಆಕ್ಟಿವೇಟ್ ಮಾಡಲು ಇನ್ಮುಂದೆ ನೀವು ಆಧಾರ್ ಆಧಾರಿತ ಒಟಿಪಿಯನ್ನು ಬಳಸಬಹುದಾಗಿದೆ. ಆಧಾರ್ ಸಂಖ್ಯೆಯ ಮೂಲಕ UPI ಆಕ್ಟಿವೇಟ್ ಮಾಡಲು ಅವಕಾಶ ಮಾಡಿಕೊಟ್ಟ ಮೊದಲ UPI ಅಪ್ಲಿಕೇಶನ್ ಫೋನ್‌ಪೇ ಆಗಿದೆ. ಇದರಿಂದ ಭಾರತದಲ್ಲಿ ಡೆಬಿಟ್ ಕಾರ್ಡ್ ಹೊಂದಿಲ್ಲದವರು ಕೂಡ ಯುಪಿಐ ಅಪ್ಲಿಕೇಶನ್ ಬಳಸಲು ಸಾಧ್ಯವಾಗಲಿದೆ.
ಫೋನ್‌ಪೇ ಹೊಸದಾಗಿ ಜಾರಿಗೆ ತಂದಿರುವ ಆಧಾರ್ ಆಧಾರಿತ ಒಟಿಪಿ ಮೂಲಕ ಯುಪಿಐ ಆಕ್ಟಿವೇಟ್ ಮಾಡುವ ವಿಧಾನದಲ್ಲಿ, ಆಧಾರ್ ಇ-ಕೆವೈಸಿ ಫ್ಲೋ ಅನ್ನು ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಯುಪಿಐ ಆನ್‌ಬೋರ್ಡಿಂಗ್ ಮಾಡಲು ಬಳಸಲಾಗುತ್ತದೆ. ಈ ಆಯ್ಕೆಯನ್ನು ಆರಿಸಿಕೊಳ್ಳುವ ಬಳಕೆದಾರರು ಫೋನ್‌ಪೇನಲ್ಲಿ ಆನ್‌ಬೋರ್ಡಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ತಮ್ಮ ಆಧಾರ್ ಸಂಖ್ಯೆಯ ಕೊನೆಯ 6 ಅಂಕೆಗಳನ್ನು ಮಾತ್ರ ನಮೂದಿಸಬೇಕಾಗುತ್ತದೆ.
ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿದ ನಂತರ ದೃಢೀಕರಣ ಪ್ರಕ್ರಿಯೆಗಾಗಿ UIDAI ಮತ್ತು ಸಂಬಂಧಿತ ಬ್ಯಾಂಕ್‌ನಿಂದ OTP ಬರಲಿದೆ. ಒಟಿಪಿಯನ್ನು ಫೋನ್‌ಪೇಯಲ್ಲಿ ನಮೂದಿಸುವ ಮೂಲಕ ಫೋನ್‌ಪೇ ಯುಪಿಐ ಆಕ್ಟಿವೇಟ್ ಮಾಡಬಹುದಾಗಿದೆ. ನಂತರ ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಪಾವತಿಗಳು ಮತ್ತು ಬ್ಯಾಲೆನ್ಸ್ ಚೆಕ್‌ಗಳಂತಹ ಎಲ್ಲಾ UPI ಫೀಚರ್ಸ್ಗಳನ್ನು ಪ್ರವೇಶಿಸಲು ಸಾಧ್ಯವಾಗಲಿದೆ.